ADVERTISEMENT

ಸರ್ಕಾರದ ಜನವಿರೋಧಿ ಕಾರ್ಯಗಳನ್ನೂ ತಿಳಿಸಲಿ: ಮಾಧ್ಯಮಗಳಿಗೆ ಸಿದ್ದರಾಮಯ್ಯ ಸಲಹೆ

ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2025, 14:14 IST
Last Updated 19 ಸೆಪ್ಟೆಂಬರ್ 2025, 14:14 IST
ಬೆಂಗಳೂರಿನಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ 2024ನೇ ಸಾಲಿನ ‘ವಡ್ಡರ್ಸೆ ರಘುರಾಮ ಶೆಟ್ಟಿ ಸಾಮಾಜಿಕ ನ್ಯಾಯ ಪತ್ರಿಕೋದ್ಯಮ ಪ್ರಶಸ್ತಿ’ಯನ್ನು ಸಿದ್ದರಾಮಯ್ಯ ಅವರು ಪತ್ರಕರ್ತ ಡಿ. ಉಮಾಪತಿ ಅವರಿಗೆ ಪ್ರದಾನ ಮಾಡಿದರು.
ಪ್ರಜಾವಾಣಿ ಚಿತ್ರ
ಬೆಂಗಳೂರಿನಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ 2024ನೇ ಸಾಲಿನ ‘ವಡ್ಡರ್ಸೆ ರಘುರಾಮ ಶೆಟ್ಟಿ ಸಾಮಾಜಿಕ ನ್ಯಾಯ ಪತ್ರಿಕೋದ್ಯಮ ಪ್ರಶಸ್ತಿ’ಯನ್ನು ಸಿದ್ದರಾಮಯ್ಯ ಅವರು ಪತ್ರಕರ್ತ ಡಿ. ಉಮಾಪತಿ ಅವರಿಗೆ ಪ್ರದಾನ ಮಾಡಿದರು. ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಊಹಾ ಪತ್ರಿಕೋದ್ಯಮಕ್ಕೆ ಅವಕಾಶ ನೀಡದೇ ಸರ್ಕಾರಗಳ ಜನಪರ ವಿಚಾರದ ಜತೆಯಲ್ಲಿಯೇ ಜನ ವಿರೋಧಿ ಕೆಲಸಗಳನ್ನೂ ಮಾಧ್ಯಮಗಳು ಜನರಿಗೆ ವಸ್ತುನಿಷ್ಠವಾಗಿ ತಿಳಿಸಬೇಕು ́ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಲಹೆ ನೀಡಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ  ಶುಕ್ರವಾರ ಆಯೋಜಿಸಿದ್ದ 2024 ನೇ ವರ್ಷದ ‘ವಡ್ಡರ್ಸೆ ರಘುರಾಮ ಶೆಟ್ಟಿ ಸಾಮಾಜಿಕ ನ್ಯಾಯ ಪತ್ರಿಕೋದ್ಯಮ ಪ್ರಶಸ್ತಿ’ ಹಾಗೂ 2017 ರಿಂದ 2023ರವರೆಗಿನ ಪರಿಸರ ಮತ್ತು ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

‘ಮಾಧ್ಯಮಗಳು ಸತ್ಯ ಅಸತ್ಯದ ಶೋಧನೆ ನಡೆಸಬೇಕು. ಸತ್ಯ ಶೋಧನೆ ಮಾಡಬೇಕೇ ವಿನಃ ಒಬ್ಬ ವ್ಯಕ್ತಿಯು ತಪ್ಪು ಮಾಡದಿದ್ದರೂ, ಸುಮ್ಮನೆ ಆರೋಪಗಳನ್ನು ಮಾಡಬಾರದು. ಈಗಿನ ಮಾಧ್ಯಮಗಳು ಇಂತಹ ಸಂಹಿತೆಗಳನ್ನು ಅನುಸರಿಸುತ್ತಿಲ್ಲ’ ಎಂದರು.

ADVERTISEMENT

‘ಅನಗತ್ಯ ವಿಷಯಗಳಿಗೆ ಮಾಧ್ಯಮಗಳು ಒತ್ತು ನೀಡಿ ಸಮಾಜದ ಸ್ವಾಸ್ಥ್ಯ ಹಾಳು ಮಾಡಬಾರದು. ಮೈಸೂರು ದಸರಾ ಸಾಂಸ್ಕೃತಿಕ ಹಬ್ಬ. ಕರ್ನಾಟಕವು ಸಹಿಷ್ಣುತೆ, ಸೌಹಾರ್ದತೆಯ ನಾಡು. ದಸರಾ ಉದ್ಘಾಟನೆಗೆ ಸಾಹಿತಿ ಬಾನು ಮುಷ್ತಾಕ್‌ ಅವರನ್ನು ಆಯ್ಕೆ ಮಾಡಿದರೆ ಅದಕ್ಕೆ ಧರ್ಮದ ಲೇಪನ ಮಾಡಲಾಯಿತು. ಮಾಧ್ಯಮಗಳಲ್ಲೂ ಪರ ವಿರೋಧದ ಚರ್ಚೆಗಳು ನಡೆಯಿತು. ಈಗ ನ್ಯಾಯಾಲಯವೇ ರಾಜ್ಯ ಸರ್ಕಾರದ ಕ್ರಮವನ್ನು ಎತ್ತಿ ಹಿಡಿದಿದೆ’ ಎಂದು ಸಿದ್ದರಾಮಯ್ಯ ಹೇಳಿದರು.

‘ಸಮಾಜದಲ್ಲಿನ ಅಸಮಾನತೆಗೆ ಕಾರಣಗಳು ಹಾಗೂ ಸಾಮಾಜಿಕ ನ್ಯಾಯದ ಬಗ್ಗೆ ಜನರಲ್ಲಿ ಮಾಧ್ಯಮಗಳು ಜಾಗೃತಿ ಮೂಡಿಸಬೇಕು. ಪರಿಸರ ಅಭಿವೃದ್ಧಿ ಸಂರಕ್ಷಣೆಗೂ ಹೆಚ್ಚು ಒತ್ತು ನೀಡಬೇಕು. ಪತ್ರಕರ್ತರು ಪರಿಸರ ನ್ಯಾಯಕ್ಕೆ ಬದ್ಧವಾಗಿರಬೇಕು’ ಎಂದು ತಿಳಿಸಿದರು.

ಸಚಿವ ಬೈರತಿ ಸುರೇಶ್, ವಿಧಾನಪರಿಷತ್‌ನ ಮುಖ್ಯ ಸಚೇತಕ ಸಲೀಂ ಅಹಮದ್‌, ಸದಸ್ಯರಾದ ಸದಸ್ಯರಾದ ನಸೀರ್‌ ಅಹಮದ್‌, ಕೆ.ಶಿವಕುಮಾರ್‌, ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷ ನ್ಯಾ.ಅಶೋಕ ಹಿಂಚಿಗೇರಿ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್‌, ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲ, ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಷಾ ಖಾನುಂ, ಇಲಾಖೆ ಕಾರ್ಯದರ್ಶಿ ಬಿ.ಬಿ.ಕಾವೇರಿ, ಆಯುಕ್ತ ಹೇಮಂತ್‌ ನಿಂಬಾಳ್ಕರ್‌ ಹಾಜರಿದ್ದರು.

ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ ಪಡೆದ ಎಂ.ಎನ್. ಯೋಗೇಶ್‌ ಪ್ರಜಾವಾಣಿ ಚಿತ್ರ.
ಪರಿಸರ ಪತ್ರಿಕೋದ್ಯಮ ಪ್ರಶಸ್ತಿ ಪಡೆದ ಆರ್. ಮಂಜುನಾಥ್. ಪ್ರಜಾವಾಣಿ ಚಿತ್ರ.

ಪ್ರಜಾವಾಣಿಯ ಇಬ್ಬರಿಗೆ ಪ್ರಶಸ್ತಿ

ಪತ್ರಕರ್ತ ಡಿ.ಉಮಾಪತಿ ಅವರು ವಡ್ಡರ್ಸೆ ರಘುರಾಮಶೆಟ್ಟಿ ಪ್ರಶಸ್ತಿ ‘ಪ್ರಜಾವಾಣಿ’ಯ ಆರ್‌.ಮಂಜುನಾಥ್‌ ಅವರೊಂದಿಗೆ ವಿಜಯಲಕ್ಷ್ಮಿ ಶಿಬರೂರು ಬಿ.ಎಂ.ಟಿ.ರಾಜೀವ್‌ ವಿನೋದ್‌ಕುಮಾರ್‌ ಬಿ.ನಾಯ್ಕ್‌ ಮಾಲತೇಶ ಅಂಗೂರ ಸುಧೀರ್‌ ಶೆಟ್ಟಿ ಮಲ್ಲಿಕಾರ್ಜುನ ಹೊಸಪಾಳ್ಯ ಅವರು ಪರಿಸರ ಪತ್ರಿಕೋದ್ಯಮ ಪ್ರಶಸ್ತಿ ಪಡೆದರು. ‘ಪ್ರಜಾವಾಣಿ’ಯ ಎಂ.ಎನ್. ಯೋಗೇಶ್‌ ಅವರ ಜತೆಯಲ್ಲಿ ಚೀ.ಜ.ರಾಜೀವ ದೇವಯ್ಯ ಗುತ್ತೇದಾರ್‌ ಗಿರೀಶ್‌ ಲಿಂಗಣ್ಣ ನೌಶಾದ್‌ ಬಿಜಾಪುರ್‌ ಜಿ.ಟಿ.ಸತೀಶ್‌ ಎಸ್‌.ಗಿರೀಶ್‌ ಬಾಬು ಅಭಿವೃದ್ದಿ ಪತ್ರಿಕೋದ್ಯಮ ಪ್ರಶಸ್ತಿ ಸ್ವೀಕರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.