ADVERTISEMENT

‘ಕನ್ನಡಿಗರಿಗೆ ಉದ್ಯೋಗ: ಸತತ ಹೋರಾಟ’

​ಪ್ರಜಾವಾಣಿ ವಾರ್ತೆ
Published 8 ಮೇ 2019, 19:36 IST
Last Updated 8 ಮೇ 2019, 19:36 IST

ಬೆಂಗಳೂರು: ‘ಕನ್ನಡಿಗರಿಗೆ ಉದ್ಯೋಗ ಕೊಡಿಸುವ ವಿಷಯದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸತತವಾಗಿ ಹೋರಾಟ ನಡೆಸಿಕೊಂಡು ಬಂದಿದೆ’ ಎಂದು ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ. ಸಿದ್ಧರಾಮಯ್ಯ ಹೇಳಿದರು.

‘ಕನ್ನಡಿಗರ ಹಿತ ರಕ್ಷಣೆಯ ಸಲುವಾಗಿ ಡಾ. ಸರೋಜಿನಿ ಮಹಿಷಿ ವರದಿ ಆಧರಿಸಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ರಚನೆಯಾಯಿತು. ಆದರೆ, ಮೂಲ ಉದ್ದೇಶವನ್ನೇ ಪ್ರಾಧಿಕಾರ ಮರೆತುಬಿಟ್ಟಿದೆ’ ಎಂದು ಕನ್ನಡಿಗರ ಉದ್ಯೋಗ ವೇದಿಕೆ ಸಂಸ್ಥಾಪಕಿ ವಿನುತಾ ಮೂಲಾ ಆರೋಪಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ‘ಕನ್ನಡಿಗರಿಗೆ ಉದ್ಯೋಗ ದೊರಕಿಸಿಕೊಡಲು ಪ್ರಾಧಿಕಾರ ಯಾವ ರೀತಿಯ ಹೋರಾಟ ನಡೆಸುತ್ತಿದೆ ಎಂಬುದರ ಬಗ್ಗೆ ಅರಿವಿಲ್ಲದವರು ಮಾಡಿರುವ ಆರೋಪ ಇದಾಗಿದೆ’ ಎಂದರು.

ADVERTISEMENT

‘ಕೇಂದ್ರ ಸರ್ಕಾರದ ಕಚೇರಿಗಳು, ಅದರ ಸ್ವಾಯತ್ತ ಸಂಸ್ಥೆಗಳು, ಕಾರ್ಖಾನೆಗಳಲ್ಲಿ ಕನ್ನಡಿಗರಿಗೆ ಆದ್ಯತೆ ಕೊಡಿಸಲು ಮೂರು ಬಾರಿ ದೆಹಲಿಗೆ ನಿಯೋಗ ತೆರಳಿ ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಲು ಪ್ರಯತ್ನಿಸಲಾಗಿದೆ. ಈ ಸಂಬಂಧ ಸಂಸದರಿಗೆ ಹಲವು ಬಾರಿ ಪತ್ರ ಬರೆದಿದ್ದೇವೆ’ ಎಂದು ಹೇಳಿದರು.

‘ರಾಜ್ಯ ಸರ್ಕಾರಕ್ಕೂ ನಿರಂತರವಾಗಿ ಪತ್ರ ಬರೆದಿದ್ದೇವೆ. ಅಷ್ಟೇ ಅಲ್ಲದೆ, ಪರಿಷ್ಕೃತ ವರದಿಗಳನ್ನೂ ನೀಡಿದ್ದೇವೆ. ಬೆಸ್ಕಾಂನಲ್ಲಿ ನೇಮಕಾತಿ ಸಂದರ್ಭದಲ್ಲಿ ಹೊರ ರಾಜ್ಯದವರಿಗೆ ಅನುಕೂಲ ಆಗುವಂತೆ ಇದ್ದ ಪ್ರಶ್ನೆ ಪತ್ರಿಕೆ ರದ್ದುಗೊಳಿಸಲು ಪತ್ರ ಬರೆದಿದ್ದೇವೆ. ಅಲ್ಲದೇ, ಮುಖ್ಯ ಕಾರ್ಯದರ್ಶಿಯವರ ಗಮನಕ್ಕೆ ತಂದು ಬೆಸ್ಕಾಂಗೆ ಸೂಚನೆ ಕೊಡಿಸಿದ್ದೇವೆ. ನೇಮಕಾತಿಗಳಲ್ಲಿ ಕನ್ನಡಿಗರ ಪರವಾಗಿ ಪ್ರಾಧಿಕಾರ ನಿರಂತರವಾಗಿ ಕಣ್ಗಾವಲು ನಡೆಸುತ್ತಿದೆ ಎಂಬುದಕ್ಕೆ ಇದು ಉದಾಹರಣೆ’ ಎಂದರು.

‘ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನದ ಸ್ವಾಯತ್ತತೆಗಾಗಿ ಪ್ರಾಧಿಕಾರ ಹೋರಾಡಿದೆ.ತಮಿಳಿಗೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ದೊರೆತ ಬಳಿಕ ಭಾಷೆ ಅಧ್ಯಯನಕ್ಕೆ ಅಳವಡಿಸಿಕೊಂಡಿರುವ ಮಾದರಿಯನ್ನು ಅಧ್ಯಯನ ನಡೆಸಿ ನಮ್ಮಲ್ಲೂ ಅದನ್ನೇ ಅಳವಡಿಸಿಕೊಳ್ಳಲು ಪ್ರಾದೇಶಿಕ ನಿರ್ದೇಶಕರನ್ನು ತಮಿಳುನಾಡಿಗೆ ಕರೆದೊಯ್ದಿದ್ದೆವು. ಪ್ರಾಧಿಕಾರ ಕನ್ನಡಿಗರ ಪರವಾಗಿ ಏನೆಲ್ಲಾ ಕೆಲಸಗಳನ್ನು ಮಾಡುತ್ತಿದೆ ಎಂಬುದನ್ನು ‘ಕನ್ನಡ ಜಾಗೃತಿ’ ಪತ್ರಿಕೆಯಲ್ಲಿ ದಾಖಲಿಸುತ್ತಾ ಬಂದಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.