ಬೆಂಗಳೂರು: ‘ಹಿಂಸೆ, ಕೊಲೆ-ಸುಲಿಗೆ ತುಂಬಿರುವ ಜಗತ್ತಿನಲ್ಲಿ ಜನ್ನ ಕವಿ ಬರೆದಿರುವ ಯಶೋಧರ ಚರಿತೆ ಅಹಿಂಸೆಯನ್ನೇ ಮೂಲವಾಗಿ ಪ್ರತಿಪಾದಿಸುವ ಬಹು ಮುಖ್ಯ ಕೃತಿ’ ಎಂದು ನಿವೃತ್ತ ಪ್ರಾಧ್ಯಾಪಕ ಶಾಂತಿನಾಥ ದಿಬ್ಬದ ತಿಳಿಸಿದರು.
ಬೆಂಗಳೂರು ಸೆಂಟ್ರಲ್ ಜೈನ ಮಿಲನ್ ಸಂಸ್ಥೆ ಜಯನಗರದ ಶ್ರೀ ಚಕ್ರೇಶ್ವರಿ ಮಹಿಳಾ ಸಮಾಜದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜೈನ ಸಾಹಿತ್ಯ ಸಿರಿ ತಿಂಗಳ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
‘ಅಹಿಂಸೆ ಕೇವಲ ಮಾನವ ಜನ್ಮಕ್ಕೆ ಮಾತ್ರ ಸಂಬಂಧಿಸಿದ್ದಲ್ಲ. ಅದು ಇಡೀ ಜೀವಸಂಕುಲಕ್ಕೆ ಅನ್ವಯಿಸುವಂತಹದ್ದು. ಜನ್ನನ ಈ ಕಾವ್ಯದಲ್ಲಿ ಮನಪರಿವರ್ತನೆಗೆ ಕಾಲಲಬ್ದಿ ಬಹಳ ಮುಖ್ಯ ಎಂದು ತಿಳಿಸಿದ್ದಾನೆ. ಕೊಂದರಷ್ಟೇ ಹಿಂಸೆಯಲ್ಲ, ಕೊಲ್ಲುತ್ತೇನೆ ಎಂದು ಯೋಚಿಸಿದರೂ ಅದೂ ಹಿಂಸೆಯೇ ಎಂಬ ಸಂದೇಶವನ್ನು ಈ ಕಾವ್ಯ ತಿಳಿಸುತ್ತದೆ’ ಎಂದು ಹೇಳಿದರು.
ನಿವೃತ್ತ ಅಧಿಕಾರಿ ಪಿ. ರತ್ನಾಕರ ಮಾತನಾಡಿ, ‘ಜನ್ನ ತನ್ನ ಕಾಲಘಟ್ಟದಲ್ಲಿ ಎರಡೂ ಧಾರ್ಮಿಕ ಕಾವ್ಯಗಳನ್ನು ಬರೆದು ಆ ಮೂಲಕ ಜೈನಧರ್ಮದ ತತ್ವಗಳನ್ನು ತಿಳಿಸುವ ಪ್ರಯತ್ನ ಮಾಡಿದ. ಆ ತತ್ವಗಳು ನಮಗೆ ಮನದಟ್ಟಾಗಬೇಕು’ ಎಂದರು.
ಜೈನ್ ಮಿಲನ್ ಸೆಂಟ್ರಲ್ ಘಟಕದ ಅಧ್ಯಕ್ಷೆ ಮಮತಾ ಕಾಂತರಾಜ್, ಚಕ್ರೇಶ್ವರಿ ಮಹಿಳಾ ಸಮಾಜದ ಅಧ್ಯಕ್ಷೆ ನಾಗಶ್ರೀ ಮುಪ್ಪಾನೆ, ಜೈನ ಸಾಹಿತ್ಯ ಸಿರಿ ಸಂಚಾಲಕರಾದ ಪದ್ಮಿನಿ ನಾಗರಾಜು, ಬ್ರಾಹ್ಮಿಲ ಮದನ್, ಪ್ರತಿಭಾ ರತ್ನಾಕರ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.