ADVERTISEMENT

ಶಿವರಾಮ ಕಾರಂತ ಬಡಾವಣೆ: ಜನಸಂಪರ್ಕ ಸಭೆ 24ಕ್ಕೆ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2021, 22:43 IST
Last Updated 23 ಸೆಪ್ಟೆಂಬರ್ 2021, 22:43 IST

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಅಭಿವೃದ್ಧಿಪಡಿಸುತ್ತಿರುವ ಡಾ.ಶಿವರಾಮ ಕಾರಂತ ಬಡಾವಣೆಗೆ ಸಂಬಂಧಿಸಿದಂತೆ ಇದೇ 24ರಂದು (ಶುಕ್ರವಾರ) ಬ್ಯಾಲಕೆರೆ ಸರ್ಕಾರಿ ಶಾಲೆಯಲ್ಲಿ ಬೆಳಿಗ್ಗೆ 11 ಗಂಟೆಗೆ ನ್ಯಾಯಮೂರ್ತಿ ಎ.ವಿ. ಚಂದ್ರಶೇಖರ್ ಸಮಿತಿಯು ಜನ ಸಂಪರ್ಕ ಸಭೆ ಹಮ್ಮಿಕೊಂಡಿದೆ.

‘ಬಡಾವಣೆಯ ಭೂಸ್ವಾಧೀನ ಪ್ರಕ್ರಿಯೆ ಜಾರಿಯಲ್ಲಿರುವ ಪ್ರದೇಶದ ಆಸ್ತಿ ಮಾಲೀಕರಲ್ಲಿ ತಪ್ಪು ಮಾಹಿತಿ, ತಪ್ಪು ತಿಳಿವಳಿಕೆ ಮತ್ತು ಗೊಂದಲಗಳಿರುವುದು ಗಮನಕ್ಕೆ ಬಂದಿದೆ. ಈ ಗೊಂದಲಗಳನ್ನು ನಿವಾರಿಸಲು ಹಾಗೂ ತಪ್ಪು ತಿಳಿವಳಿಕೆಯನ್ನು ತೊಡೆದುಹಾಕಲು ಮತ್ತು ಸುಪ್ರೀಂ ಕೋರ್ಟ್‌ನ ಆದೇಶಗಳ ವಾಸ್ತವ ಉದ್ದೇಶ ಹಾಗೂ ಪರಿಣಾಮಗಳನ್ನು ನೇರವಾಗಿ ಮಾಲೀಕರಿಗೆ ವಿವರಿಸಲು ಈ ಜನಸಂಪರ್ಕ ಸಭೆ ಏರ್ಪಡಿಸಲಾಗಿದೆ’ ಎಂದು ಸಮಿತಿ ತಿಳಿಸಿದೆ.

‘ಸಮಿತಿ ಮಾಡುತ್ತಿರುವ ಕಾರ್ಯಗಳ ಸರಿಯಾದ ಚಿತ್ರಣ ಪಡೆಯಲು ಎಲ್ಲಾ ಆಸ್ತಿ ಮಾಲೀಕರು ಮತ್ತು ಉತ್ತರದಾಯಿಗಳು ಈ ಸಭೆಯಲ್ಲಿ ಪಾಲ್ಗೊಳ್ಳಬೇಕು’ ಎಂದು ಸಮಿತಿ ಕೋರಿದೆ.

ADVERTISEMENT

ಶಿವರಾಮ ಕಾರಂತ ಬಡಾವಣೆಗೆ ಗೊತ್ತುಪಡಿಸಿರುವ ಪ್ರದೇಶಗಳಲ್ಲಿ 2018ರ ಆ.3ರ ನಂತರ ನಿರ್ಮಿಸಲಾದ ಕಟ್ಟಡಗಳನ್ನು ಸಕ್ರಮಗೊಳಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಈ ಬಗ್ಗೆ ವರದಿ ನೀಡಲು ಸುಪ್ರೀಂ ಕೋರ್ಟ್‌ ನಿರ್ದೇಶನದ ಮೇರೆಗೆ, ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎ.ವಿ.ಚಂದ್ರಶೇಖರ್ ನೇತೃತ್ವದ ಸಮಿತಿ ರಚಿಸಲಾಗಿದೆ. ನಿವೃತ್ತ ಐಎಎಸ್‌ ಅಧಿಕಾರಿ ಜಯಕರ್ ಜೆರೋಮ್ ಹಾಗೂ ನಿವೃತ್ತ ಐಪಿಎಸ್‌ ಅಧಿಕಾರಿ ಎಸ್.ಟಿ. ರಮೇಶ್ ಸಮಿತಿಯ ಸದಸ್ಯರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.