ADVERTISEMENT

ಜಾತಿ ಪದ್ಧತಿಯಿಂದ ದೇಶ ಹಾಳು: ಎಸ್.ಜಿ.ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 9 ಜೂನ್ 2021, 18:57 IST
Last Updated 9 ಜೂನ್ 2021, 18:57 IST
ಎಸ್.ಜಿ.ಸಿದ್ಧರಾಮಯ್ಯ
ಎಸ್.ಜಿ.ಸಿದ್ಧರಾಮಯ್ಯ   

ಬೆಂಗಳೂರು: ‘ದೇಶದಲ್ಲಿ ಬೇರು ಬಿಟ್ಟಿರುವ ಜಾತಿ ಪದ್ಧತಿ ಗೆದ್ದಲು ಉಳುವಿನಂತೆ ಇಡೀ ದೇಶವನ್ನೇ ಹಾಳು ಮಾಡುತ್ತಿದೆ’ ಎಂದು ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಆತಂಕ ವ್ಯಕ್ತಪಡಿಸಿದರು.

ದಲಿತ ಚೇತನ ಪ್ರೊ.ಬಿ.ಕೃಷ್ಣಪ್ಪ ಅವರ 84ನೇ ಜನ್ಮದಿನದ ಅಂಗವಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಬುಧವಾರ ಏರ್ಪಡಿಸಿದ್ದ ಅಸಮಾನತೆ ಮುಕ್ತ-ಸೌಹಾರ್ದ ಭಾರತಕ್ಕಾಗಿ ಸಂಕಲ್ಪದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಜಾತಿ ಮುಕ್ತ ಬಹುತ್ವ ಭಾರತ ನಿರ್ಮಾಣ ಮಾಡಲು ನೈತಿಕ ಎಚ್ಚರ ಇರಬೇಕು. ಅಂಬೇಡ್ಕರ್ ಚಿಂತನೆಗಳನ್ನು ಆಳವಾಗಿ ಅಳವಡಿಸಿಕೊಳ್ಳಬೇಕು. ಆದರೆ, ಕೆಲ ಅಕ್ಷರಸ್ಥರು ವ್ಯವಸ್ಥೆಯ ಪರವಾಗಿದ್ದುಕೊಂಡು ಚಳವಳಿಗಳನ್ನು ನಾಶ ಮಾಡುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್ ಮಾತನಾಡಿ, ‘ಕೃಷ್ಣಪ್ಪ ಅವರ ಇಡೀ ಜೀವನ ಹೋರಾಟ ಮತ್ತು ಸಂಘರ್ಷದಿಂದ ಕೂಡಿತ್ತು. ಅವರ ಚಿಂತನೆ ಮತ್ತು ಹೋರಾಟದ ಮಾರ್ಗವನ್ನು ನಾವು ಅಳವಡಿಸಿಕೊಳ್ಳಬೇಕು’ ಎಂದು ತಿಳಿಸಿದರು.

‘ಸಂವಿಧಾನವನ್ನು ಉಳಿಸಿಕೊಳ್ಳುವ ದೊಡ್ಡ ಸವಾಲು ನಮ್ಮ ಮುಂದಿದೆ. ನ್ಯಾಯಾಲಯಗಳ ತೀರ್ಪು ಸಹ ಇಂದು ಆತಂಕಕಾರಿ ಆಗಿದೆ. ಈ ಸಂದರ್ಭದಲ್ಲಿ ಹಿರಿಯರ ಮಾರ್ಗದರ್ಶನದಲ್ಲಿ ಮುನ್ನಡೆಯುವ ಅಗತ್ಯವಿದೆ’ ಎಂದರು. ಇಂದಿರಾ ಕೃಷ್ಣಪ್ಪ, ರುದ್ರಪ್ಪ ಹನಗವಾಡಿ, ಮಲ್ಲೇಶ್ ಅಂಬುಗ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.