ADVERTISEMENT

ಕಳಚಿ ಬಿದ್ದ ಶೆಡ್; ಕಾರ್ಮಿಕರ ರಕ್ಷಿಸಿದ ಕಾನ್‌ಸ್ಟೆಬಲ್‌

​ಪ್ರಜಾವಾಣಿ ವಾರ್ತೆ
Published 31 ಮೇ 2020, 19:45 IST
Last Updated 31 ಮೇ 2020, 19:45 IST
ಕಾನ್‌ಸ್ಟೆಬಲ್ ರವಿಕುಮಾರ್ ಅವರಿಗೆ ಕಮಿಷನರ್ ಭಾಸ್ಕರ್ ರಾವ್ ಅವರು ಪ್ರಶಂಸನಾ ಪತ್ರ ನೀಡಿದರು
ಕಾನ್‌ಸ್ಟೆಬಲ್ ರವಿಕುಮಾರ್ ಅವರಿಗೆ ಕಮಿಷನರ್ ಭಾಸ್ಕರ್ ರಾವ್ ಅವರು ಪ್ರಶಂಸನಾ ಪತ್ರ ನೀಡಿದರು   

ಬೆಂಗಳೂರು: ಅರಮನೆ ಮೈದಾನದಲ್ಲಿ ನಿರ್ಮಿಸಿದ್ದ ದೊಡ್ಡ ಗಾತ್ರದ ಶೆಡ್ ಕಳಚಿ ಬಿದ್ದು ಅವಶೇಷಗಳಡಿ ಸಿಲುಕಿದ್ದ ಮಗು ಸೇರಿ ಹಲವು ಕಾರ್ಮಿಕರನ್ನು ಶಿವಾಜಿನಗರ ಠಾಣೆ ಕಾನ್‌ಸ್ಟೆಬಲ್‌ ಜಿ.ಎನ್. ರವಿಕುಮಾರ್ ರಕ್ಷಿಸಿದ್ದು, ಅವರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಲಾಕ್‌ಡೌನ್‌ನಿಂದ ತೊಂದರೆಗೆ ಸಿಲುಕಿದ್ದ ವಲಸೆ ಕಾರ್ಮಿಕರನ್ನು ಸ್ವಂತ ಊರುಗಳಿಗೆ ಕಳುಹಿಸಲು ವ್ಯವಸ್ಥೆ ಮಾಡಲಾಗಿದೆ. ರೈಲಿಗೆ ಹತ್ತಿಸುವ ಮುನ್ನ ಅರಮನೆ ಮೈದಾನದಲ್ಲಿ ಕಾರ್ಮಿಕರ ದಾಖಲೆ ಪರಿಶೀಲನೆ ನಡೆಸಲಾಗುತ್ತಿದೆ. ಮಳೆ ಹಾಗೂ ಬಿಸಿಲಿನಿಂದ ರಕ್ಷಿಸಿಕೊಳ್ಳುವುದಕ್ಕಾಗಿ ಮೈದಾನದಲ್ಲಿ ಶೆಡ್ ನಿರ್ಮಿಸಲಾಗಿದೆ.

ಈ ಶೆಡ್‌ನಲ್ಲಿ ಕಾರ್ಮಿಕರು ಸರದಿಯಲ್ಲಿ ನಿಂತು ದಾಖಲೆಗಳ ಪರಿಶೀಲನೆಗೆ ಒಳಪಡುತ್ತಿದ್ದಾರೆ. ಶುಕ್ರವಾರ ಸಂಜೆ ಸುರಿದ ಮಳೆ ವೇಳೆ ಜೋರಾದ ಗಾಳಿ ಬೀಸಿ ಶೆಡ್ ಕಳಚಿ ಬಿದ್ದಿತ್ತು. ಮಗು ಸೇರಿ ಹಲವರು ಶೆಡ್ ಅಡಿ ಸಿಲುಕಿದ್ದರು. ಕರ್ತವ್ಯದಲ್ಲಿದ್ದ ರವಿಕುಮಾರ್ ಪ್ರಾಣದ ಹಂಗು ತೊರೆದು ಅವಶೇಷಗಳಡಿ ಸಿಲುಕಿದ್ದವರನ್ನು ರಕ್ಷಿಸಿದ್ದಾರೆ.

ADVERTISEMENT

ಘಟನೆ ಬಗ್ಗೆ ಮಾಹಿತಿ ಪಡೆದ ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್, ಹೆಚ್ಚುವರಿ ಪೊಲೀಸ್ ಕಮಿಷನರ್ ಮುರುಗನ್ ಹಾಗೂ ಡಿಸಿಪಿ ಶರಣಪ್ಪ ಶಿವಾಜಿನಗರ ಠಾಣೆಗೆ ಭಾನುವಾರ ಭೇಟಿ ನೀಡಿ ಕಾನ್‌ಸ್ಟೆಬಲ್ ರವಿಕುಮಾರ್ ಅವರನ್ನು ಅಭಿನಂದಿಸಿದರು.

‘ಚಿನ್ನದ ಪದಕದೊಂದಿಗೆ ಎಂಬಿಎ ಪದವಿ ಮುಗಿಸಿದ್ದ ರವಿಕುಮಾರ್ ಕಾನ್‌ಸ್ಟೆಬಲ್ ಆಗಿ ಇಲಾಖೆಗೆ ಸೇರಿದ್ದಾರೆ. ಹಲವರ ಪ್ರಾಣ ಉಳಿಸಿ ಇತರೆ ಸಿಬ್ಬಂದಿಗೂ ಮಾದರಿಯಾಗಿದ್ದಾರೆ’ ಎಂದು ಭಾಸ್ಕರ್ ರಾವ್ ಹೊಗಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.