ADVERTISEMENT

ಸಿಂಗನಾಯಕನಹಳ್ಳಿ ಕೆರೆ; ಜಂಟಿ ಸರ್ವೆ ನಡೆಸಲಿ: ಆಮ್‌ ಆದ್ಮಿ ಪಕ್ಷ ಆಗ್ರಹ

 265 ಎಕರೆ ವಿಸ್ತೀರ್ಣದ ಕೆರೆ l ಕೆಲ ಎಕರೆಗಳಷ್ಟು ಜಾಗ ಒತ್ತುವರಿ ಮಾಡಿರುವ ಅನುಮಾನ

​ಪ್ರಜಾವಾಣಿ ವಾರ್ತೆ
Published 25 ಜೂನ್ 2021, 21:06 IST
Last Updated 25 ಜೂನ್ 2021, 21:06 IST
ಗ್ರಾಮಸ್ಥರನ್ನು ಉದ್ದೇಶಿಸಿ ಶಾಸಕ ಎಸ್.ಆರ್.ವಿಶ್ವನಾಥ್ ಮಾತನಾಡಿದರು
ಗ್ರಾಮಸ್ಥರನ್ನು ಉದ್ದೇಶಿಸಿ ಶಾಸಕ ಎಸ್.ಆರ್.ವಿಶ್ವನಾಥ್ ಮಾತನಾಡಿದರು   

ಬೆಂಗಳೂರು: ‘ಯಲಹಂಕದ ಸಿಂಗನಾಯಕನಹಳ್ಳಿ ಕೆರೆಯು265 ಎಕರೆ ವಿಸ್ತೀರ್ಣ ಹೊಂದಿದ್ದು, ಈ ಪೈಕಿ ಕೆಲ ಎಕರೆಗಳಷ್ಟು ಜಾಗವನ್ನು ಪ್ರಭಾವಿಗಳು ಹಾಗೂ ರಿಯಲ್ ಎಸ್ಟೇಟ್‌ ಉದ್ಯಮಿಗಳು ಒತ್ತುವರಿ ಮಾಡಿರುವ ಅನುಮಾನವಿದೆ. ಹೀಗಾಗಿ ಅರಣ್ಯ ಮತ್ತು ಕಂದಾಯ ಇಲಾಖೆ ಜಂಟಿ ಸರ್ವೆ ನಡೆಸಬೇಕು’ ಎಂದು ಆಮ್‌ ಆದ್ಮಿ ಪಕ್ಷ ಆಗ್ರಹಿಸಿದೆ.

ಪಕ್ಷದ ನಿಯೋಗವು ಕೆರೆಯ ಜಾಗಕ್ಕೆ ಶುಕ್ರವಾರ ಭೇಟಿ ನೀಡಿ‍ಪರಿಶೀಲನೆ ನಡೆಸಿತು.

‘ಇದುವರೆಗೂ ಈ ಕೆರೆಯ ಪುನರುಜ್ಜೀವನ ಕಾರ್ಯ ನಡೆಯದಿರುವುದು ಬೇಸರದ ಸಂಗತಿ. ಕೆರೆಯಲ್ಲಿ7,500 ಕ್ಕೂ ಅಧಿಕ ಜಾಲಿ ಮರಗಳು ಬೆಳೆದಿವೆ. ಇವು 50 ವರ್ಷಗಳಷ್ಟು ಹಳೆಯದಾಗಿವೆ. ಕೋಟ್ಯಂತರ ರೂಪಾಯಿ ಮೌಲ್ಯದ ಜಾಲಿ, ಹೊಂಗೆ ಹಾಗೂ ಬೇವಿನ ಮರಗಳು ಟಿಂಬರ್‌ ಮಾಫಿಯಾಕ್ಕೆ ಬಲಿಯಾಗುತ್ತಿವೆ. ಕೆರೆ ಅಭಿವೃದ್ಧಿ ಹೆಸರಿನಲ್ಲಿ ಇವುಗಳಿಗೆ ಕೊಡಲಿ ಏಟು ಬೀಳುತ್ತಿದೆ. ಇದು ಕೂಡಲೇ ನಿಲ್ಲಬೇಕು’ ಎಂದು ಪಕ್ಷದ ಬೆಂಗಳೂರು ನಗರ ಅಧ್ಯಕ್ಷ ಮೋಹನ್‌ ದಾಸರಿ ಒತ್ತಾಯಿಸಿದರು.

ADVERTISEMENT

‘ಕೆರೆಯು ಪ್ರಾಣಿ, ಪಕ್ಷಿಗಳ ಆವಾಸಸ್ಥಾನವಾಗಿದೆ. ಹೀಗಾಗಿ ಮರಗಳನ್ನು ಕಡಿಯದೆಯೇ ವೈಜ್ಞಾನಿಕ ರೀತಿಯಲ್ಲಿ ಹೂಳೆತ್ತುವ ಕೆಲಸ ಆಗಲಿ. ಭಾರತೀಯ ವಿಜ್ಞಾನ ಸಂಸ್ಥೆಯ ಸಸ್ಯಶಾಸ್ತ್ರ ವಿಭಾಗದ ವಿಜ್ಞಾನಿಗಳನ್ನೊಳಗೊಂಡ ಸಮಿತಿ ನೀಡಿರುವ ಶಿಫಾರಸುಗಳನ್ನು ಅನುಷ್ಠಾನಗೊಳಿಸುವ ಮೂಲಕ ಪರಿಸರವನ್ನು ಸಂರಕ್ಷಿಸಲಿ. ಯಲಹಂಕ ಶಾಸಕ ಎಸ್‌.ಆರ್‌.ವಿಶ್ವನಾಥ್‌ ಟಿಂಬರ್‌ ಮಾಫಿಯಾಗೆ ಅನುಕೂಲವಾಗುವಂತಹ ತೀರ್ಮಾನ ಕೈಗೊಳ್ಳುವುದನ್ನು ನಿಲ್ಲಿಸಲಿ’ ಎಂದರು.

ಪಕ್ಷದ ಮುಖಂಡರಾದ ಫಣಿರಾಜ್‌, ಜಗದೀಶ್ ವಿ. ಸದಂ, ರಾಜಶೇಖರ್ ದೊಡ್ಡಣ್ಣ, ಜಯಕುಮಾರ್, ನಿತಿನ್ ರೆಡ್ಡಿ ಸಂತೋಷ್, ಪ್ರಕಾಶ್, ಉಷಾ ಮೋಹನ್, ಸುಹಾಸಿನಿ ಹಾಗೂ ಪುರುಷೋತ್ತಮ್ ಇದ್ದರು.

ಜಾಲಿ ಮರಗಳ ತೆರವಿಗೆ ಗ್ರಾಮಸ್ಥರ ಆಗ್ರಹ

ಸಿಂಗನಾಯಕನಹಳ್ಳಿ ಕೆರೆ ಅಂಗಳದಲ್ಲಿ ಬೆಳೆದಿರುವ ಜಾಲಿಮರಗಳನ್ನು ತೆರವುಗೊಳಿಸುವುದರ ಜೊತೆಗೆ ಕೆರೆಯಲ್ಲಿ ಹೂಳುತೆಗೆದು ನೀರುತುಂಬಿಸಲು ಸರ್ಕಾರ ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಕೆರೆಯ ಸುತ್ತಮುತ್ತಲ ಗ್ರಾಮಸ್ಥರು ಆಗ್ರಹಿಸಿದರು.

ಶಾಸಕ ಎಸ್.ಆರ್.ವಿಶ್ವನಾಥ್ ನೇತೃತ್ವದಲ್ಲಿ ಕೆರೆಯ ಆವರಣದಲ್ಲಿ ನಡೆದ ’ಜಾಲಿ ಮರ ತೆಗೆಸಿ, ಕೆರೆ ಉಳಿಸಿ' ಜಾಲಿಮರ ತೆಗೆಸಿ, ಅಂತರ್ಜಲ ಹೆಚ್ಚಿಸಿ‘ ಅಭಿಯಾನದಲ್ಲಿ ಗ್ರಾಮಸ್ಥರು, ಅರಣ್ಯಇಲಾಖೆಯ ಅಧಿಕಾರಿಗಳು ಹಾಗೂ ಪರಿಸರವಾದಿಗಳ ವಿರುದ್ಧ ಘೋಷಣೆ ಕೂಗುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ವಿಶ್ವನಾಥ್, ’ಸಿಂಗನಾಯಕನಹಳ್ಳಿ ಕೆರೆ ವಿಶಾಲವಾಗಿ ಹರಡಿಕೊಂಡಿರುವ ದೊಡ್ಡಕೆರೆಯಾಗಿದ್ದು, ಹಲವುದಶಕಗಳ ಹಿಂದೆ ಈ ಕೆರೆಯನ್ನು ನಂಬಿಕೊಂಡು 3 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ 7 ಹಳ್ಳಿಗಳ ರೈತರು ನೂರಾರು ಎಕರೆ ಜಮೀನಿನಲ್ಲಿ ಕೃಷಿಮಾಡುತ್ತಿದ್ದರು. ಕ್ರಮೇಣ ಕೆರೆಯಲ್ಲಿ ನೀರು ಬತ್ತಿಹೋಗಿದ್ದು, ಈಗ ಮಳೆಗಾಲದಲ್ಲಿ ಮಾತ್ರ ಸ್ವಲ್ಪನೀರು ಸಂಗ್ರಹವಾಗಿರುತ್ತದೆ. ಮೊದಲೆಲ್ಲ ಈ ಕೆರೆ ತುಂಬಿದಾಗ ಸುತ್ತಮುತ್ತ ಪ್ರದೇಶಗಳ ಬಾವಿಗಳಲ್ಲಿ ನೀರು ತುಂಬಿರುತ್ತಿತ್ತು. ಆದರೆ ಬೆಳವಣಿಗೆಯಾಗುತ್ತಿದ್ದಂತೆ ರಾಜಕಾಲುವೆಗಳ ಒತ್ತುವರಿಯಾಗಿ ನೀರಿನಸಂಗ್ರಹ ಕಡಿಮೆಯಾಯಿತು‘ ಎಂದು ಮಾಹಿತಿ ನೀಡಿದರು.

’ರಾಜ್ಯ ಸರ್ಕಾರ ಎಚ್.ಎನ್.ವ್ಯಾಲಿ ಯೋಜನೆಯಡಿ ಕೆರೆಯ ಪಕ್ಕದಲ್ಲಿರುವ ತಿಮ್ಮಸಂದ್ರ ಕೆರೆಗೆ ನೀರು ತುಂಬಿಸುತ್ತಿದ್ದು, ನಂತರ ಹಾರೋಹಳ್ಳಿ ಮತ್ತು ಸಿಂಗನಾಯಕನಹಳ್ಳಿ ಕೆರೆಗೆ ನೀರು ತುಂಬಿಸುವ ಉದ್ದೇಶ ಹೊಂದಿದೆ. ಈ ದಿಸೆಯಲ್ಲಿ ಕೆರೆಯ ಅಂಗಳದಲ್ಲಿ ಅರಣ್ಯ ಇಲಾಖೆಯವರು 200 ಎಕರೆ ಪ್ರದೇಶದಲ್ಲಿ ಬೆಳೆಸಿರುವ, ಉರುವಲು ಮತ್ತು ಪ್ರಾಣಿಪಕ್ಷಿಗಳಿಗೆ ಉಪಯೋಗವಿಲ್ಲದ ಜಾಲಿಮರಗಳನ್ನು
ತೆರವುಗೊಳಿಸಬೇಕಾಗಿದೆ‘ ಎಂದು ತಿಳಿಸಿದರು.

ಅರಣ್ಯ ಇಲಾಖೆ ಅಧಿಕಾರಿಗಳು ಕೂಡಲೇ ಮರಗಳನ್ನು ತೆರವುಗೊಳಿಸದಿದ್ದರೆ 3 ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಜನರಿಂದ ಇಲಾಖೆಯ ಮುಂದೆ ದೊಡ್ಡಹೋರಾಟ ರೂಪಿಸಲಾಗುವುದು ಎಂದು ನಾಗದಾಸನಹಳ್ಳಿಯ ರೈತ ಜನಾರ್ದನ್ ಎಚ್ಚರಿಕೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.