ADVERTISEMENT

ಸ್ವಚ್ಛಗೊಂಡ ಶಾಲೆ: ತರಗತಿ ಆರಂಭ

ಕೋಡಿ ಒಡೆದ ಹೊಸಕೆರೆಹಳ್ಳಿ ಕೆರೆ– ಜಲಾವೃತವಾಗಿದ್ದ ಶಾರದಾಂಬಾ ವಿದ್ಯಾನಿಕೇತನ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2019, 23:38 IST
Last Updated 13 ನವೆಂಬರ್ 2019, 23:38 IST
ಶಾಲೆಯ ಆವರಣದಲ್ಲಿ ಪುಸ್ತಕಗಳು ಹಾಗೂ ದಾಖಲಾತಿಗಳನ್ನು ಒಣಹಾಕಿರುವುದು
ಶಾಲೆಯ ಆವರಣದಲ್ಲಿ ಪುಸ್ತಕಗಳು ಹಾಗೂ ದಾಖಲಾತಿಗಳನ್ನು ಒಣಹಾಕಿರುವುದು   

ಬೆಂಗಳೂರು: ಹೊಸಕೆರೆಹಳ್ಳಿ ಕೆರೆಯ ನೀರು ಶಾಲೆಯ ಆವರಣಕ್ಕೆ ನುಗ್ಗಿದ ಪರಿಣಾಮ ವಿದ್ಯಾರ್ಥಿಗಳಿಗೆ ಎರಡು ದಿನ ರಜೆ ನೀಡಿದ್ದ ಜವರೇಗೌಡನಗರದ ‘ಶ್ರೀ ಶಾರದಾಂಬಾ ವಿದ್ಯಾನಿಕೇತನ’ ಶಾಲೆಯು ಬುಧವಾರ ಪುನರಾರಂಭವಾಯಿತು.

ಭಾರೀ ಮಳೆಯಿಂದಾಗಿ 59 ಎಕರೆ ವಿಸ್ತೀರ್ಣದ ಕೆರೆ ಭರ್ತಿಯಾದ ಪರಿಣಾಮ ಕೋಡಿ ಒಡೆದು, ಪುಷ್ಪಗಿರಿ ಬಡಾವಣೆಯ 50ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿತ್ತು. ಜಲಾವೃತವಾಗಿದ್ದ ‌ಶಾಲೆಯ ಆವರಣ ಹೊಳೆಯಂತಾಗಿತ್ತು. ನೆಲಮಹಡಿಯಲ್ಲಿದ್ದ ಪೀಠೋಪಕರಣ, ಪುಸ್ತಕಗಳು ಒದ್ದೆಯಾಗಿದ್ದವು. ಕೊಠಡಿಗಳಲ್ಲಿ ಹಾಗೂ ಆವರಣದಲ್ಲಿ ಕೆಸರು ನಿಂತ ಪರಿಣಾಮ ಆಡಳಿತ ಮಂಡಳಿ ವಿದ್ಯಾರ್ಥಿಗಳಿಗೆ ಸೋಮವಾರ ಹಾಗೂ ಮಂಗಳವಾರ ರಜೆ ಘೋಷಿಸಿತ್ತು.

ಶಾಲೆಯಲ್ಲಿ ಪೂರ್ವಪ್ರಾಥಮಿಕದಿಂದ ಎಸ್ಸೆಸ್ಸೆಲ್ಸಿವರೆಗೆ 200 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ನೀರಿನಿಂದ ಒದ್ದೆಯಾಗಿರುವ ಪುಸ್ತಕಗಳು ಹಾಗೂ ದಾಖಲಾತಿಗಳನ್ನು ಶಾಲೆಯ ಆವರಣದಲ್ಲಿ ಒಣಹಾಕಲಾಗಿದೆ. ಅದೇ ರೀತಿ, ಪೀಠೋಪಕರಣಗಳನ್ನು ಕೂಡಾ ಬಿಸಿಲಿನಲ್ಲಿ ಇಡಲಾಗಿದೆ. ಕೆರೆಯ ನೀರು ನುಗ್ಗಿದ ಪರಿಣಾಮ ಅಂದಾಜು ₹ 3 ಲಕ್ಷ ಹಾನಿಯಾಗಿದೆ ಎಂದು ಶಾಲೆಯ ಆಡಳಿತ ಮಂಡಳಿ ಅಂದಾಜಿಸಿದೆ.

ADVERTISEMENT

3 ಕಂಪ್ಯೂಟರ್‌ಗಳ ಸಿಪಿಯು ಕೂಡಾ ಹಾಳಾಗಿದೆ. ಅದೇ ರೀತಿ, ಶಾಲೆಯ ಕಾಂಪೌಂಡ್‌ ಕೂಡಾ ಕುಸಿದ ಬಿದ್ದಿದೆ. ಕೊಳಚೆ ನೀರು ನಿಂತಿದ್ದ ಸ್ಥಳದಲ್ಲಿ ರಾಸಾಯನಿಕಗಳನ್ನು ಸಿಂಪಡಿಸಲಾಗಿದೆ. ‘ಇದೇ ಮೊದಲ ಬಾರಿ ಈ ರೀತಿ ಶಾಲೆಯ ಆವರಣಕ್ಕೆ ನೀರು ಬಂದಿದೆ. ಅಗತ್ಯ ಪುಸ್ತಕಗಳು ಲಭ್ಯವಿದ್ದು, ಮಕ್ಕಳ ಕಲಿಕೆಗೆ ಯಾವುದೇ ತೊಡಕಾಗುವುದಿಲ್ಲ’ ಎಂದು ಶಿಕ್ಷಕರೊಬ್ಬರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.