‘ಜವಾಬ್ದಾರಿಯಿಂದ ಮುನ್ನಡೆಯಬೇಕು’
ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ಹೆಚ್ಚಿನ ಸ್ವಾತಂತ್ರ್ಯ ದೊರೆಯುವಂತಾಗಿದೆ. ಮಹಿಳೆಯರು ಅಬಲೆಯರಲ್ಲ, ಸಬಲೆಯರು ಎನ್ನುವುದನ್ನು ಜಗತ್ತಿಗೆ ತೋರಿಸುವ ಅವಕಾಶ ಸಿಕ್ಕಂತಾಗಿದೆ. ಈ ಸೌಲಭ್ಯವನ್ನು ಸದುಪಯೋಗ ಪಡೆದುಕೊಂಡು ಜವಾಬ್ದಾರಿಯಿಂದ ಮುನ್ನಡೆಯಬೇಕು.
ಕಾರುಣ್ಯ ಸುರೇಶ್, ಹೆಬ್ಬಾಳ
––
‘ಆರ್ಥಿಕ ನೆರವು ನೀಡುವ ಸೌಲಭ್ಯ’
ಬಡತನ, ನಿರುದ್ಯೋಗ, ಬೆಲೆ ಏರಿಕೆಯಿಂದ ತತ್ತರಿಸಿರುವ ಮಹಿಳೆಯರಿಗೆ ಉಚಿತ ಬಸ್ ಪಾಸ್ ಅವಶ್ಯಕ. ಬಡ ಮಹಿಳಾ ಕೂಲಿ–ಕಾರ್ಮಿಕರಿಗೆ, ಅಸಂಘಟಿತ ಮಹಿಳಾ ಕಾರ್ಮಿಕರಿಗೆ, ವಿದ್ಯಾರ್ಥಿನಿಯರಿಗೆ, ಆರ್ಥಿಕ ಭದ್ರತೆ ಇಲ್ಲದ ಎಲ್ಲಾ ಸ್ಥರದ ಮಹಿಳೆಯರಿಗೆ ಆರ್ಥಿಕ ನೆರವು ನೀಡುವ ಸೌಲಭ್ಯವಾಗಿದೆ.
ನಿರ್ಮಲ ಎಚ್.ಎಲ್., ಬೆಂಗಳೂರು
––
‘ಉದ್ಯೋಗದ ಕನಸು ನನಸು’
ಶಕ್ತಿ ಯೋಜನೆಯಿಂದ ಸಾವಿರಾರು ಮಹಿಳೆಯರ ಉದ್ಯೋಗದ ಕನಸು ನನಸಾಗಲಿದೆ. ಕಡಿಮೆ ಸಂಬಳವೆಂದು ಉದ್ಯೋಗದ ಆಸೆಯನ್ನು ಅದುಮಿಟ್ಟು ಅಡುಗೆಮನೆಯಲ್ಲಿ ಬೇಯುತ್ತಿದ್ದ ಬಹಳಷ್ಟು ಹೆಣ್ಣು ಮಕ್ಕಳು ಈಗ ಕೆಲಸಕ್ಕೆ ಸೇರಬಹುದು. ಹಾಗೆಯೇ, ಹೊರ ಜಗತ್ತಿನಲ್ಲಿ ಆರಾಮವಾಗಿ ಸಂಚರಿಸಿಬಹುದು. ಇದರಿಂದಾಗಿ, ಮಹಿಳೆಯರಿಗೆ ಸಾರ್ವಜನಿಕ ವಲಯ ಮತ್ತಷ್ಟು ಸುರಕ್ಷಿತವಾಗಲಿದೆ.
ವೀಣಾದೇವಿ ಆರ್. ಎಸ್., ಬೆಂಗಳೂರು
––
ಮಹಿಳೆಯರಿಗೆ ವರದಾನವಾದ ‘ಶಕ್ತಿ’
ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಬಹಳ ಅನುಕೂಲವಾಗಲಿದೆ. ಇದರಿಂದ ದುಡಿಯುವ ಮಹಿಳೆಯರು ಆರ್ಥಿಕವಾಗಿ ಸಬಲರಾಗಲು ಸಾಧ್ಯ. ಹಳ್ಳಿಗಳಿಂದ ನಗರಕ್ಕೆ ಸಂತೆ ಹಾಗೂ ವ್ಯಾಪಾರಕ್ಕಾಗಿ ಪ್ರತಿದಿನ ಸಂಚರಿಸುವ ಮಹಿಳೆಯರಿಗೆ ಈ ಯೋಜನೆಯು ವರದಾನವಾಗಿದೆ. ವಿದ್ಯಾರ್ಥಿನಿಯರಿಗೆ ಬಸ್‌ಪಾಸ್ ಕಿರಿಕಿರಿ ತಪ್ಪಿದಂತಾಗಿದೆ.
ಹೇಮಾ ನಾರಾಯಣ್ ರಾಜು, ವಿದ್ಯಾರ್ಥಿನಿ
––
ಸ್ವತಂತ್ರವಾಗಿ ಜೀವಿಸಲು ಬುನಾದಿ
ರಾಜ್ಯ ಸರ್ಕಾರ, ಮಹಿಳೆಯರಿಗೆ ಉಚಿತ ಪ್ರಯಾಣ ಸೇವೆ ಕಲ್ಪಿಸಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ. ಸ್ತ್ರೀ ಸಬಲೀಕರಣ ಹಾಗೂ ಸ್ವತಂತ್ರವಾಗಿ ತಮ್ಮ ಜೀವನ ನಡೆಸಲು ಬಯಸುವ ಮಹಿಳೆಯರಿಗೆ ಇದು ಬುನಾದಿ. ಈ ಸೌಲಭ್ಯದಿಂದ ಅನೇಕ ಮಹಿಳೆಯರು ಮನೆಯಿಂದ ಹೊರಬಂದು ಉದ್ಯೋಗ ಮಾಡಬಹುದು.
ಅನುಪಮಾ ಮೂರ್ತಿ ಕೆ. ಆರ್., ಐ.ಟಿ ಉದ್ಯೋಗಿ, ಬೆಂಗಳೂರು
––
‘ಮಹಿಳೆಯರ ಕನಸಿಗೆ ರೆಕ್ಕೆ ನೀಡಿದೆ ಶಕ್ತಿ’
ಉಚಿತ ಬಸ್ ಸೇವೆ ಮಹಿಳಾ ಸಬಲೀಕರಣಕ್ಕೆ ಒಂದು ದಿಟ್ಟ ಹೆಜ್ಜೆ ಎಂದರೆ ತಪ್ಪಾಗಲಾರದು. ಇದರಿಂದ, ಮಹಿಳೆಯರು ಕೇವಲ ನಾಲ್ಕು ಗೋಡೆಗಳ ಮಧ್ಯ ಗಂಡ ಮತ್ತು ಕುಟುಂಬಕ್ಕೆ ಸೀಮಿತಳಲ್ಲ, ಆಕೆ ಸ್ವತಂತ್ರಳು ಸರ್ವ ಶಕ್ತಳು ಎನ್ನುವುದು ಗೊತ್ತಾಗುತ್ತದೆ. ಸರ್ಕಾರದ ಈ ಚಿಕ್ಕ ಪ್ರೋತ್ಸಾಹ ಅವಳ ಕನಸಿನ ರೆಕ್ಕೆಗಳಿಗೆ ಶಕ್ತಿ ತುಂಬಿದಂತಾಗಿದೆ.
ಡಾ. ವಿಜಯಶ್ರೀ ಎಂ.ಸಿ., ವೈದ್ಯೆ, ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.