
ಬೆಂಗಳೂರು: ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿ ಸಂಘಗಳಿಗೆ ಚುನಾವಣೆ ನಡೆಸುವ ಸಲಹೆಗೆ ಪೂರಕವಾದ ಅಭಿಪ್ರಾಯ ವ್ಯಕ್ತವಾಗಿದೆ ಎಂದು ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾ (ಎಸ್‌ಐಒ) ರಾಜ್ಯ ಘಟಕ ತಿಳಿಸಿದೆ.
ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಎಸ್‌ಐಒ ಗೂಗಲ್ ಫಾರ್ಮ್ಸ್ ಮೂಲಕ ನಡೆಸಿದ ಸಮೀಕ್ಷೆಯ ವರದಿ ಬಿಡುಗಡೆ ಮಾಡಿದೆ.
‘ಹೆಚ್ಚಿನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಸಂಘದ ಚುನಾವಣೆಯ ಪ್ರಾಮುಖ್ಯದ ಅರಿವಿದೆ. ನಿಯಮ, ರಚನೆ, ಕಾನೂನು ಚೌಕಟ್ಟಿನ ತಿಳಿವಳಿಕೆ ಇಲ್ಲ. ಚುನಾವಣೆ ನಡೆಸುವ ಮೊದಲು ಜಾಗೃತಿ ಮೂಡಿಸುವ ಅಗತ್ಯವಿದೆ’ ಎಂದು ಎಸ್‌ಐಒ ರಾಜ್ಯ ಅಧ್ಯಕ್ಷ ಎಸ್. ಆದಿ ಅಲ್ ಹಸನ್, ಕಾರ್ಯದರ್ಶಿ ಮೊಹಮ್ಮದ್ ಹಯ್ಯಾನ್ ತಿಳಿಸಿದ್ದಾರೆ.
‘ಲಿಂಗ್ಡೊ ಸಮಿತಿ ಶಿಫಾರಸುಗಳನ್ನು ಕಾಲಕ್ಕೆ ತಕ್ಕಂತೆ ಆಧುನೀಕರಿಸಬೇಕು. ಚುನಾವಣಾ ವೆಚ್ಚಕ್ಕೆ ಮಿತಿ ಮತ್ತು ಅಭ್ಯರ್ಥಿಗಳಿಗೆ ವಯೋಮಿತಿ ನಿಗದಿಪಡಿಸಬೇಕು. ಶಿಕ್ಷಣ ತಜ್ಞರು, ನಾಗರಿಕ ಸಮಾಜ ಮತ್ತು ವಿದ್ಯಾರ್ಥಿ ಸಂಘಟನೆಗಳೊಂದಿಗೆ ಸಮಾಲೋಚನೆ ನಡೆಸಬೇಕು’ ಎಂದು ತಿಳಿಸಿದ್ದಾರೆ.
ಕ್ಯಾಂಪಸ್‌ಗಳಲ್ಲಿ ಪ್ರಜಾಪ್ರಭುತ್ವ ವಾತಾವರಣ ಕಾಪಾಡಲು ವಿದ್ಯಾರ್ಥಿ ಸಂಘದ ಚುನಾವಣೆ ಅಗತ್ಯ. ಇದು ನಾಯಕತ್ವದ ಬೆಳವಣಿಗೆ, ಉತ್ತರದಾಯಿತ್ವದ ಜತೆಗೆ ವಿದ್ಯಾರ್ಥಿಗಳು ಹಾಗೂ ಆಡಳಿತ ಮಂಡಳಿ ನಡುವಿನ ಸಂವಹನಕ್ಕೆ ವೇದಿಕೆಯಾಗಲಿದೆ’ ಎಂದು ತಿಳಿಸಿದ್ದಾರೆ.
ಎಸ್‌ಐಒ ನಿಯೋಗವು ಈ ವರದಿಯನ್ನು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಶರಣ ಪ್ರಕಾಶ್ ಪಾಟೀಲ, ಎಂ.ಸಿ. ಸುಧಾಕರ್, ಶಾಸಕ ರಿಜ್ವಾನ್ ಅರ್ಷದ್ ಅವರಿಗೆ ಸಲ್ಲಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.