ADVERTISEMENT

ಬೆಂಗಳೂರು: ಶಿವಕುಮಾರ ಸ್ವಾಮೀಜಿ ಸ್ಮರಣೆ

ಶ್ರೀಗಳ ಕಂಚಿನ ಪುತ್ಥಳಿಗೆ ಮಾಲಾರ್ಪಣೆ

​ಪ್ರಜಾವಾಣಿ ವಾರ್ತೆ
Published 21 ಜನವರಿ 2025, 14:09 IST
Last Updated 21 ಜನವರಿ 2025, 14:09 IST
ನಗರದಲ್ಲಿ ಮಂಗಳವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಶಿವಕುಮಾರಸ್ವಾಮಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಟಿ.ವೆಂಕಟೇಶ್ ಗೌಡ, ಶಂಕರ ಬಿದರಿ, ಪ್ರಭುಚನ್ನಬಸವ ಸ್ವಾಮೀಜಿ, ಛಲವಾದಿ ನಾರಾಯಣಸ್ವಾಮಿ ಅವರು ಶಿವಕುಮಾರ ಸ್ವಾಮೀಜಿ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.  ಪ್ರಜಾವಾಣಿ ಚಿತ್ರ
ನಗರದಲ್ಲಿ ಮಂಗಳವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಶಿವಕುಮಾರಸ್ವಾಮಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಟಿ.ವೆಂಕಟೇಶ್ ಗೌಡ, ಶಂಕರ ಬಿದರಿ, ಪ್ರಭುಚನ್ನಬಸವ ಸ್ವಾಮೀಜಿ, ಛಲವಾದಿ ನಾರಾಯಣಸ್ವಾಮಿ ಅವರು ಶಿವಕುಮಾರ ಸ್ವಾಮೀಜಿ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.  ಪ್ರಜಾವಾಣಿ ಚಿತ್ರ   

ಬೆಂಗಳೂರು: ಸಿದ್ದಗಂಗಾ ಮಠದ ತ್ರಿವಿಧ ದಾಸೋಹಿ ಶಿವಕುಮಾರ ಸ್ವಾಮೀಜಿ ಅವರ ಜೀವನ ಸಮಾಜಕ್ಕೆ ಮಾದರಿ ಎಂದು ಅಖಿಲ ಭಾರತ ವೀರಶೈವ–ಲಿಂಗಾಯತ ಮಹಾಸಭಾ ರಾಜ್ಯ ಘಟಕದ ಅಧ್ಯಕ್ಷ ಶಂಕರ ಬಿದರಿ ಹೇಳಿದರು.

ನಗರದ ಶಿವಕುಮಾರಸ್ವಾಮಿ ಚಾರಿಟಬಲ್ ಟ್ರಸ್ಟ್ ಮಂಗಳವಾರ ಏರ್ಪಡಿಸಿದ್ದ ಆರನೇ ವರ್ಷದ ಪುಣ್ಯ ಸಂಸ್ಮರಣೋತ್ಸವದಲ್ಲಿ ಶಿವಕುಮಾರ ಸ್ವಾಮೀಜಿ ಕಂಚಿನ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.

ಲಿಂಗಾಯತ ಸಮುದಾಯ ಮಾತ್ರವಲ್ಲದೇ ಎಲ್ಲಾ ಸಮುದಾಯದ ಲಕ್ಷಾಂತರ ಬಡ ವಿದ್ಯಾರ್ಥಿಗಳಿಗೆ ಮಠದಲ್ಲಿ ಆಶ್ರಯ ನೀಡಿ, ಉಚಿತ ಶಿಕ್ಷಣ ಮತ್ತು ವಸತಿ ಮೂಲಕ ಅವರ ಬದುಕನ್ನು ಹಸನು ಮಾಡಿದರು. ಆಚಾರ, ವಿಚಾರ ಸಿದ್ದಾಂತಗಳ ಮೂಲಕ ವಿಶ್ವದ ಗಮನ ಸೆಳೆದ ಸ್ವಾಮೀಜಿ ಅವರ ಆದರ್ಶ, ತತ್ವಗಳಿಂದ ನಾಡಿನಲ್ಲಿ ಶಾಂತಿ ಲಭಿಸಲಿ. ಸನ್ಮಾರ್ಗದಲ್ಲಿ ಸಾಗಲು ಸ್ವಾಮೀಜಿಗಳ ಮಾರ್ಗದರ್ಶನ ಅಗತ್ಯ ಎಂದು ಅಭಿಪ್ರಾಯಪಟ್ಟರು.

ADVERTISEMENT

ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಸಿದ್ದಗಂಗಾ ಶ್ರೀ ಅವರು ಸಮಾಜಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಬೇಕು. ಸಿದ್ದಗಂಗಾ ಮಠದಲ್ಲಿ ಓದಿದ ಸಾವಿರಾರು ವಿದ್ಯಾರ್ಥಿಗಳು ಇಂದು ಸಮಾಜದಲ್ಲಿ ಉನ್ನತ ಹುದ್ದೆ ಅಲಂಕರಿಸಿ ಸೇವೆ ಸಲ್ಲಿಸುತ್ತಿದ್ದಾರೆ. ಈಗಲೂ ಶ್ರೀಮಠ ಅನೇಕರಿಗೆ ದಾರಿ ದೀಪವಾಗಿದೆ ಎಂದರು.

ಸಾನಿಧ್ಯ ವಹಿಸಿದ್ದ ಅಥಣಿಯ ಮೋಟಗಿ ಮಠದ ಪ್ರಭುಚನ್ನಬಸವ ಸ್ವಾಮೀಜಿ, ಅನ್ನ ,ಶಿಕ್ಷಣ, ಆಶ್ರಯದ ಮಹತ್ವಗಳನ್ನು ಸಾರಿದ ಸ್ವಾಮೀಜಿ, ಲೋಕಕಲ್ಯಾಣಕ್ಕಾಗಿ ಅವರ ಜೀವನವನ್ನು ಮುಡಿಪಾಗಿಟ್ಟರು. ಶಾಂತಿಯುತೆ, ಸೌರ್ಹದತೆ, ಸಹೋದರತ್ವ ಮತ್ತು ಜೀವನ ಹೇಗೆ ಸಾಗಿಸಬೇಕು ಎಂದು ನಾಡಿನ ಜನರಿಗೆ ಅರಿವು ಮೂಡಿಸಿದ ಮಹಾನ್ ಸಂತ ಎಂದರು. 

ವೀರಶೈವ–ಲಿಂಗಾಯತ ಮಹಾಸಭಾ ನಗರ ಘಟಕದ ಅಧ್ಯಕ್ಷ ಬಿ.ಆರ್.ನವೀನ್ ಕುಮಾರ್, ಟ್ರಸ್ಟ್ ಅಧ್ಯಕ್ಷ ಟಿ.ವೆಂಕಟೇಶ್‌ ಗೌಡ, ಉಪಾಧ್ಯಕ್ಷ ಕ್ರಾಂತಿರಾಜು, ಸಲಹೆಗಾರ ಪಾಲನೇತ್ರ, ಪ್ರಧಾನ ಕಾರ್ಯದರ್ಶಿ ಬಿ.ಎಂ.ಶಿವಕುಮಾರ್, ಖಜಾಂಚಿ ವಿಜಯಕುಮಾರ್, ಸಂಚಾಲಕರಾದ ಬಿ.ದೇವರಾಜು, ನಿರ್ಮಾಪಕರ ಸಂಘದ ಅಧ್ಯಕ್ಷ ಉಮಶ್ ಬಣಕಾರ್ ಹಾಜರಿದ್ದರು. ಬಳಿಕ ಎಲ್ಲರಿಗೂ ಪ್ರಸಾದ ವಿತರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.