ಬೆಂಗಳೂರು: ಮದುವೆಯಾದ ಮೊದಲ ರಾತ್ರಿ ಅಶ್ಲೀಲ ವಿಡಿಯೊ ತೋರಿಸಿ, ಅದೇ ರೀತಿ ನಡೆದುಕೊಳ್ಳದಿದ್ದರೆ ಕೊಲೆ ಮಾಡುವುದಾಗಿ ಬೆದರಿಸಿದ ಪತಿಯ ವಿರುದ್ಧ ಪತ್ನಿ ಬಸವನಗುಡಿ ಮಹಿಳಾ ಠಾಣೆಗೆ ದೂರು ನೀಡಿದ್ದಾರೆ.
ಚಾಮರಾಜಪೇಟೆಯ 30 ವರ್ಷದ ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ದಾಬಸ್‍ಪೇಟೆಯ ಹರ್ಷವರ್ಧನ್ (32) ಎಂಬುವವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.
‘2018ರಲ್ಲಿ ಹರ್ಷವರ್ಧನ್ ಜೊತೆ ವಿವಾಹವಾಗಿತ್ತು. ನನ್ನ ಪೋಷಕರು ಮದುವೆಗೆ ಲಕ್ಷಾಂತರ ಹಣ ಖರ್ಚು ಮಾಡಿದ್ದರು. ವಿವಾಹಕ್ಕೆ ಮೊದಲು ಒಳ್ಳೆಯ ಕೆಲಸದಲ್ಲಿ ಇರುವುದಾಗಿ ಹೇಳಿದ್ದ ಹರ್ಷವರ್ಧನ್, ವಿವಾಹದ ನಂತರ ಕೆಲಸಕ್ಕೆ ಹೋಗದೆ ಮನೆಯಲ್ಲೇ ಇರುತ್ತಿದ್ದ’ ಎಂದು ದೂರಿನಲ್ಲಿ ಮಹಿಳೆ ತಿಳಿಸಿದ್ದಾರೆ.
‘ಮದುವೆಯಾದ ಮೊದಲ ದಿನ ಅಶ್ಲೀಲ ವಿಡಿಯೊ ತೋರಿಸಿದ, ಅದೇ ರೀತಿಯಲ್ಲಿ ಸಹಕರಿಸದಿದ್ದರೆ ಹತ್ಯೆ ಮಾಡುವುದಾಗಿ ಬೆದರಿಸಿದ್ದ. ತವರು ಮನೆಯಿಂದ ವರದಕ್ಷಿಣೆ ತರುವಂತೆಯೂ ಪೀಡಿಸುತ್ತಿದ್ದ. ಹೀಗಾಗಿ, ಪೋಷಕರು ₹ 2 ಲಕ್ಷ ನೀಡಿದ್ದರು. ಇದು ಸಾಲದೆಂದು, ನಾನು ದುಡಿದು ಸಂಪಾದಿಸಿದ್ದ ಹಣವನ್ನೂ ಕಸಿದುಕೊಳ್ಳುತ್ತಿದ್ದ’ ಎಂದೂ ದೂರಿನಲ್ಲಿ ಆರೋಪಿಸಿದ್ದಾರೆ.
‘ಪ್ರಕರಣಕ್ಕೆ ಸಂಬಂಧಿಸಿದ ಕೆಲವು ದಾಖಲೆಗಳನ್ನು ನೀಡುವಂತೆ ದೂರುದಾರರಿಗೆ ತಿಳಿಸಿದ್ದೇವೆ. ವಿಚಾರಣೆಗೆ ಹಾಜರಾಗುವಂತೆ ಹರ್ಷವರ್ಧನ್‍ಗೆ ನೋಟಿಸ್ ನೀಡಿದ್ದೇವೆ. ಇಬ್ಬರಿಂದಲೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ’ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.