ಬೆಂಗಳೂರು: ಪರಧರ್ಮ ಸಹಿಷ್ಣುತೆ ಸಂವಿಧಾನದ ಮೂಲ ಆಶಯವಾಗಿದ್ದು, ಸಂವಿಧಾನದ ಪಾಲನೆಯೇ ಎಲ್ಲರ ಗುರಿಯಾಗಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.
ನಗರದ ಅರಮನೆ ಮೈದಾನದಲ್ಲಿ ಶುಕ್ರವಾರ ಜಂಟಿ ಮಿಲಾದ್ ಸಮಿತಿ ಆಯೋಜಿಸಿದ್ದ ‘ಅಂತರರಾಷ್ಟ್ರೀಯ ಸಮಾವೇಶ’ದಲ್ಲಿ ಮಾತನಾಡಿದರು.
ಪ್ರವಾದಿ ಅವರ ಬೋಧನೆಗಳು ಮಾನವ ಇತಿಹಾಸದಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತಂದವು. ಅವರು ಸಮಸ್ತ ಮಾನವಕೋಟಿಗೆ ನ್ಯಾಯ, ಸಮಾನತೆ ಮತ್ತು ಧಾರ್ಮಿಕ ಸೌಹಾರ್ದದ ಮಾರ್ಗಗಳನ್ನು ತೋರಿಸಿದರು. ಬಸವಣ್ಣ ಅವರ ನೇತೃತ್ವದ ಶರಣರ ಚಳವಳಿ ಮಾನವ ಕುಲ ಒಂದೇ ಎನ್ನುವ ಮೌಲ್ಯವನ್ನೇ ಸಾರಿತ್ತು ಎಂದು ಹೇಳಿದರು.
ಪ್ರವಾದಿಗಳು ಶಾಂತಿಯ ಧೂತರು. ಇಡೀ ಮಾನವ ಕುಲದ ಶಾಂತಿಗಾಗಿ, ಸಹಬಾಳ್ವೆ, ಸಹೋದರತ್ವಕ್ಕಾಗಿ ಕೆಲಸ ಮಾಡಬೇಕು ಎನ್ನುವುದು ಅವರ ಬೋಧನೆಯಾಗಿದೆ ಎಂದರು.
ದೇಶದ ಸಂವಿಧಾನದ ಮೂಲ ಆಶಯ ಕೂಡ ಭ್ರಾತೃತ್ವ ಮತ್ತು ಪರಧರ್ಮ ಸಹಿಷ್ಣುತೆಯೇ ಆಗಿದೆ. ಆದ್ದರಿಂದ ಸಂವಿಧಾನವನ್ನು ಆಚರಿಸುವುದು, ಪಾಲಿಸುವುದು ಎಲ್ಲರ ಗುರಿಯಾಗಲಿ ಎಂದು ಕರೆ ನೀಡಿದರು.
ವಸತಿ ಸಚಿವ ಜಮೀರ್ ಅಹಮದ್, ಇಂಧನ ಸಚಿವ ಕೆ.ಜೆ.ಜಾರ್ಜ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಶಾಸಕ ಹ್ಯಾರಿಸ್ ಹಾಗೂ ಧಾರ್ಮಿಕ ಮುಖಂಡರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.