
ಬೆಂಗಳೂರು: ‘ಬೆಂಗಳೂರಿನಲ್ಲಿ 1,000 ವಿದ್ಯಾರ್ಥಿನಿಯರಿಗೆ ವಸತಿ ಕಲ್ಪಿಸುವ ಸಾಮರ್ಥ್ಯದ ವಿದ್ಯಾರ್ಥಿನಿಲಯ ನಿರ್ಮಿಸಬೇಕು ಎಂಬುದು ಶಾಮನೂರು ಶಿವಶಂಕರಪ್ಪ ಅವರ ಕನಸಾಗಿತ್ತು. ಅದನ್ನು ನನಸು ಮಾಡುತ್ತೇವೆ’ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಮಹಾ ಪ್ರಧಾನ ಕಾರ್ಯದರ್ಶಿ ಈಶ್ವರ ಬಿ.ಖಂಡ್ರೆ ಹೇಳಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾವು ನಗರದ ತರಳಬಾಳು ಭವನದಲ್ಲಿ ಆಯೋಜಿಸಿದ್ದ ಶಾಮನೂರು ಶಿವಶಂಕರಪ್ಪ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ‘ವಿದ್ಯಾರ್ಥಿನಿಲಯ ಸ್ಥಾಪನೆಗೆ ಈಗಾಗಲೇ ಎರಡು ಎಕರೆ ಜಮೀನು ಖರೀದಿಸಲಾಗಿದ್ದು, ಕಟ್ಟಡದ ರೂಪುರೇಷೆ ಸಿದ್ಧವಾಗಿದೆ’ ಎಂದು ಅವರು ಮಾಹಿತಿ ನೀಡಿದರು.
‘ನಮ್ಮೆಲ್ಲರಿಂದ ಅಪ್ಪಾಜಿ ಎಂದೇ ಕರೆಯಿಸಿಕೊಳ್ಳುತ್ತಿದ್ದ ಶಾಮನೂರು ಆಡಳಿತ ಪಕ್ಷದಲ್ಲೇ ಇರಲಿ, ವಿರೋಧ ಪಕ್ಷದಲ್ಲೇ ಇರಲಿ, ಯಾರಿಗೂ ಅಂಜದೆ ನಿಷ್ಠುರವಾಗಿ ಮಾತನಾಡುತ್ತಿದ್ದರು. ಸಮಾಜದ ಹಿತ ಕಾಯುವುದಷ್ಟೇ ಅವರಿಗೆ ಮುಖ್ಯವಾಗಿತ್ತು’ ಎಂದರು.
ತುಮಕೂರಿನ ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರು, ‘ಶಾಮನೂರು ಶಿವಶಂಕರಪ್ಪ ಅವರು ಉದ್ಯಮಿಯಾಗಿ, ಶಾಸಕರಾಗಿ, ಸಚಿವರಾಗಿ ಈ ಸಮಾಜಕ್ಕೆ ಮಹತ್ತರ ಕೊಡುಗೆ ನೀಡಿದ್ದಾರೆ. ಶಿಕ್ಷಣ, ಉದ್ಯಮ, ರಾಜಕೀಯ ಕ್ಷೇತ್ರ ಒಳಗೊಂಡು ದಾವಣಗೆರೆ ಜಿಲ್ಲೆಯನ್ನು ವಿಶ್ವದ ಭೂಪಟದಲ್ಲಿ ಕಾಣುವಂತೆ ಮಾಡಿದರು’ ಎಂದು ಹೇಳಿದರು.
ಸುತ್ತೂರು ಸಂಸ್ಥಾನದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ಮಾತನಾಡಿ, ‘ಕೈಗಾರಿಕಾ ನಗರವಾಗಿದ್ದ ದಾವಣಗೆರೆಯನ್ನು ಶಿಕ್ಷಣ ಕಾಶಿಯಾಗಿ ಪರಿವರ್ತಿಸಿದ ಕೀರ್ತಿ ಶಾಮನೂರು ಶಿವಶಂಕರಪ್ಪ ಅವರಿಗೆ ಸಲ್ಲುತ್ತದೆ’ ಎಂದು ತಿಳಿಸಿದರು.
ಸಂಸದ ಬೊಮ್ಮಾಯಿ ಅವರು ಮಾತನಾಡಿ, ‘ಭವಿಷ್ಯದಲ್ಲಿ ವೀರಶೈವ– ಲಿಂಗಾಯತ ಸಮಾಜದ ಸಾಮಾಜಿಕ ರಾಜಕೀಯ ಸವಾಲುಗಳನ್ನು ನಿಭಾಯಿಸಲು, ಮಹಾಸಭೆ ಅಡಿಯಲ್ಲಿ ಎಲ್ಲರೂ ಸೇರಿ ಕೆಲಸ ಮಾಡಿದಾಗ ಮಾತ್ರ ಶಾಮನೂರು ಶಿವಶಂಕರಪ್ಪ ಅವರಿಗೆ ನಿಜವಾದ ಶ್ರದ್ದಾಂಜಲಿ ಸಲ್ಲಿಸಿದಂತಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.