ADVERTISEMENT

‘ಆಸ್ಪತ್ರೆಗಳಲ್ಲಿ ಹಾಸಿಗೆ 50 ಪಟ್ಟು ಹೆಚ್ಚಿಸಿ’

ಮುಖ್ಯಮಂತ್ರಿಗೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪತ್ರ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2021, 20:41 IST
Last Updated 28 ಏಪ್ರಿಲ್ 2021, 20:41 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು: ‘ಕೋವಿಡ್ ಹೆಚ್ಚುತ್ತಿರುವುದರಿಂದ ರಾಜ್ಯದ ಆಸ್ಪತ್ರೆಗಳಲ್ಲಿ ಲಭ್ಯವಿರುವ ಹಾಸಿಗೆಗಳನ್ನು ಕನಿಷ್ಠ 50 ಪಟ್ಟು ಹೆಚ್ಚಿಸಬೇಕು’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್‌. ಯಡಿ ಯೂರಪ್ಪ ಅವರಿಗೆ ಪತ್ರ ಬರೆದಿರುವ ಅವರು, ಅವಶ್ಯವಿದ್ದರೆ ಶಾಲೆ, ಹಾಸ್ಟೆಲ್, ಹೋಟೆಲ್, ಕಲ್ಯಾಣ ಮಂಟಪ ಮತ್ತಿತರ ಕಡೆಗಳಲ್ಲಿ ತಾತ್ಕಾಲಿಕವಾಗಿ ಬೆಡ್‌ ವ್ಯವಸ್ಥೆ ಮಾಡಬೇಕು’ ಎಂದೂ ಪ್ರತಿಪಾದಿಸಿದ್ದಾರೆ.

‘ವೈದ್ಯಕೀಯ ಪದವಿ ಅಂತಿಮ ವರ್ಷಗಳಲ್ಲಿರುವ ವೈದ್ಯಕೀಯ, ಅರೆವೈದ್ಯಕೀಯ ವಿದ್ಯಾರ್ಥಿಗಳು, ದಾದಿಯರನ್ನು ಸೋಂಕಿತರ ಆರೈಕೆಗೆ ನೇಮಿಸಬೇಕು. ಸ್ವ-ಇಚ್ಛೆಯಿಂದ ಮುಂದೆ ಬರುವ ರಾಜಕೀಯೇತರ ಸ್ವಯಂ ಸೇವಕರಿಗೆ ತರಬೇತಿ ನೀಡಿ, ತಜ್ಞ ವೈದ್ಯರ ನೇತೃ‌ತ್ವದಲ್ಲಿ ತಂಡಗಳನ್ನು ರಚಿಸಿ, ಚಿಕಿತ್ಸೆ ನೀಡಬೇಕು. ನಿವೃತ್ತ ವೈದ್ಯರು, ದಾದಿಯರನ್ನೂ ತಾತ್ಕಾಲಿಕವಾಗಿ ಮರು ನೇಮಕ ಮಾಡಿಕೊಳ್ಳಬೇಕು’ ಎಂದೂ ಆಗ್ರಹಿಸಿದ್ದಾರೆ.

ADVERTISEMENT

‘ವೆಂಟಿಲೇಟರ್, ಆಕ್ಸಿಜನ್‌ ಬೆಡ್‌ ಗಳನ್ನೂ ಕನಿಷ್ಠ 40 ಪಟ್ಟು ಹೆಚ್ಚಿಸಬೇಕು. ರೆಮ್‌ಡಿಸಿವರ್ ಸೇರಿ ದಂತೆ ಎಲ್ಲ ಜೀವರಕ್ಷಕ ಔಷಧಗಳನ್ನು ಕೇಂದ್ರದಿಂದ ಪಡೆದುಕೊಳ್ಳಬೇಕು. ಬೆಂಗಳೂರಷ್ಟೇ ಅಲ್ಲದೆ, ಉಳಿದ ಜಿಲ್ಲೆಗಳಲ್ಲೂ ಅಗತ್ಯವಿರುವ ವ್ಯವಸ್ಥೆ ಮಾಡಬೇಕು. ಕಾಳಸಂತೆಯಲ್ಲಿ ಔಷಧ ಮಾರಾಟ ಮಾಡುತ್ತಿರುವವರ ಮೇಲೆ ಕ್ರಮ ಕೈಗೊಳ್ಳಬೇಕು. ಖಾಸಗಿ ಆಸ್ಪತ್ರೆಗಳು ರೋಗಿಯಿಂದ ಹೆಚ್ಚು ಹಣ ವಸೂಲಿ ಮಾಡದಂತೆ ಸ್ಪಷ್ಟ ಮಾರ್ಗಸೂಚಿ ಹೊರಡಿಸಬೇಕು’ ಎಂದೂ ಸಲಹೆ ನೀಡಿದ್ದಾರೆ

‘ಕೋವಿಡ್ ಚಿಕಿತ್ಸೆ, ಔಷಧ, ಲಸಿಕೆ ಕುರಿತು ವೈಜ್ಞಾನಿಕವಾದ ಮಾರ್ಗಸೂಚಿಯನ್ನು ತಕ್ಷಣ ಹೊರಡಿಸಬೇಕು. ಸೋಂಕು ತಗಲುವ ಮೊದಲೇ ಸಕ್ಕರೆ ಕಾಯಿಲೆ, ರಕ್ತದೊತ್ತಡ, ಥೈರಾಯ್ಡ್ ಸಮಸ್ಯೆ, ಹೃದಯ, ಕಿಡ್ನಿ, ಲಿವರ್, ಮೆದುಳು ಸಮಸ್ಯೆಗಳಿದ್ದರೆ ಅವುಗಳಿಗೆ ನಿಯಮಿತವಾಗಿ ನೀಡಲಾಗುವ ಔಷಧ ಗಳನ್ನು ನೀಡುವ ಜೊತೆಗೇ ಕೋವಿಡ್‌ಗೆ ಚಿಕಿತ್ಸೆ ನೀಡಬೇಕು’ ಎಂದೂ ಪತ್ರದಲ್ಲಿ ಹೇಳಿದ್ದಾರೆ.

‘ತಜ್ಞರ ಸಲಹೆಯಂತೆ ಅರ್ಹ ಎಲ್ಲ ರಿಗೂ ಉಚಿತವಾಗಿ ಲಸಿಕೆ ನೀಡಬೇಕು. ಲಸಿಕೆ ತಯಾರಿಸುವ ಕಂಪನಿಗಳು ಭಾರಿ ಪ್ರಮಾಣದಲ್ಲಿ ಲಾಭ ಮಾಡಿಕೊಳ್ಳುವ ಮೂಲಕ ಕಾರ್ಪೊರೇಟ್ಭ್ರಷ್ಟಾಚಾರಕ್ಕೆ ಕೇಂದ್ರ ಅವಕಾಶ ಮಾಡಿಕೊಡಬಾರದು. ರಾಜ್ಯ ಸರ್ಕಾರ ನಯಾ ಪೈಸೆ ನೀಡದೆ ಲಸಿಕೆಗಳನ್ನು ಪಡೆದು ಕೊಳ್ಳಬೇಕು. ಈ ಬಗ್ಗೆ ಪ್ರಧಾನಿಯನ್ನು ರಾಜ್ಯದ ಸಂಸದರು ಒತ್ತಾಯಿಸಬೇಕು’ ಎಂದೂ ಅವರು ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.