ಸಂಗ್ರಹ ಚಿತ್ರ
ಬೆಂಗಳೂರು: ‘ಮನುಷ್ಯರು ತಮ್ಮ ಕಾಲ ಮೇಲೆ ನಿಲ್ಲಬೇಕೇ ಹೊರತು ಖ್ಯಾತಿಯ ಮೇಲಲ್ಲ ಎಂದು ಸರ್ ಎಂ. ವಿಶ್ವೇಶ್ವರಯ್ಯ ಎಚ್ಚರಿಸಿದ್ದರು’ ಎಂದು ಬರಹಗಾರ ಟಿ.ವಿ. ವೆಂಕಟಚಲಾಶಾಸ್ತ್ರೀ ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತು ಬುಧವಾರ ಹಮ್ಮಿಕೊಂಡಿದ್ದ ಸರ್. ಎಂ. ವಿಶ್ವೇಶ್ವರಯ್ಯ ಜನ್ಮದಿನಾಚರಣೆ ಮತ್ತು ದತ್ತಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ವಿಶ್ವೇಶ್ವರಯ್ಯ ಅವರು ದೂರದೃಷ್ಟಿ ಇಟ್ಟುಕೊಂಡು ರೂಪಿಸಿದ ಯೋಜನೆಗಳ ಫಲವನ್ನು ನಾವು ಉಣ್ಣುತ್ತಿದ್ದೇವೆ’ ಎಂದು ಅವರು ಬಣ್ಣಿಸಿದರು.
ವಕೀಲ ರವಿ ಮಾತನಾಡಿ, ‘ಕರ್ನಾಟಕಕ್ಕೆ ತೊಡಕಾಗಿದ್ದ ಕಾವೇರಿ ನದಿ ವಿವಾದವನ್ನು ವಿಶ್ವೇಶ್ವರಯ್ಯನವರು ಜಾಣ್ಮೆಯಿಂದ ಬಗೆಹರಿಸಿದ್ದರು’ ಎಂದು ನೆನಪು ಮಾಡಿಕೊಂಡರು.
ವಿದ್ವಾಂಸ ಬಿ.ಎಸ್. ಪ್ರಣತಾರ್ತಿಹರನ್ ಅವರಿಗೆ ಟಿ.ವಿ. ವೆಂಕಟಾಚಲ ಶಾಸ್ತ್ರೀ ವಿದ್ವತ್ ದತ್ತಿ ಪ್ರಶಸ್ತಿ, ಎಲ್.ಗಿರಿಜಾ ರಾವ್ ಅವರಿಗೆ ಮನೋಹರಿ ಪಾರ್ಥಸಾರಥಿ ‘ಮನುಶ್ರೀ’ ದತ್ತಿ ಪುರಸ್ಕಾರ, ಸಂಪಟೂರು ವಿಶ್ವನಾಥ್ ಮತ್ತು ಶ್ರೀವತ್ಸ ಎಸ್. ವಟಿ ಅವರಿಗೆ ದಿ.ಟಿ. ಶ್ರೀನಿವಾಸ ಸ್ಮರಣಾರ್ಥ ಪಿ.ಕೆ. ನಾರಾಯಣ ಸಾಹಿತ್ಯ ದತ್ತಿ ಪುರಸ್ಕಾರ, ವೇದಾ ಸಿ.ಬಿರಾದಾರ್ ಅವರಿಗೆ ರಾಜಸಭಾ ಭೂಷಣ ಕರ್ಪೂರ ಶ್ರೀನಿವಾಸರಾವ್ ದತ್ತಿ ಪುರಸ್ಕಾರ, ನೇತ್ರಾವತಿ ಜಿ. ಅವರಿಗೆ ಕರ್ಪೂರ ರಾಮರಾವ್ ಜನ್ಮ ಶತಾಬ್ಧಿ ದತ್ತಿ ಪುರಸ್ಕಾರ ನೀಡಿ ಗೌರವಿಸಲಾಯಿತು.
ಚಿಂತಕ ಮಂಡಗದ್ದೆ ಶ್ರೀನಿವಾಸಯ್ಯ ಉಪನ್ಯಾಸ ನೀಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ. ಮಹೇಶ ಜೋಶಿ, ದತ್ತಿ ದಾನಿಗಳ ಪರವಾಗಿ ಪಿ.ಎನ್. ಉದಯಚಂದ್ರ, ಪ್ರಸನ್ನ ಕರ್ಪೂರ್ ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.