ADVERTISEMENT

ಶರಣ ಸಂಸ್ಕೃತಿ ಉತ್ಸವ: ‘ಉದ್ಯೋಗ ಹುಡುಕುವ ಬದಲು ಉದ್ಯಮಿಗಳಾಗಿ’

ಶರಣ ಸಂಸ್ಕೃತಿ ಉತ್ಸವದ ಸಮಾರೋಪದಲ್ಲಿ ಮುರುಘಾ ಶರಣರು ಮತ್ತು ಯಡಿಯೂರಪ್ಪ ಅವರ ಕಿವಿಮಾತು

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2018, 19:30 IST
Last Updated 30 ಡಿಸೆಂಬರ್ 2018, 19:30 IST
ನಗರದಲ್ಲಿ ಭಾನುವಾರ 'ಬಸವ ಕೇಂದ್ರ' ಆಯೋಜಿಸಿದ್ದ ಶರಣ ಸಂಸ್ಕೃತಿ ಉತ್ಸವದ ಸಮಾರೋಪದಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಬಿ.ಎಸ್ ಯಡಿಯೂರಪ್ಪ ‘ಶರಣ ಸಂಸ್ಕೃತಿ -2019’ ದಿನಚರಿ ಬಿಡುಗಡೆ ಮಾಡಿದರು. (ಎಡದಿಂದ) ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ, ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರು, ಕನಕಪುರದ ಮರಳೇಗವಿಮಠದ ಡಾ.‌ಮುಮ್ಮಡಿ ಶಿವರುದ್ರ ಸ್ವಾಮೀಜಿ ಮತ್ತು ಶೈಲಜಾ ಸೋಮಣ್ಣ ಇದ್ದರು
ನಗರದಲ್ಲಿ ಭಾನುವಾರ 'ಬಸವ ಕೇಂದ್ರ' ಆಯೋಜಿಸಿದ್ದ ಶರಣ ಸಂಸ್ಕೃತಿ ಉತ್ಸವದ ಸಮಾರೋಪದಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಬಿ.ಎಸ್ ಯಡಿಯೂರಪ್ಪ ‘ಶರಣ ಸಂಸ್ಕೃತಿ -2019’ ದಿನಚರಿ ಬಿಡುಗಡೆ ಮಾಡಿದರು. (ಎಡದಿಂದ) ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ, ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರು, ಕನಕಪುರದ ಮರಳೇಗವಿಮಠದ ಡಾ.‌ಮುಮ್ಮಡಿ ಶಿವರುದ್ರ ಸ್ವಾಮೀಜಿ ಮತ್ತು ಶೈಲಜಾ ಸೋಮಣ್ಣ ಇದ್ದರು   

ಬೆಂಗಳೂರು: ಉದ್ಯೋಗ ಹುಡುಕುವ ಬದಲು ಉದ್ಯೋಗದಾತರಾಗಿ, ಬಹುಮುಖಿ ಕೌಶಲ ಬೆಳೆಸಿಕೊಂಡು ಬದುಕಿನ ದಾರಿ ಕಂಡುಕೊಳ್ಳಿ. ಆತ್ಮಹತ್ಯೆ ಬದುಕಿನ ಆದರ್ಶ ಅಲ್ಲ...

–ಇದು ಚಿತ್ರದುರ್ಗ ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರು ಹಾಗೂ ವಿಧಾನಸಭೆ ವಿರೋಧ‍ಪಕ್ಷದ ನಾಯಕ ಬಿ.ಎಸ್‌.ಯಡಿಯೂರಪ್ಪ ಅವರು ಯುವಜನರಿಗೆ ಹೇಳಿದ ಕಿವಿಮಾತು.

ನಗರದಲ್ಲಿ ನಡೆದ ಶರಣ ಸಂಸ್ಕೃತಿ ಉತ್ಸವದ ಸಮಾರೋಪದಲ್ಲಿ ಮಾತನಾಡಿದ ಉಭಯರು ಸ್ವಾವಲಂಬಿ ಬದುಕಿನ ಆಶಯ ವ್ಯಕ್ತಪಡಿಸಿದರು.

ADVERTISEMENT

‘ರಾಜ್ಯದ 156 ತಾಲ್ಲೂಕುಗಳಲ್ಲಿ ಬರಗಾಲವಿದೆ. ರೈತರ ಆತ್ಮಹತ್ಯೆ ಮುಂದುವರಿದಿದೆ. ಇಂಥ ವಿಚಿತ್ರ ಪರಿಸ್ಥಿತಿಯನ್ನು ರಾಜ್ಯ ಎದುರಿಸುತ್ತಿದೆ. ಇದಕ್ಕೆ ಯಾರನ್ನು ದೂಷಿಸಿಯೂ ಪ್ರಯೋಜನವಿಲ್ಲ’ ಎಂದು ಮಾರ್ಮಿಕವಾಗಿ ನುಡಿದ ಯಡಿಯೂರಪ್ಪ, ‘ಕೆರೆ ಕಟ್ಟೆಗಳು ತುಂಬಿ, ಬೆಳೆಗೆ ಸರಿಯಾದ ಬೆಲೆ ಸಿಗುವವರೆಗೆ ಯಾರೂ ಕೃಷಿಯತ್ತ ಮುಖ ಮಾಡುವುದಿಲ್ಲ. ಹಳ್ಳಿಯ ಯುವಜನರು ಕೃಷಿಯಿಂದ ವಿಮುಖರಾಗಿ ನಗರಗಳಿಗೆ ಬಂದು ಉದ್ಯೋಗವಿಲ್ಲದೇ ಅಲೆಯುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

ಜ್ಞಾನ ಆಧಾರಿತ ಸಮಾಜ ಅಗತ್ಯ: ದೂರದರ್ಶನದ ಸಹಾಯಕ ನಿರ್ದೇಶಕಿ ನಿರ್ಮಲಾ ಸಿ. ಎಲಿಗಾರ್‌, ‘ನಾವು ಮಾಹಿತಿ ಸಮಾಜದಿಂದ ಜ್ಞಾನ ಆಧಾರಿತ ಸಮಾಜದತ್ತ ಹೋಗಬೇಕು. ಆಗ ಯಾವ ಎತ್ತರಕ್ಕೂ ಹೋಗಬಹುದು. ಯುವಶಕ್ತಿ, ಜ್ಞಾನ ಶಕ್ತಿ ಮತ್ತು ಅಧ್ಯಾತ್ಮಶಕ್ತಿ ಒಟ್ಟಾದಾಗ ಭಾರತ ವಿಶ್ವಗುರು ಆಗಲು ಸಾಧ್ಯ’ ಎಂದರು.

ಸಾಹಿತಿ ಜರಗನಹಳ್ಳಿ ಶಿವಶಂಕರ್‌, ‘ನಮಗೆ ಇಂದು ನಿರ್ಮಲ ಶಕ್ತಿ ಬೇಕಾಗಿದೆ. ಅದಕ್ಕಾಗಿ ಸೌರಶಕ್ತಿಯ ಪೂರ್ಣ ಬಳಕೆಯತ್ತ ಮನಸ್ಸು ಮಾಡಬೇಕಿದೆ’ ಎಂದರು. ಬೆಳ್ಳಂದೂರು ಕೆರೆಯನ್ನು ಉದಾಹರಿಸಿ ಮಾತನಾಡಿದ ಅವರು, ‘ಬೆಂಕಿ ಆರಿಸಬೇಕಾದ ನೀರಲ್ಲೇ ಬೆಂಕಿ ಕಾಣಿಸಿಕೊಂಡರೆ ಏನು ಮಾಡಬೇಕು’ ಎಂದು ಕಳವಳ ವ್ಯಕ್ತಪಡಿಸಿದರು.

ಐಟಿ –ಬಿಟಿ ಇಲಾಖೆ ನಿರ್ದೇಶಕ ಗಿರೀಶ್‌, ‘ಉದ್ಯಮ ಶೀಲತೆ ಮತ್ತು ಕೌಶಲ ಒಂದಕ್ಕೊಂದು ಸೇರಿದೆ. ನೀವೇ ಉದ್ಯಮಿಗಳಾಗಿ ಉದ್ಯೋಗ ಸೃಷ್ಟಿಸುವಂತಾಗಬೇಕು. ರಾಜ್ಯದಲ್ಲಿ ಅದಕ್ಕೆ ಪೂರಕವಾದ ನೀತಿ ಇದೆ’ ಎಂದು ತಿಳಿಸಿದರು.

ಕಾರ್ಯಕ್ರಮಕ್ಕೂ ಮುನ್ನ ಮಕ್ಕಳಿಂದ ಜನಪದ ನೃತ್ಯ ಪ್ರದರ್ಶನಗೊಂಡಿತು. ಪೂಜಾ ಮತ್ತು ಪ್ರತೀಕ್‌ ಆಚಾರ್ಯ ಅವರಿಂದ ನೆರಳು ಬೆಳಕಿನಾಟ ಪ್ರದರ್ಶನ ನಡೆಯಿತು. ಶರಣ ದಿನಚರಿ ಬಿಡುಗಡೆ ನಡೆಯಿತು.

ಭರವಸೆ ಕಳೆದುಕೊಳ್ಳದಿರಿ

ಬಹುಮುಖಿ ಸಂಸ್ಕೃತಿಯ ಜತೆಗೆ ಬಹುಮುಖಿ ಕೌಶಲ ಕಲಿಯಿರಿ. ಅವುಗಳ ಪೈಕಿ ಯಾವುದಾದರೂ ಒಂದು ಕೈ ಹಿಡಿಯುತ್ತದೆ. ಒಂದೇ ಕೆಲಸ, ಒಂದೇ ಹುದ್ದೆಗೆ ಅಂಟಿಕೊಂಡಾಗ ಮಾತ್ರ ಹತಾಶೆ ಕಾಡುತ್ತದೆ. ಯಾವುದೇ ಕಾರಣಕ್ಕೂ ಬದುಕಿನ ಭರವಸೆ ಕಳೆದುಕೊಳ್ಳಬಾರದು.

– ಡಾ.ಶಿವಮೂರ್ತಿ ಮುರುಘರಾಜೇಂದ್ರ ಸ್ವಾಮೀಜಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.