ಬೆಂಗಳೂರು: ಸಾಗರ ತಾಲ್ಲೂಕಿನ ಅಂಬಾರಗೋಡ್ಲು–ಕಸವಳ್ಳಿ ಮಧ್ಯೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಿಸಿರುವ ತೂಗುಸೇತುವೆ ಉದ್ಘಾಟನಾ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಶಿಷ್ಟಾಚಾರ ಪಾಲನೆ ಮಾಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನನಗೆ ಮಾಹಿತಿ ನೀಡದೇ ನನ್ನ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ಹಾಕಿದ್ದಾರೆ. ವಿಜಯಪುರದಲ್ಲಿ ವಿವಿಧ ಕಾರ್ಯಕ್ರಮಗಳು ನಿಗದಿಯಾಗಿರುವುದರಿಂದ ಸಾಗರ ತಾಲ್ಲೂಕಿನ ಕಾರ್ಯಕ್ರಮಗಳ ಉದ್ಘಾಟನೆಯನ್ನು ಮುಂದೂಡುವಂತೆ ಕೇಂದ್ರ ಸಚಿವ ನಿತಿನ್ ಗಡ್ಕರಿಯವರಿಗೆ ಪತ್ರವನ್ನು ಬರೆದಿದ್ದೆ. ಕರೆ ಮಾಡಿಯೂ ತಿಳಿಸಿದ್ದೆ. ಅವರು ಮುಂದೂಡಲು ಸಮ್ಮತಿಸಿದ್ದರು. ಆದರೆ, ಇಲ್ಲಿನ ಸ್ಥಳೀಯ ಬಿಜೆಪಿ ನಾಯಕರ ಒತ್ತಡಕ್ಕೆ ಮಣಿದು, ನನ್ನ ಗಮನಕ್ಕೆ ತಾರದೆ ಕಾರ್ಯಕ್ರಮ ಆಯೋಜಿಸಿದ್ದಾರೆ’ ಎಂದು ತಿಳಿಸಿದರು.
‘ಈ ತಿಕ್ಕಾಟವನ್ನು ಕೇಂದ್ರ ಸರ್ಕಾರವೇ ಆರಂಭಿಸಿದೆ. ಕೇಂದ್ರ ಪುರಸ್ಕೃತ ಯೋಜನೆಗಳಲ್ಲಿ ರಾಜ್ಯ ಸರ್ಕಾರದ ಪಾಲೂ ಇರುತ್ತದೆ. ಅಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರ ಎಲ್ಲ ಶಿಷ್ಟಾಚಾರಗಳನ್ನು ತಪ್ಪದೇ ಪಾಲಿಸುತ್ತದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.