ADVERTISEMENT

ಶಿವರಾಮ ಕಾರಂತ ಬಡಾವಣೆ:: ಭೂ ಮಾಲೀಕರ ಭವಿಷ್ಯ ಅತಂತ್ರ

ಭೂಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಪ್ರಕಟ

ಪ್ರವೀಣ ಕುಮಾರ್ ಪಿ.ವಿ.
Published 3 ನವೆಂಬರ್ 2018, 20:11 IST
Last Updated 3 ನವೆಂಬರ್ 2018, 20:11 IST
   

ಬೆಂಗಳೂರು:ಸುಪ್ರೀಂ ಕೋರ್ಟ್‌ ತರಾಟೆಗೆ ತೆಗೆದುಕೊಂಡ ಬಳಿಕ ಎಚ್ಚೆತ್ತ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಡಾ.ಕೆ.ಶಿವರಾಮ ಕಾರಂತ ಬಡಾವಣೆಯ ಭೂಸ್ವಾಧೀನಕ್ಕೆ ಕೊನೆಗೂ ಅಧಿಸೂಚನೆ ಹೊರಡಿಸಿದೆ. ಬೆಂಗಳೂರು ಉತ್ತರ ತಾಲ್ಲೂಕಿನ 17 ಗ್ರಾಮಗಳಲ್ಲಿ ಈ ಬಡಾವಣೆ ನಿರ್ಮಾಣವಾಗಲಿದ್ದು ಇದಕ್ಕಾಗಿ ಜಾಗ ಕಳೆದುಕೊಳ್ಳಲಿರುವ ಕುಟುಂಬಗಳ ಭವಿಷ್ಯ ತೂಗುಯ್ಯಾಲೆಯಲ್ಲಿದೆ.

ಈ ಬಡಾವಣೆಗೆ ಬಿಡಿಎ 2008ರ ಡಿಸೆಂಬರ್‌ನಲ್ಲಿ ಪ್ರಾಥಮಿಕ ಅಧಿಸೂಚನೆ ಹೊರಡಿಸಿತ್ತು. 10 ವರ್ಷದ ಬಳಿಕ 3,546 ಎಕರೆ 12 ಗುಂಟೆ ಜಾಗವನ್ನು ಸ್ವಾಧೀನಪಡಿಸಿಕೊಳ್ಳುವ ಕುರಿತು (ನವೆಂಬರ್‌ 1ರಂದು ) ರಾಜ್ಯಪತ್ರದಲ್ಲಿ ಅಧಿಸೂಚನೆ ಪ್ರಕಟವಾಗಿದೆ.

ಭೂಸ್ವಾಧೀನಕ್ಕೆ ಪ್ರಾಥಮಿಕ ಅಧಿಸೂಚನೆ ಹೊರಡಿಸಿದ್ದಕ್ಕೆ ರೈತರಿಂದ ಬಂದ ಆಕ್ಷೇಪಣೆಗಳನ್ನು ಪರಿಗಣಿಸಿ ಸರ್ಕಾರ 257 ಎಕರೆ 20 ಗುಂಟೆ ಜಾಗಕ್ಕೆ ಸಂಬಂಧಿಸಿದ ಭೂಸ್ವಾಧೀನ ಪ್ರಕ್ರಿಯೆ ಕೈಬಿಡುವಂತೆಆರಂಭದಲ್ಲೇ ಬಿಡಿಎಗೆ ಸೂಚಿಸಿತ್ತು. ಮತ್ತೆ 446 ಎಕರೆ 7ಗುಂಟೆ ಜಾಗ ಕೈಬಿಡುವಂತೆ ಭೂಮಾಲೀಕರು 2012ರಲ್ಲಿ ಒತ್ತಾಯಿಸಿದ್ದರು. ಈ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು.

ADVERTISEMENT

ಈ ವಿಚಾರ ವಿಧಾನ ಮಂಡಲ ಅಧಿವೇಶನದಲ್ಲಿ ಚರ್ಚೆ ಆಗಿ 2012ರ ನವೆಂಬರ್‌ 14ರಂದು ಸರ್ಕಾರ ತನಿಖೆಗೆ ಆದೇಶಿಸಿತ್ತು. ತನಿಖೆಗೆ 2013ರ ಜ. 19ರಂದು ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರ ನೇತೃತ್ವದಲ್ಲಿ ಸಮಿತಿಯನ್ನೂ ರಚಿಸಿತ್ತು.

ಪ್ರಾಥಮಿಕ ಅಧಿಸೂಚನೆ ಹೊರಡಿಸಿದ 5 ವರ್ಷದೊಳಗೆ ಅಂತಿಮ ಅಧಿಸೂಚನೆ ಹೊರಡಿಸಿಲ್ಲ ಎಂಬ ಕಾರಣ ನೀಡಿ ಅನೇಕ ಭೂಮಾಲೀಕರು ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್‌ನ ಏಕವ್ಯಕ್ತಿ ಪೀಠವು 2014 ನವೆಂಬರ್‌ 26ರಂದು ಅರ್ಜಿದಾರರ ಪರವಾಗಿ ತೀರ್ಪು ನೀಡಿತ್ತು. ಇದನ್ನು ಬಿಡಿಎ ವಿಭಾಗೀಯ ಪೀಠದಲ್ಲಿ ಪ್ರಶ್ನೆ ಮಾಡಿತ್ತು. ವಿಭಾಗೀಯ ಪೀಠವೂ ರೈತರ ಪರವಾಗಿ ತೀರ್ಪು ನೀಡಿತ್ತು. ಇದನ್ನು ಬಿಡಿಎ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತ್ತು.

ಅರುಣ್‌ ಮಿಶ್ರಾ ಹಾಗೂ ಅಬ್ದುಲ್‌ ನಜೀರ್‌ ಅವರಿದ್ದ ಸುಪ್ರೀಂ ಕೋರ್ಟ್‌ನ ಪೀಠವು ಈ ಬಡಾವಣೆಯ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಹಾಗೂ ಬಿಡಿಎಗೆ 2018ರ ಆಗಸ್ಟ್‌ 3ರಂದು ನಿರ್ದೇಶನ ನೀಡಿತ್ತು. ಮೂರು ತಿಂಗಳ ಒಳಗೆ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿ ವರದಿ ಸಲ್ಲಿಸುವಂತೆ ಸೂಚಿಸಿತ್ತು. ಈ ಬಡಾವಣೆಯ ಹೆಸರಿನಲ್ಲಿ ನಡೆದಿರುವ ಅಕ್ರಮದ ತನಿಖೆ ನಡೆಸಲು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಕೆ.ಎನ್‌.ಕೇಶವನಾರಾಯಣ ಅವರನ್ನು ನೇಮಿಸಿತ್ತು.

ಪ್ರಾಥಮಿಕ ಅಧಿಸೂಚನೆ ಹೊರಡಿಸಿದ ಬಳಿಕ, ಹತ್ತು ವರ್ಷಗಳಲ್ಲಿ ಹೈಕೋರ್ಟ್‌ ಆದೇಶದ ಆಧಾರದಲ್ಲಿ ಅನೇಕ ಖಾತಾದಾರರಿಗೆ ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡುವ ಬಗ್ಗೆ ಬಿಡಿಎ ಹಿಂಬರಹ ನೀಡಿದೆ. ಅಲ್ಲೆಲ್ಲ ಅವರು ಕಟ್ಟಡ ನಿರ್ಮಿಸಿಕೊಂಡಿದ್ದಾರೆ. ಬಹುತೇಕ ಕಡೆ ಶಾಲೆ, ಕಾಲೇಜು, ವಾಣಿಜ್ಯ ಕಟ್ಟಡಗಳು ತಲೆ ಎತ್ತಿವೆ.

‘2008ರಲ್ಲಿ ಪ್ರಾಥಮಿಕ ಅಧಿಸೂಚನೆ ಹೊರಡಿಸುವುದಕ್ಕೆ ಮುನ್ನ ಇದ್ದ ಕಟ್ಟಡಗಳಿಗೆ ನಾವು ಪರಿಹಾರ ನೀಡಬಹುದು. ಆದರೆ, ನಂತರ ನಿರ್ಮಾಣವಾದ ಕಟ್ಟಡಗಳಿಗೆ ಪರಿಹಾರ ನೀಡುವುದು ಕಷ್ಟ’ ಎಂದು ಬಿಡಿಎ ಆಯುಕ್ತ ರಾಕೇಶ್‌ ಸಿಂಗ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಮ್ಮ ಕುಟುಂಬದ 10 ಎಕರೆಗೂ ಅಧಿಕ ಜಾಗ ಭೂಸ್ವಾಧೀನ ಪ್ರಕ್ರಿಯೆಗೆ ಒಳಪಡಲಿದೆ. ಇಲ್ಲೆಲ್ಲ ಕಟ್ಟಡಗಳಿವೆ. ಹೈಕೋರ್ಟ್‌ ಆದೇಶ ಬಂದ ಬಳಿಕವೇ ನಾವು ಕಟ್ಟಡ ನಿರ್ಮಿಸಿದ್ದು. ಈಗಾ ಹಠಾತ್‌ ಎಲ್ಲವನ್ನೂ ಬಿಟ್ಟುಕೊಡಿ ಎಂದರೆ ಏನು ಮಾಡಲು ಸಾಧ್ಯ. ಮುಂದೇನಾಗುತ್ತದೋ ಗೊತ್ತಿಲ್ಲ’ ಎಂದು ಬ್ಯಾಲಹಳ್ಳಿಯ ವಿಜಯ್‌ ಕುಮಾರ್‌ ಆತಂಕ ವ್ಯಕ್ತಪಡಿಸಿದರು.

‘ನಾವೂ ಸುಪ್ರೀಂ ಕೋರ್ಟ್‌ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದೇವೆ. ನಮಗೆ ನ್ಯಾಯ ಸಿಗುವ ಭರವಸೆ ಇದೆ’ ಎಂದು ಇನ್ನೊಬ್ಬ ರೈತ ಆಶಾವಾದ ವ್ಯಕ್ತಪಡಿಸಿದರು.

ಪರಿಹಾರ ಆಯ್ಕೆ– ರೈತರಿಗೆ ಬಿಟ್ಟಿದ್ದು’

ಭೂಮಿ ಕಳೆದುಕೊಳ್ಳಲಿರುವ ರೈತರಿಗೆ ಅಭಿವೃದ್ಧಿ ಪಡಿಸಿದ ನಿವೇಶನವನ್ನು 60:40 ಅನುಪಾತದಲ್ಲಿ ನೀಡಲು ಅಥವಾ 2013ರ ಭೂಸ್ವಾಧೀನ ಕಾಯ್ದೆ ಪ್ರಕಾರ ರೈತರಿಗೆ ಪರಿಹಾರ ನೀಡಲು ಬಿಡಿಎ ಸಿದ್ಧ. ಆಯ್ಕೆ ರೈತರಿಗೆ ಬಿಟ್ಟಿದ್ದು’ ಎಂದು ಹೆಸರು ಹೇಳಲಿಚ್ಛಿಸದ ಬಿಡಿಎ ಅಧಿಕಾರಿಯೊಬ್ಬರು ತಿಳಿಸಿದರು.

‘2500 ಎಕರೆ ಪ್ರದೇಶದಲ್ಲಿರುವ ಕಟ್ಟಡಗಳು’

‘ಭೂಸ್ವಾಧೀನ ಪಡಿಸಿಕೊಳ್ಳಬೇಕಾದ ಗ್ರಾಮಗಳ ಪೈಕಿ ಕೆಂಪಾಪುರ, ಗಾಣಿಗರ ಹಳ್ಳಿ, ಕಾಳತಮ್ಮನಹಳ್ಳಿ ಹಾಗೂ ಸೋಮಶೆಟ್ಟಿಹಳ್ಳಿ ಗ್ರಾಮಗಳು ಮಾತ್ರ ಹೆಚ್ಚಿನ ವಾಣಿಜ್ಯ ಅಭಿವೃದ್ಧಿ ಕಂಡಿಲ್ಲ. ಉಳಿದ 13 ಗ್ರಾಮಗಳಲ್ಲಿ ವಾಣಿಜ್ಯ ಚಟುವಟಕೆ 10 ವರ್ಷಗಳಲ್ಲಿ ತೀವ್ರಗತಿಯಲ್ಲಿ ಹೆಚ್ಚಿದೆ’ ಎಂದು ವಿಜಯ ಕುಮಾರ್‌ ತಿಳಿಸಿದರು.

ಈ ಬಡಾವಣೆಯ ಪರಿಸ್ಥಿತಿಯ ಬಗ್ಗೆ ಬಿಡಿಎ 2015ರಲ್ಲಿ ಸಮೀಕ್ಷೆ ನಡೆಸಿತ್ತು. ಸುಮಾರು 2500 ಎಕರೆಗೂ ಹೆಚ್ಚು ಜಾಗಗಲ್ಲಿ ಮನೆಗಳು ಮತ್ತು ವಾಣಿಜ್ಯ ಕಟ್ಟಡಗಳು ನಿರ್ಮಾಣವಾಗಿರುವುದು ಈ ಸಮೀಕ್ಷೆಯಲ್ಲಿ ಬೆಳಕಿಗೆ ಬಂದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.