ಬೆಂಗಳೂರು: ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನೀಡುವ ‘ಸಮಾಜವಾದಿ ಧುರೀಣ ಶಾಂತವೇರಿ ಗೋಪಾಲಗೌಡ ಸ್ಮಾರಕ ಪ್ರಶಸ್ತಿ’ಗೆ ರಾಮನಗರದ ಚನ್ನಪಟ್ಟಣ ತಾಲ್ಲೂಕಿನ ಅರಳಾಳುಸಂದ್ರ ಗ್ರಾಮದ ರೈತ ಹೋರಾಟಗಾರ್ತಿ ಅನುಸೂಯಮ್ಮ ಆಯ್ಕೆಯಾಗಿದ್ದಾರೆ.
ಬಿಡದಿಯ ಮೈಕೊ ಕನ್ನಡ ಬಳಗದ ಸಹಯೋಗದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಪ್ರಶಸ್ತಿಯು ₹10 ಸಾವಿರ ನಗದು ಹಾಗೂ ಫಲಕ ಒಳಗೊಂಡಿದೆ.
‘ಅನುಸೂಯಮ್ಮ ಅವರು 70ರ ದಶಕದಲ್ಲಿ ಸ್ಥಳೀಯವಾಗಿ ಗೇಣಿದಾರರ ಹೋರಾಟವನ್ನು ರೂಪಿಸಿದ್ದರು. ಬಳಿಕ ರೈತ ಚಳವಳಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು. ಸಮಾಜವಾದಿ ಚಳವಳಿಯ ರೂವಾರಿ ರಾಮಮನೋಹರ ಲೋಹಿಯಾ ಅವರ ಚಿಂತನೆಗಳಿಂದ ಸ್ಥಾಪಿತವಾದ ‘ಸಮತಾ ವಿದ್ಯಾಲಯ’ದ ಸ್ಥಾಪಕ ಟ್ರಸ್ಟಿಯಾಗಿಯೂ ಕಾರ್ಯನಿರ್ವಹಿಸಿದ್ದರು. ಅವರು ಎಲ್ಲಿಯೇ ಅನ್ಯಾಯ ನಡೆದರೂ ಅದನ್ನು ದಿಟ್ಟವಾಗಿ ಎದುರಿಸುವ ಹಾಗೂ ಅನ್ಯಾಯದ ವಿರುದ್ಧ ಹೋರಾಟ ರೂಪಿಸುವ ಮನೋಧರ್ಮದವರಾಗಿದ್ದಾರೆ’ ಎಂದು ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಹಂ.ಗು. ರಾಜೇಶ್ ತಿಳಿಸಿದ್ದಾರೆ.
‘ಫೆ.4ರಂದು ಬೆಳಿಗ್ಗೆ 10 ಗಂಟೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಶತಮಾನೋತ್ಸದ ಕಟ್ಟಡದ ಅಕ್ಕಮಹಾದೇವಿ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಭಾರತ್ ಸ್ಕೌಟ್ ಮತ್ತು ಗೈಡ್ಸ್ ಕರ್ನಾಟಕದ ಆಯುಕ್ತ ಪಿ.ಜಿ.ಆರ್. ಸಿಂಧ್ಯ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ. ಪ್ರಕಾಶಮೂರ್ತಿ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ’ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.