ADVERTISEMENT

ಬೆಂಗಳೂರು: ಏಪ್ರಿಲ್‌ 2ರಿಂದ ರಾಮನವಮಿ ಸಂಗೀತೋತ್ಸವ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2022, 16:11 IST
Last Updated 31 ಮಾರ್ಚ್ 2022, 16:11 IST
ಹನುಮಾನ್ 
ಹನುಮಾನ್    

ಬೆಂಗಳೂರು: ತಿಂಗಳು ಪೂರ್ತಿ ಸಂಗೀತದ ರಸದೌತಣ ಬಡಿಸಲು ಶ್ರೀರಾಮಸೇವಾ ಮಂಡಳಿಯ ರಾಮನವಮಿ ಉತ್ಸವ ಟ್ರಸ್ಟ್‌ ಸಿದ್ಧತೆ ಮಾಡಿಕೊಂಡಿದೆ.

ಚಾಮರಾಜಪೇಟೆಯ ಕೋಟೆ ಪ್ರೌಢಶಾಲೆ ಆವರಣದ ವಿಶೇಷ ಚಪ್ಪರದಲ್ಲಿ ಏಪ್ರಿಲ್‌ 2ರಿಂದ ಮೇ 2ರವರೆಗೆ ನಡೆಯಲಿರುವ 84ನೇ ‘ಶ್ರೀ ರಾಮನವಮಿ ಮತ್ತು ಅಂತರರಾಷ್ಟ್ರೀಯ ಸಂಗೀತೋತ್ಸವ’ವನ್ನು 2ರಂದು ಸಂಜೆ 6 ಗಂಟೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸುವರು. ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಲೇಖಕಿ ಸುಧಾಮೂರ್ತಿ, ಮಂಡಳಿಯ ಮಹಾ ಪೋಷಕ ಸಿ.ಎಸ್‌.ಕೇದಾರ ಭಾಗವಹಿಸುವರು.

ಖ್ಯಾತ ಸಂಗೀತಗಾರರು ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಲಿದ್ದಾರೆ. ಭೌತಿಕ ಹಾಗೂ ಆನ್‌ಲೈನ್ ಎರಡನ್ನು ಒಳಗೊಂಡ ಹೈಬ್ರಿಡ್ ಮಾದರಿಯಲ್ಲಿ ಕಾರ್ಯಕ್ರಮಗಳ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.ಹಿಂದೂಸ್ತಾನಿ, ಕರ್ನಾಟಕ ಶಾಸ್ತ್ರೀಯ ಸಂಗೀತಗಾರರು, ವಿದ್ವಾಂಸರು, ವೀಣೆ, ಪಿಟೀಲು, ಕೊಳಲು ವಾದಕರು ಸಂಗೀತ ಕಛೇರಿ ನಡೆಸಿಕೊಡಲಿದ್ದಾರೆ.

ADVERTISEMENT

ದೇಶದ 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಏ.10ರಂದು ‘ಭಾರತ ಸ್ವತಂತ್ರ ಸಂಗೀತ ವೈಭವಂ’ ಎನ್ನುವ ವಿಶೇಷ ಕಾರ್ಯಕ್ರಮ ನಡೆಯಲಿದೆ. ಡಾ.ಮೈಸೂರು ಮಂಜುನಾಥ್‌ ನೇತೃತ್ವದಲ್ಲಿ 75 ಸಂಗೀತಗಾರರು ಕಾರ್ಯಕ್ರಮ ನೀಡಲಿದ್ದಾರೆ.

ಪಿ.ಉನ್ನಿಕೃಷ್ಣನ್, ರಂಜನಿ ಗಾಯತ್ರಿ, ಲಾಲ್ಗುಡಿ ಕೃಷ್ಣನ್ ಮತ್ತು ವಿಜಯಲಕ್ಷ್ಮಿ, ಬೆಂಗಳೂರು ಎಸ್. ಶಂಕರ್, ಸಿಕ್ಕಿಲ್ ಗುರುಚರಣ್, ವಿಜಯಾ ಶಂಕರ್, ಪ್ರವೀಣ್ ಗೋಡ್ಖಿಂಡಿ,ಅಭಿಷೇಕ್ ರಘುರಾಮ್,ಗಾಯತ್ರಿ ವೆಂಕಟರಾಘವನ್, ಮೈಸೂರು ನಾಗರಾಜ್ ಮತ್ತು ಮೈಸೂರು ಮಂಜುನಾಥ್, ತ್ರಿಶ್ಶೂರ್‌ ಸಹೋದರರು, ಕುಮರೇಶ್ ಮತ್ತು ಗಣೇಶ್, ವಿದ್ಯಾಭೂಷಣ, ಫಾಲ್ಘಾಟ್ ರಾಮಪ್ರಸಾದ್,ರಾಮಕೃಷ್ಣನ್ ಮೂರ್ತಿ, ಎಸ್. ಸಾಕೇತರಾಮನ್, ಮಲ್ಲಾಡಿ ಸಹೋದರರು, ಪಂಡಿತ್ ವೆಂಕಟೇಶ್ ಕುಮಾರ್ ಸೇರಿದಂತೆನಾಡಿನ–ದೇಶದ ಹಲವು ಸಂಗೀತ ವಿದ್ವಾಂಸರು ಸಂಗೀತೋತ್ಸವದಲ್ಲಿ ಕ‌ಛೇರಿ ನಡೆಸಿಕೊಡಲಿದ್ದಾರೆ.

www.ramanavamitickets.com ವೆಬ್‌ಸೈಟ್‌ ಮೂಲಕ ಟಿಕೆಟ್‌ಗಳನ್ನು ಕಾಯ್ದಿರಿಸಬಹುದು. ಮಾಹಿತಿಗೆ ಮಂಡಳಿಯ ಪ್ರಧಾನ ಕಾರ್ಯದರ್ಶಿ ಮತ್ತು ಮ್ಯಾನೇಜಿಂಗ್‌ ಟ್ರಸ್ಟಿ ಎಸ್‌.ಎನ್‌. ವರದರಾಜ್‌ (9448079079), ಕಾರ್ಯನಿರ್ವಾಹಕ ಅಧಿಕಾರಿ ಎಸ್‌ ಅಭಿಜಿತ್‌ ವರದರಾಜ್‌ (9483518012) ಅಥವಾ ಕಚೇರಿಯನ್ನು (080–26604031) ದೂರವಾಣಿ ಮೂಲಕ ಸಂಪರ್ಕಿಸಬಹುದು.ಈ ಕಾರ್ಯಕ್ರಮಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಇನ್ಫೊಸಿಸ್‌ ಫೌಂಡೇಷನ್‌ ಸೇರಿದಂತೆ ವಿವಿಧ ಸಂಸ್ಥೆಗಳ ಸಹಯೋಗವಿದೆ ಎಂದು ಮಂಡಳಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.