ADVERTISEMENT

‘ಸಿದ್ಧಾರೂಢ ಜ್ಯೋತಿ ರಥ ಯಾತ್ರೆ’ಗೆ ಭವ್ಯ ಸ್ವಾಗತ

​ಪ್ರಜಾವಾಣಿ ವಾರ್ತೆ
Published 7 ಜನವರಿ 2025, 14:39 IST
Last Updated 7 ಜನವರಿ 2025, 14:39 IST
’ಸಿದ್ಧಾರೂಢ ಜ್ಯೋತಿ’ಗೆ ರಾಮೋಹಳ್ಳಿಯ ಭಕ್ತರು ಪೂಜೆ ಸಲ್ಲಿಸಿದರು. ಸಿದ್ಧಾರೂಢ ಮಿಷನ್ ಆಶ್ರಮದ ಅಧ್ಯಕ್ಷ ಆರೂಢಭಾರತೀ ಸ್ವಾಮೀಜಿ ಹಾಗೂ ಭಕ್ತರು ಈ ಸಂದರ್ಭದಲ್ಲಿ ಹಾಜರಿದ್ದರು.
’ಸಿದ್ಧಾರೂಢ ಜ್ಯೋತಿ’ಗೆ ರಾಮೋಹಳ್ಳಿಯ ಭಕ್ತರು ಪೂಜೆ ಸಲ್ಲಿಸಿದರು. ಸಿದ್ಧಾರೂಢ ಮಿಷನ್ ಆಶ್ರಮದ ಅಧ್ಯಕ್ಷ ಆರೂಢಭಾರತೀ ಸ್ವಾಮೀಜಿ ಹಾಗೂ ಭಕ್ತರು ಈ ಸಂದರ್ಭದಲ್ಲಿ ಹಾಜರಿದ್ದರು.   

ಕೆಂಗೇರಿ: ಸಿದ್ಧಾರೂಢ ಸ್ವಾಮೀಜಿಯವರ 190 ಹಾಗೂ ಗುರುನಾಥಾರೂಢ ಸ್ವಾಮೀಜಿಯವರ 155ನೇ ಜಯಂತಿ ನಿಮಿತ್ತ ಸಂಚರಿಸುತ್ತಿರುವ ಹುಬ್ಬಳ್ಳಿ ಸಿದ್ಧಾರೂಢ ಮಠದ ‘ಜ್ಯೋತಿ ರಥಯಾತ್ರೆ’ಗೆ ರಾಮೋಹಳ್ಳಿ ಸಿದ್ಧಾರೂಢ ಮಿಷನ್ ಆಶ್ರಮದಲ್ಲಿ ಭವ್ಯ ಸ್ವಾಗತ ನೀಡಲಾಯಿತು.

59 ದಿನಗಳ ‘ಜ್ಯೋತಿ ರಥಯಾತ್ರೆ’ ಕಳೆದ ಡಿಸೆಂಬರ್ 22ರಿಂದ ಸಿದ್ಧಾರೂಢರ ಜನ್ಮಸ್ಥಳ ಬೀದರ್ ಜಿಲ್ಲೆ ಚಳಕಾಪುರದಿಂದ ಆರಂಭಗೊಂಡಿತ್ತು. ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರದಲ್ಲಿ ಸಂಚರಿಸಿ ಸೋಮವಾರ ರಾಮೋಹಳ್ಳಿ ತಲುಪಿತು.

ಸಿದ್ಧಾರೂಢ ಮಿಷನ್ ಆಶ್ರಮದ ಅಧ್ಯಕ್ಷ ಆರೂಢಭಾರತೀ ಸ್ವಾಮೀಜಿಯವರ ನೇತೃತ್ವದಲ್ಲಿ ಬೇಲಿಮಠದ ಶಿವರುದ್ರ ಸ್ವಾಮೀಜಿ, ರಾಮಕೃಷ್ಣ ಯೋಗಾಶ್ರಮದ ಸ್ವಾಮಿ ಯೋಗೇಶ್ವರಾನಂದಜಿ, ಸಂಗಮಾನಂದ ಸ್ವಾಮೀಜಿ, ಇಮ್ಮಡಿ ಮಹಾಂತ ಸ್ವಾಮೀಜಿ, ಮುಮ್ಮಡಿ ಷಡಕ್ಷರ ಸ್ವಾಮೀಜಿ, ಮಾತೃಶ್ರೀ ಉಮಾಭಾರತೀ, ಸಾಧ್ವಿ ಉನ್ಮೇಷಭಾರತೀ ಜ್ಯೋತಿಯನ್ನು ಸ್ವಾಗತಿಸಿದರು.

ADVERTISEMENT

ಜ್ಯೋತಿ ಆಗಮಿಸುತ್ತಲೇ ಪುಳಕಿತಗೊಂಡ ಭಕ್ತರು ಜಯಘೋಷ ಮೊಳಗಿಸಿದರು. ಮಂಗಳವಾದ್ಯ, ವೀರಗಾಸೆ ಹಾಗೂ ಸಾಂಸ್ಕೃತಿಕ ಕಲಾ ತಂಡಗಳು ಯಾತ್ರೆಯ ಸಂತಸ, ಸಂಭ್ರಮವನ್ನು ಇಮ್ಮಡಿಗೊಳಿಸಿದವು.

ಈ ಸಂದರ್ಭದಲ್ಲಿ ಮಾತನಾಡಿದ ಆರೂಢಭಾರತೀ ಸ್ವಾಮೀಜಿ, ‘ಸಿದ್ಧಾರೂಢರು ಬಸವಣ್ಣನವರ ನಂತರದ ಅಪ್ರತಿಮ ಕ್ರಾಂತಿಕಾರಿ. ಅವರು ಹುಟ್ಟಿ ಬರದಿದ್ದಲ್ಲಿ ಸಂಸ್ಕೃತದ ವೇದಾಂತ ವಿದ್ಯೆಯನ್ನು ದ್ವಿಜರಲ್ಲದವರು, ಜನಸಾಮಾನ್ಯರು ತಿಳಿಯಲು ಅಸಾಧ್ಯವಾಗುತ್ತಿತ್ತು‘ ಎಂದರು.

ಮಂಗಳವಾರ ಮುಂಜಾನೆ ರಾಮೋಹಳ್ಳಿಯಿಂದ ಹೊರಟ ರಥಯಾತ್ರೆ ಬೆಂಗಳೂರಿನ ಕೊಡಿಗೇಹಳ್ಳಿ, ಕೆಂಗೇರಿ ಹಾಗೂ ಮೈಸೂರು ರಸ್ತೆಯಲ್ಲಿರುವ ಸಿದ್ಧಾರೂಢ ಮಠದ ಮೂಲಕ ಸಾಗಿ ಜ.10ಕ್ಕೆ ತುಮಕೂರು ತಲುಪಲಿದೆ. ಫೆ.18ಕ್ಕೆ ರಥಯಾತ್ರೆ ಸಂಪನ್ನಗೊಳ್ಳಲಿದೆ.

ಹುಬ್ಬಳ್ಳಿ ಸಿದ್ಧಾರೂಢ ಮಠದ ಅಧ್ಯಕ್ಷ ಬಸವರಾಜ ಕಲ್ಯಾಣ ಶೆಟ್ಟರ್, ಚಲನಚಿತ್ರ ನಟ ಚಿಕ್ಕ ಹೆಜ್ಜಾಜಿ ಮಹಾದೇವ್, ಜ್ಯೋತಿ ಯಾತ್ರಾ ಸಮಿತಿ ಅಧ್ಯಕ್ಷ ಉದಯಕುಮಾರ್ ಡಿ. ನಾಯಕ್, ಸಿ.ಸಂಜಯ ಕುಮಾರ್, ಪ್ರಮೋದ ಕಾಮತ್, ಲಕ್ಷ್ಮೀಮೂರ್ತಿ, ಸಾಹಿತಿ ಎಂ.ಎಚ್. ಜಯರಾಮ್, ಜಿ ಶಿವಣ್ಣ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.