ADVERTISEMENT

ಬೆಂಗಳೂರು | ಸಿಎಂ ನಗರ ಪ್ರದಕ್ಷಿಣೆ: ರಸ್ತೆಯಲ್ಲಿ ತ್ಯಾಜ್ಯ ಚೆಲ್ಲಿದ್ದಕ್ಕೆ ಗರಂ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2025, 10:23 IST
Last Updated 27 ಸೆಪ್ಟೆಂಬರ್ 2025, 10:23 IST
   

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಮಧ್ಯಾಹ್ನದಿಂದ ನಗರ ಪ್ರದಕ್ಷಿಣೆ ನಡೆಸುತ್ತಿದ್ದಾರೆ.

ಬಳ್ಳಾರಿ ರಸ್ತೆಯ ವಿಂಡ್ಸರ್ ಮ್ಯಾನರ್ ವೃತ್ತ ಚರಂಡಿ ವ್ಯವಸ್ಥೆ ಸರಿ ಇಲ್ಲದ ಕಾರಣ ನೀರು ನಿಲ್ಲುತ್ತಿದೆ ಎಂದು ಅಧಿಕಾರಿಗಳು ಮುಖ್ಯಮಂತ್ರಿಯವರಿಗೆ ಮಾಹಿತಿ ನೀಡಿದರು.

ರಸ್ತೆಯಲ್ಲಿ ನೀರು ನಿಲ್ಲದಂತೆ ನೀರು ಸರಾಗವಾಗಿ ಹರಿದು ಚರಂಡಿ ಸೇರುವ ಹಾಗೆ ವ್ಯವಸ್ಥೆ ಮಾಡಿ ಎಂದು ಮುಖ್ಯಮಂತ್ರಿಯವರು ಜಿಬಿಎ ಅಧಿಕಾರಿಗಳಿಗೆ ಸೂಚನೆ ನೀಡಿದರು.

ADVERTISEMENT

ವಿಡ್ಸಂರ್ ಮ್ಯಾನರ್ ವೃತ್ತದಲ್ಲಿನ ರಸ್ತೆ ಕಾರ್ಯ, ಮತ್ತೊಂದು ಬದಿ ರಾತ್ರಿ ಮುಗಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ರಸ್ತೆಯಲ್ಲಿ ಘನ ತ್ಯಾಜ್ಯ ಚೆಲ್ಲಿದ್ದಕ್ಕೆ ಗರಂ ಆದ ಸಿಎಂ

ಮಾರ್ಗ ಮಧ್ಯದಲ್ಲಿ‌ ರಿಂಗ್ ರಸ್ತೆಯ ಬದಿಯಲ್ಲಿ ಸಿಸಿ ಕ್ಯಾಮರಾ ಇಲ್ಲದಿರುವ ಜಾಗದಲ್ಲಿ ಹಳೆ ಕಟ್ಟಡ ತ್ಯಾಜ್ಯ ಸುರಿದಿರುವುದನ್ನು ಗಮನಿಸಿದ ಸಿಎಂ, ತಮ್ಮ ವಾಹನ ಚಾಲಕ ನವೀನ್‌ಗೆ ಕಾರು ನಿಲ್ಲಿಸುವಂತೆ ಸೂಚಿಸಿದರು. ಕಾರಿನಿಂದ ಇಳಿದ ಸಿಎಂ ಈ ಜಾಗದಲ್ಲಿ ತ್ಯಾಜ್ಯ ಸುರಿದಿರುವವರನ್ನು ಪತ್ತೆ ಹಚ್ಚಿ ಅವರ ವಾಹನ ಸೀಜ್ ಮಾಡಿ ಕೇಸು ದಾಖಲಿಸುವಂತೆ ಸೂಚಿಸಿದರು.

ಬಳಿಕ, ಅಧಿಕಾರಿಗಳೇನು ರಸ್ತೆಯಲ್ಲಿ ಕಣ್ಣು ಮುಚ್ಚಿಕೊಂಡು ಓಡಾಡ್ತೀರಾ?. ರಸ್ತೆಗೆ ತ್ಯಾಜ್ಯ ಸುರಿದಿರುವುದನ್ನು ಗಮನಿಸೋಕೆ ಆಗೋದಿಲ್ಲವಾ ಎಂದು ಬಿಬಿಎಂಪಿ, ಬಿಡಿಎ ಮತ್ತು ಟ್ರಾಫಿಕ್ ಪೊಲೀಸರನ್ನು ಖಾರವಾಗಿ ಪ್ರಶ್ನಿಸಿ ಸೂಕ್ತ ಕ್ರಮಕ್ಕೆ ಸೂಚಿಸಿದರು.

ಎಷ್ಟು ವರ್ಷದ ಹಳೆ ಕಸ ಇದು: ಕಣ್ಣಿಲ್ವಾ ನಿಮಗೆ-ಸಿಎಂ

ಹೆಣ್ಣೂರು ಫ್ಲೈಓವರ್ ಕೆಳಗೆ ಕಟ್ಟಡ ನಿರ್ಮಾಣ ತ್ಯಾಜ್ಯ ಸುರಿದಿದ್ದು, ಅದರೊಳಗೆ ತಲೆ ಎತ್ತರಕ್ಕೆ ಗಿಡಗಳು ಬೆಳೆದು ನಿಂತಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗರಂ ಆದರು. ಇದು ತುಂಬಾ ಹಳೆ ತ್ಯಾಜ್ಯ. ಇಷ್ಟು ವರ್ಷ ಎಷ್ಟು ಜನ ಅಧಿಕಾರಿಗಳು ಇಲ್ಲಿ ಓಡಾಡಿರ್ತೀರಿ. ಯಾರಿಗೂ ಕಣ್ಣಿಗೇ ಬಿದ್ದಿಲ್ವಾ ಎಂದು ಪ್ರಶ್ನಿಸಿ 24 ಗಂಟೆಗಳ ಒಳಗೆ ತ್ಯಾಜ್ಯ ತೆರವುಗೊಳಿಸುವಂತೆ ಖಡಕ್ ಸೂಚನೆ ನೀಡಿದರು.

ಘನ ತ್ಯಾಜ್ಯ ಸಂಗ್ರಹಣಾ ಕೇಂದ್ರದಿಂದ ಹೊರಗೆ ಬಂದ ತ್ಯಾಜ್ಯ: ಬಿ ಸ್ಮೈಲ್‌ನ ತಾಂತ್ರಿಕ ನಿರ್ದೇಶಕನಿಗೆ ನೋಟಿಸ್ ನೀಡಲು ಸೂಚನೆ

ವಾರ್ಡ್ ನಂಬರ್ 23 ರ ಘನ ತ್ಯಾಜ್ಯ ಸಂಗ್ರಹಣಾ ಕೇಂದ್ರದ ಒಳಗೆ ಇರಬೇಕಾದ ತ್ಯಾಜ್ಯ ಸಂಗ್ರಹಣಾ ಕೇಂದ್ರದ ಹೊರಗೆ ಬಂದು ರಾಶಿ ಬಿದ್ದಿರುವುದನ್ನು ಗಮನಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ‌ಸಿಟ್ಟಾದರು. ಸಂಗ್ರಹಣಾ ಕೇಂದ್ರದ ಒಳಗೆ ಸಾಕಷ್ಟು ಜಾಗ ಖಾಲಿ ಇರುವುದನ್ನು ಗಮನಿಸಿದ ಅವರು, ಬಿ ಸ್ಮೈಲ್ ನ ತಾಂತ್ರಿಕ ನಿರ್ದೇಶಕ ಪ್ರಹ್ಲಾದ್ ಅವರಿಗೆ ನೋಟಿಸ್ ನೀಡಲು ಸೂಚನೆ ನೀಡಿದರು‌.

ಬಳಿಕ ಅಲ್ಲಿಂದ ಕೆಲವೇ ದೂರದಲ್ಲಿ ರಸ್ತೆಯಲ್ಲಿ ಜೆಲ್ಲಿ ಕಲ್ಲುಗಳು ಬಿದ್ದಿರುವುದನ್ನು ಗಮನಿಸಿ ಇದಕ್ಕೆ ಕಾರಣರಾದ ಮುಖ್ಯ ಎಂಜಿನಿಯರ್ ರಾಘವೇಂದ್ರ ಪ್ರಸಾದ್ ಅವರಿಗೂ ನೋಟಿಸ್ ನೀಡಿ ಎಂದು ಸೂಚಿಸಿದರು.

ವೈಟ್ ಟಾಪಿಂಗ್ ರಸ್ತೆ ಹಾಳು: ದುರಸ್ತಿಗೆ ಸಿಎಂ ಸೂಚನೆ
ಮೆಟ್ರೊ ಕಾಮಗಾರಿ ಆಗುವಾಗ ಅವರು (ಮೆಟ್ರೊ) ಸರ್ವೀಸ್ ರಸ್ತೆಗಳ ನಿರ್ಲಕ್ಷ್ಯ ಮಾಡಿರುವುದು, ರಸ್ತೆ ಬದಿ ನೀರು ನಿಲ್ಲುವಂತೆ ಮಾಡಿರುವುದು, ನೀರು ಸರಾಗವಾಗಿ ಹರಿಯಲು ಇರುವ ವ್ಯವಸ್ಥೆಯನ್ನೂ ಮುಚ್ಚಿಸಿರುವ ಬಗ್ಗೆ ಹಾಗೂ ವೈಟ್ ಟಾಪಿಂಗ್ ರಸ್ತೆ ಹಾಳು ಮಾಡಿರುವ ಬಗ್ಗೆ ಅಧಿಕಾರಿಗಳು ಮುಖ್ಯಮಂತ್ರಿ ಅವರ ಗಮನಕ್ಕೆ ತಂದರು. ಎಲ್ಲವನ್ನೂ ಗಮನಿಸಿದ ಸಿಎಂ ತಕ್ಷಣ ದುರಸ್ತಿಗೆ ಹಾಗೂ ಸರ್ವೀಸ್ ರಸ್ತೆಗಳ ನಿರ್ವಹಣೆಗೆ ಸೂಚನೆ ನೀಡಿದರು.

ವೈಟ್ ಟಾಪಿಂಗ್ ಗುತ್ತಿಗೆದಾರರು, ಎಂಜಿನಿಯರ್‌ಗಳ ವಿರುದ್ದ ಕ್ರಮಕ್ಕೆ ಸೂಚನೆ

ಹೆಣ್ಣೂರಿನ ಬಾಗಲೂರು ರಸ್ತೆಯಲ್ಲಿ ವೈಟ್ ಟಾಪಿಂಗ್ ಮಾಡಲು ಆರಿಸಿಕೊಂಡ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿರುವುದರ ಹೊಣೆಯನ್ನು ಗುತ್ತಿಗೆದಾರರೇ ಹೊರಬೇಕಿದೆ. ಒಮ್ಮೆ ವೈಟ್ ಟಾಪಿಂಗ್ ಗೆ ರಸ್ತೆಯನ್ನು ಒಪ್ಪಿಸಿದ ಮೇಲೆ ಆ ರಸ್ತೆಗಳ ನಿರ್ವಹಣೆಗೆ ಹಣ ಕೊಡಲು ಬರುವುದಿಲ್ಲ. ವೈಟ್ ಟಾಪಿಂಗ್ ಮುಗಿಯುವಾಗ 2-3 ವರ್ಷ ಆಗುತ್ತದೆ. ಅಲ್ಲಿಯವರೆಗೂ ಗುತ್ತಿಗೆದಾರರೇ ರಸ್ತೆಗಳ ನಿರ್ವಹಣೆ ಮಾಡಬೇಕು. ಆದರೆ ಹೇಳೋರು ಕೇಳೇರು ಇಲ್ಲದಂತೆ ಗುತ್ತಿಗೆದಾರರು ವರ್ತಿಸುತ್ತಾರೆ ಎಂದು ಜಿಬಿಎ ಅಧಿಕಾರಿಗಳು ತಿಳಿಸಿದರು‌.

ಸಮರ್ಪಕ ನಿರ್ವಹಣೆ ಮಾಡದ ವೈಟ್ ಟಾಪಿಂಗ್ ಗುತ್ತಿಗೆದಾರರು ಮತ್ತು ಎಂಜಿನಿಯರ್ ಗಳ ವಿರುದ್ದ ಕ್ರಮಕ್ಕೆ ಮುಖ್ಯಮಂತ್ರಿ ಸೂಚನೆ ನೀಡಿದರು‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.