ADVERTISEMENT

ಶಿವರಾಮ ಕಾರಂತ ಬಡಾವಣೆ: ಯೋಜನೆ ಕೈಬಿಡುವ ಭರವಸೆಯನ್ನು ಸಿ.ಎಂ. ನೀಡಿಲ್ಲ -ವಿಶ್ವನಾಥ

ಬಿಡಿಎ ಅಧ್ಯಕ್ಷ ವಿಶ್ವನಾಥ್ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2021, 14:24 IST
Last Updated 25 ಮಾರ್ಚ್ 2021, 14:24 IST

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಿರ್ಮಿಸಲು ಉದ್ದೇಶಿಸಿರುವ ಡಾ.ಶಿವರಾಮ ಕಾರಂತ ಬಡಾವಣೆ ಯೋಜನೆಯನ್ನು ಕೈಬಿಡುವ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರೈತ ಮುಖಂಡರಿಗೆ ಯಾವುದೇ ಭರವಸೆ ನೀಡಿಲ್ಲ ಎಂದು ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಸ್ಪಷ್ಟಪಡಿಸಿದರು.

ಈ ಯೋಜನೆಯ ಜಾರಿಯಾಗಲಿರುವ ಗ್ರಾಮಗಳ ನಿವಾಸಿಗಳು ಹಾಗೂ ಭೂಮಿ ಕಳೆದುಕೊಳ್ಳಲಿರುವ ರೈತರು ಬಡಾವಣೆ ಯೋಜನೆಯನ್ನು ಕೈಬಿಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಬುಧವಾರ ಪ್ರತಿಭಟನೆ ನಡೆಸಿದ್ದರು. ಮುಖ್ಯಮಂತ್ರಿ ಅವರು ಪ್ರತಿಭಟನಾಕಾರರನ್ನು ಕರೆಸಿಕೊಂಡು ಮಾತುಕತೆ ನಡೆಸಿದ್ದರು. ಈ ಮಾತುಕತೆ ಬಳಿಕ ಪ್ರತಿಭಟನಾ ಸ್ಥಳಕ್ಕೆ ಬಂದಿದ್ದ ಕೋಡಿಹಳ್ಳಿ ಚಂದ್ರಶೇಖರ್ ಹಾಗೂ ಅವರ ಜೊತೆಯಲ್ಲಿದ್ದ ಹೋರಾಟಗಾರರು, ‘ಈ ಬಡಾವಣೆಯ ಯೋಜನೆ ಕೈಬಿಡುವ ಬಗ್ಗೆ ರಾಜ್ಯದ ಅಡ್ವೊಕೇಟ್‌ ಜನರಲ್ ಅವರ ಮೂಲಕ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸುವ ಭರವಸೆಯನ್ನು ಮುಖ್ಯಮಂತ್ರಿ ನೀಡಿದ್ದಾರೆ. ಹಾಗಾಗಿ ಪ್ರತಿಭಟನೆ ಕೈಬಿಡುತ್ತಿದ್ದೇವೆ’ ಎಂದು ಹೇಳಿಕೆ ನೀಡಿದ್ದರು.

‘ಈ ನಡುವೆ ಬಿಡಿಎ ಅಧ್ಯಕ್ಷರು ರಾಜಕೀಯ ಮಾಡಿದರೆ ನಾವು ಮತ್ತೆ ಹೋರಾಟ ನಡೆಸಬೇಕಾಗುತ್ತದೆ’ ಎಂದೂ ಸ್ಪಷ್ಟಪಡಿಸಿದ್ದರು.

ADVERTISEMENT

ಈ ಬಗ್ಗೆ ಸ್ಪಷ್ಟನೆ ನೀಡಿರುವ ವಿಶ್ವನಾಥ್, ‘ಪ್ರತಿಭಟನೆಯ ನಡುವೆಯೇ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದ ನಿಯೋಗ ವಿಧಾನಸೌಧದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದು ಹೌದು. ಮುಖ್ಯಮಂತ್ರಿ ಅವರು ಭೂಸ್ವಾಧೀನ ಕೈಬಿಡುವ ಬಗ್ಗೆಯಾಗಲೀ ಅಥವಾ ಯೋಜನೆಯನ್ನು ಕೈಬಿಡುವ ಬಗ್ಗೆಯಾಗಲೀನಿಯೋಗಕ್ಕೆ ಯಾವುದೇ ಭರವಸೆಯನ್ನೂ ನೀಡಿಲ್ಲ. ಆದರೆ, ಕೋಡಿಹಳ್ಳಿ ಚಂದ್ರಶೇಖರ್ ಅವರು ಮಾಧ್ಯಮಗಳ ಮೂಲಕ ಈ ವಿಚಾರದಲ್ಲಿ ತಪ್ಪು ಸಂದೇಶವನ್ನು ನೀಡಿದ್ದಾರೆ’ ಎಂದು ತಿಳಿಸಿದ್ದಾರೆ.

‘ಬಡಾವಣೆ ವಿಚಾರ ಸುಪ್ರೀಂ ಕೋರ್ಟ್‌ನಲ್ಲಿ ಇರುವುದರಿಂದ ಈ ಬಗ್ಗೆ ಅಡ್ವೋಕೇಟ್ ಜನರಲ್ ಜತೆಗೆ ಚರ್ಚೆ ನಡೆಸುತ್ತೇನೆ ಎಂದಷ್ಟೇ ಮುಖ್ಯಮಂತ್ರಿಗಳು ಹೇಳಿದ್ದಾರೆ. ಈ ಬಗ್ಗೆ ಸಾರ್ವಜನಿಕರು ಯಾವುದೇ ತಪ್ಪು ಸಂದೇಶಗಳು ಅಥವಾ ಮಾಹಿತಿಗಳಿಗೆ ಕಿವಿಗೊಡಬಾರದು’ ಎಂದರು.

‘ಈ ಬಡಾವಣೆ ನಿರ್ಮಾಣದ ವಿಚಾರದಲ್ಲಿ ಸುಪ್ರೀಂಕೋರ್ಟ್ ನೀಡುವ ತೀರ್ಪಿಗೆ ಸರ್ಕಾರ ಮತ್ತು ಬಿಡಿಎ ಬದ್ಧವಾಗಿರುತ್ತದೆ’ ಎಂದೂ ಅವರು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.