ADVERTISEMENT

‘ಶುಶೃತಿ’ ಬ್ಯಾಂಕ್‌ ವಂಚನೆ: ಪತ್ನಿ ಸಮೇತ ಅಧ್ಯಕ್ಷ ಬಂಧನ

ನೂರಾರು ಕೋಟಿ ರೂಪಾಯಿ ಠೇವಣಿ: 14 ಸ್ಥಳಗಳ ಮೇಲೆ ಸಿಸಿಬಿ ದಾಳಿ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2022, 18:51 IST
Last Updated 12 ಅಕ್ಟೋಬರ್ 2022, 18:51 IST
ನಗರದ ವಿಲ್ಸನ್ ಗಾರ್ಡನ್‌ನಲ್ಲಿರುವ ಶುಶೃತಿ ಸೌಹಾರ್ದ ಸಹಕಾರ ಬ್ಯಾಂಕ್‌ ಮುಖ್ಯ ಕಚೇರಿ
ನಗರದ ವಿಲ್ಸನ್ ಗಾರ್ಡನ್‌ನಲ್ಲಿರುವ ಶುಶೃತಿ ಸೌಹಾರ್ದ ಸಹಕಾರ ಬ್ಯಾಂಕ್‌ ಮುಖ್ಯ ಕಚೇರಿ   

ಬೆಂಗಳೂರು: ಠೇವಣಿದಾರರಿಂದ ನೂರಾರು ಕೋಟಿ ರೂಪಾಯಿ ಸಂಗ್ರಹಿಸಿ ವಂಚಿಸಿರುವ ಆರೋಪದಡಿ ಶುಶೃತಿ ಸೌಹಾರ್ದ ಸಹಕಾರ ಬ್ಯಾಂಕ್‌ ಅಧ್ಯಕ್ಷ ಸೇರಿ ಐವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

‘ಬ್ಯಾಂಕ್ ವಂಚನೆಗೆ ಸಂಬಂಧ ಪಟ್ಟಂತೆ 2021ರಿಂದ ಇಲ್ಲಿಯವರೆಗೂ ನಗರದ ವಿವಿಧ ಠಾಣೆಗಳಲ್ಲಿ ನಾಲ್ಕು ಎಫ್‌ಐಆರ್‌ಗಳು ದಾಖಲಾಗಿದ್ದವು. ಕಮಿಷನರ್ ನಿರ್ದೇಶನದಂತೆ ಪ್ರಕರಣಗಳ ತನಿಖೆ ಕೈಗೆತ್ತಿಕೊಳ್ಳಲಾಗಿದೆ. ಆರೋಪಿಗಳಾದ ಬ್ಯಾಂಕ್‌ನ ಅಧ್ಯಕ್ಷ ಶ್ರೀನಿವಾಸ್‌ಮೂರ್ತಿ, ಅವರ ಪತ್ನಿ ಧರಣಿದೇವಿ, ಪ್ರಶಾಂತ್, ಸುರೇಶ್ ಹಾಗೂ ಆಶಾ ಎಂಬುವರನ್ನು ಬುಧವಾರ ಬಂಧಿಸಲಾಗಿದೆ’ ಎಂದು ಸಿಸಿಬಿ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘1998ರಲ್ಲಿ ಕಾರ್ಯಾರಂಭ ಮಾಡಿದ್ದ ಶುಶೃತಿ ಸಹಕಾರ ಬ್ಯಾಂಕ್‌ನ ಮುಖ್ಯಕಚೇರಿ, ವಿಲ್ಸನ್ ಗಾರ್ಡನ್‌ನಲ್ಲಿದೆ. ನಗರದ ವಿವಿಧ ಪ್ರದೇಶಗಳಲ್ಲಿ ಬ್ಯಾಂಕ್ ಶಾಖೆಗಳಿವೆ. ಮುಖ್ಯ ಕಚೇರಿ, ಶಾಖೆಗಳು ಹಾಗೂ ಆರೋಪಿಗಳ ಮನೆ ಸೇರಿದಂತೆ 14 ಸ್ಥಳಗಳ ಮೇಲೂ ಬುಧವಾರ ದಾಳಿ ಮಾಡಲಾಯಿತು’ ಎಂದು ಹೇಳಿದರು.

ADVERTISEMENT

‘ಎಸಿಪಿ ನೇತೃತ್ವದ ತಂಡಗಳು, ಏಕಕಾಲದಲ್ಲಿ ದಾಳಿ ಮಾಡಿ 14 ಸ್ಥಳಗಳಲ್ಲಿ ಪರಿಶೀಲನೆ ನಡೆಸಿದವು. ₹ 39 ಲಕ್ಷ ನಗದು, ಚಿನ್ನಾಭರಣ, ಬೆಳ್ಳಿ ಸಾಮಗ್ರಿ, ಬ್ಯಾಂಕ್ ಠೇವಣಿಗೆ ಸಂಬಂಧಪಟ್ಟ ದಾಖಲೆಗಳು, ಲಕ್ಷಾಂತರ ರೂಪಾಯಿ ಮೌಲ್ಯದ ಆಸ್ತಿ ದಾಖಲೆಗಳು ಹಾಗೂ 9 ವಾಹನಗಳನ್ನು ಜಪ್ತಿ ಮಾಡಲಾಗಿದೆ’ ಎಂದು ವಿವರಿಸಿದರು.

‘ವರ್ಷಕ್ಕೆ ಶೇ 8ರಿಂದ ಶೇ 10ರಷ್ಟು ಬಡ್ಡಿ ನೀಡುವುದಾಗಿ ಬ್ಯಾಂಕ್‌ ಆಡಳಿತ ಮಂಡಳಿ ಆಮಿಷವೊಡ್ಡಿತ್ತು. ಅದನ್ನು ನಂಬಿದ್ದ ನಿವೃತ್ತ ಸರ್ಕಾರಿ ನೌಕರರು, ಖಾಸಗಿ ಉದ್ಯೋಗಿಗಳು, ವ್ಯಾಪಾರಿಗಳು ಹಾಗೂ ಇತರರು, ಬ್ಯಾಂಕ್‌ನಲ್ಲಿ ನೂರಾರು ಕೋಟಿ ರೂಪಾಯಿ ಠೇವಣಿ ಇರಿಸಿದ್ದರು. ಕಳೆದ ಒಂದು ವರ್ಷದಿಂದ ಠೇವಣಿದಾರರಿಗೆ ಬಡ್ಡಿ ನೀಡಿರಲಿಲ್ಲ. ಠೇವಣಿ ಹಣ ವಾಪಸು ಕೇಳಿದರೂ ಆಡಳಿತ ಮಂಡಳಿಯವರು ಕೊಟ್ಟಿರಲಿಲ್ಲ. ಇದರಿಂದ ಬೇಸತ್ತ ಠೇವಣಿದಾರರು, ಠಾಣೆಗಳಲ್ಲಿ ದೂರು ದಾಖಲಿಸಿದ್ದರು’ ಎಂದೂ ಹೇಳಿದರು.

ನಿಯಮಬಾಹಿರ ಸಾಲ: ‘ಅಧ್ಯಕ್ಷ ಹಾಗೂ ಇತರರು ಸೇರಿಕೊಂಡು, ನಿಯಮಬಾಹಿರವಾಗಿ ಸಾಲ ನೀಡಿದ್ದಾರೆ. ಇದರಲ್ಲಿ ಪಾಲು ಪಡೆದು ಅಕ್ರಮ ಸಂಪಾದನೆ ಮಾಡಿರುವುದು ತನಿಖೆಯಿಂದ ಗೊತ್ತಾಗಿದೆ. ಇವರೆಲ್ಲರ ಕೃತ್ಯದಿಂದಾಗಿ ಬ್ಯಾಂಕ್‌ನ ಆರ್ಥಿಕ ಸ್ಥಿತಿ ಹದಗೆಟ್ಟಿದ್ದು, ಠೇವಣಿ ವಾಪಸು ನೀಡಲು ಸಹ ಹಣವಿಲ್ಲದಂತಾಗಿದೆ’ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

‘ಕಡಿಮೆ ಮೊತ್ತದ ಶ್ಯೂರಿಟಿ ಪಡೆದು, ಹೆಚ್ಚಿನ ಮೊತ್ತದ ಸಾಲ ನೀಡಲಾಗಿದೆ. ಅಧ್ಯಕ್ಷ ಹಾಗೂ ಅವರ ಪತ್ನಿಯ ಸಂಬಂಧಿಕರೂ ಸಾಲ ಪಡೆದಿರುವ ಮಾಹಿತಿ ಇದೆ. ಸಾಲ ಪಡೆದ ಬಹುತೇಕರು, ಅದನ್ನು ವಾಪಸು ಪಾವತಿ ಮಾಡಿಲ್ಲ. ಅವರೆಲ್ಲರಿಗೂ ನೋಟಿಸ್ ನೀಡಿ ವಿಚಾರಣೆ ನಡೆಸಬೇಕಿದೆ’ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.