ಬೆಂಗಳೂರು: ಆರ್ಟ್ ಆಫ್ ಲಿವಿಂಗ್ ಹಾಗೂ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಇದೇ 9ರಿಂದ 11ರವರೆಗೆ ಮೂರು ದಿನಗಳ ‘ಸಿರಿಧಾನ್ಯ, ಸಾವಯವ ಮತ್ತು ನೈಸರ್ಗಿಕ ಕೃಷಿ ಉತ್ಪನ್ನಗಳ ಮೇಳ’ ಕನಕಪುರ ರಸ್ತೆಯಲ್ಲಿರುವ ಆರ್ಟ್ ಆಫ್ ಲಿವಿಂಗ್ ಆವರಣದಲ್ಲಿ ನಡೆಯಲಿದೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಎಸ್.ವಿ. ಸುರೇಶ, ‘ಶ್ರೀಶ್ರೀ ರವಿಶಂಕರ್ ಗುರೂಜಿ ಅವರ ಸಾನ್ನಿಧ್ಯದಲ್ಲಿ ಸಿರಿಧಾನ್ಯಗಳ ಕುರಿತು ನಡೆಯುವ ಚಿಂತನ–ಮಂಥನ ಗೋಷ್ಠಿ ನಡೆಯಲಿದೆ. ಗೋಷ್ಠಿಯಲ್ಲಿ ದೇಶ–ವಿದೇಶಗಳ ಗಣ್ಯರು ಭಾಗಿಯಾಗಲಿದ್ದಾರೆ‘ ಎಂದು ತಿಳಿಸಿದರು.
’ಸಂಸ್ಕರಿತ ಸಿರಿಧಾನ್ಯಗಳ ಪ್ರದರ್ಶನ ಮತ್ತು ಮಾರಾಟ ಸೇರಿದಂತೆ, ಮೇಳದಲ್ಲಿ 180ಕ್ಕೂ ಹೆಚ್ಚು ಮಳಿಗೆಗಳು ತೆರೆಯಲಾಗುವುದು. ಜೊತೆಗೆ ಕೃಷಿ ವಿಜ್ಞಾನಿಗಳು ಮತ್ತು ರೈತರ ನಡುವೆ ಸಂವಾದವೂ ನಡೆಯಲಿದೆ. ಸಿರಿಧಾನ್ಯಗಳನ್ನು ಸಂಸ್ಕರಿಸುವ ಆಧುನಿಕ ಯಂತ್ರೋಪಕರಣ ಪ್ರದರ್ಶನವೂ ಮೇಳದಲ್ಲಿರಲಿದೆ’ ಎಂದರು.
ಇದೇ 9ರಂದು ಕೃಷಿ ಸಚಿವ ಚಲುವರಾಯಸ್ವಾಮಿ ಮೇಳವನ್ನು ಉದ್ಘಾಟಿಸಲಿದ್ದಾರೆ. ಡಿ. 10ರಂದು ನಡೆಯುವ ‘ಸಿರಿಧಾನ್ಯ, ಸಾವಯವ ಮತ್ತು ನೈಸರ್ಗಿಕ ಕೃಷಿ’ಗೆ ಸಂಬಂಧಿಸಿದ ಅಂತರರಾಷ್ಟ್ರೀಯ ಮಟ್ಟದ ವಿಚಾರಸಂಕಿರಣವನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಉದ್ಘಾಟಿಸಲಿದ್ದಾರೆ. ಮೇಳಕ್ಕೆ ಉಚಿತ ಪ್ರವೇಶವಿದ್ದು, ರೈತರು ಸೇರಿದಂತೆ ಎಲ್ಲರೂ ಭಾಗವಹಿಸಬಹುದು’ ಎಂದು ತಿಳಿಸಿದರು.
ಜಿಕೆವಿಕೆಯ ಸಾವಯವ ಕೃಷಿ ಸಂಶೋಧನಾ ವಿಭಾಗದ ಮುಖ್ಯಸ್ಥ ಬಿ. ಬೋರಯ್ಯ, ಅಖಿಲ ಭಾರತೀಯ ಸುಸಂಘಟಿತ ಸಂಶೋಧನಾ ಪ್ರಾಯೋಜನದ ಮುಖ್ಯಸ್ಥ ನಾಗರಾಜ ಟಿ. ಈ., ಶ್ರೀ ಶ್ರೀ ನೈಸರ್ಗಿಕ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರಂಗನಾಥ್ ಪ್ರಸಾದ್ ಮತ್ತು ಉದಯ ಕುಮಾರ ಕೊಳ್ಳಿಮಠ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.