ADVERTISEMENT

‘ಈ ಹೊತ್ತಿಗೆ’ ಪ್ರಶಸ್ತಿಗೆ ಕೆ. ಷರೀಫಾ, ಮಧುರಾಣಿ ಆಯ್ಕೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2022, 16:12 IST
Last Updated 21 ಫೆಬ್ರುವರಿ 2022, 16:12 IST
ಕೆ. ಷರೀಫಾ
ಕೆ. ಷರೀಫಾ   

ಬೆಂಗಳೂರು: ‘ಈ ಹೊತ್ತಿಗೆ’ ಟ್ರಸ್ಟ್‌ನ 2022ರ ಕಥಾ ಮತ್ತು ಕಾವ್ಯ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ.

ಡಾ. ಕೆ. ಷರೀಫಾ ಅವರ ಅಪ್ರಕಟಿತ ಕಥಾಸಂಕಲನ ‘ನೀರೊಳಗಣ ಕಿಚ್ಚು’ ‘ಈ ಹೊತ್ತಿಗೆ ಕಥಾ ಪ್ರಶಸ್ತಿ’ಗೆ ಹಾಗೂ ಎಚ್‌.ಎಸ್‌. ಮಧುರಾಣಿ ಅವರ ‘ನೀಲಿ ಚುಕ್ಕಿಯ ನೆರಳು’ ಅಪ್ರಕಟಿತ ಕವನ ಸಂಕಲನ ‘ಈ ಹೊತ್ತಿಗೆ ಕಾವ್ಯ ಪ್ರಶಸ್ತಿ’ಗೆ ಆಯ್ಕೆಯಾಗಿವೆ.

ಕಲಬುರಗಿ ಮೂಲದ ಕವಯತ್ರಿ ಕೆ. ಷರೀಫಾ ಅವರು ಕೃಷಿ ಮಾರುಕಟ್ಟೆ ಇಲಾಖೆಯಲ್ಲಿ ಮಾರುಕಟ್ಟೆ ಅಧಿಕಾರಿಯಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದಾರೆ. ಕತೆಗಾರ್ತಿ ವೀಣಾ ಶಾಂತೇಶ್ವರ ಅವರು ಈ ಬಾರಿಯ ‘ಈ ಹೊತ್ತಿಗೆ ಕಥಾ ಪ್ರಶಸ್ತಿ’ ವಿಭಾಗದ ತೀರ್ಪುಗಾರರಾಗಿದ್ದರು.

ADVERTISEMENT

‘ಈ ಹೊತ್ತಿಗೆ ಕಾವ್ಯ ಪ್ರಶಸ್ತಿ’ಗೆ ಭಾಜನರಾಗಿರುವ ಎಚ್‌.ಎಸ್‌. ಮಧುರಾಣಿ ಅವರು ಮೂಲತಃ ದಾವಣಗೆರೆಯವರು. ಪ್ರಸ್ತುತ ಮೈಸೂರಿನಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ.

ಕವಿ ಡಾ.ಎಚ್.ಎಸ್. ಶಿವಪ್ರಕಾಶ್ ಅವರು ಈ ಹೊತ್ತಿಗೆಯ ಕಾವ್ಯ ಪ್ರಶಸ್ತಿಯ ತೀರ್ಪುರಗಾರರಾಗಿದ್ದರು. ಇದು ಈ ಹೊತ್ತಿಗೆಯ ಮೊದಲ ಕಾವ್ಯ ಪ್ರಶಸ್ತಿಯಾಗಿದೆ.

ಎರಡೂ ಪ್ರಶಸ್ತಿಗಳು ತಲಾ ₹10 ಸಾವಿರ ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ. ಮಾರ್ಚ್ 27ರಂದು ಬೆಂಗಳೂರಿನ ಜೆ.ಪಿ. ನಗರದ ಕಪ್ಪಣ್ಣ ಅಂಗಳ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ‘ಈ ಹೊತ್ತಿಗೆ’ಯ ಸಂಚಾಲಕರಾದ ಜಯಲಕ್ಷ್ಮಿ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.