ADVERTISEMENT

₹ 65 ಕೋಟಿ ಅವ್ಯವಹಾರ: ‘ಸಿರಿವೈಭವ’ ಅಧ್ಯಕ್ಷೆ ನಾಗವಲ್ಲಿ ಬಂಧನ

​ಪ್ರಜಾವಾಣಿ ವಾರ್ತೆ
Published 18 ಜುಲೈ 2022, 19:15 IST
Last Updated 18 ಜುಲೈ 2022, 19:15 IST
ನಾಗವಲ್ಲಿ ಹಾಗೂ ರಾಜೇಶ್
ನಾಗವಲ್ಲಿ ಹಾಗೂ ರಾಜೇಶ್   

ಬೆಂಗಳೂರು: ಸುಮಾರು ₹ 65 ಕೋಟಿ ಅವ್ಯವಹಾರ ನಡೆಸಿದ್ದ ಆರೋಪದಡಿ ಸಿರಿವೈಭವ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತ ಅಧ್ಯಕ್ಷೆ ಬಿ.ಎಸ್. ನಾಗವಲ್ಲಿ ಹಾಗೂ ಇವರ ಪತಿ ವಿ.ಆರ್. ರಾಜೇಶ್ ಅವರನ್ನು ಸುಬ್ರಮಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಅಕ್ರಮ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾಗವಲ್ಲಿ ಹಾಗೂ ರಾಜೇಶ್‌ ಅವರನ್ನು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಎರಡೂವರೆ ತಿಂಗಳ ಹಿಂದೆಯೇ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಿದ್ದರು. ಜೈಲಿನಲ್ಲಿದ್ದ ಇಬ್ಬರನ್ನೂ ಬಾಡಿ ವಾರೆಂಟ್‌ ಮೇಲೆ ಕಸ್ಟಡಿಗೆ ಪಡೆದಿರುವ ಸುಬ್ರಮಣ್ಯಪುರ ಪೊಲೀಸರು, ವಿಚಾರಣೆ ಆರಂಭಿಸಿದ್ದಾರೆ.

‘ಸಹಕಾರ ಸಂಘಗಳ ನಿಬಂಧಕರು ಅವ್ಯವಹಾರದ ಬಗ್ಗೆ ದಾಖಲೆ ಸಮೇತ ದೂರು ನೀಡಿದ್ದಾರೆ. ಅದರನ್ವಯ ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ADVERTISEMENT

‘ಬಸವೇಶ್ವರನಗರ, ರಾಜರಾಜೇಶ್ವರಿನಗರ, ಉತ್ತರಹಳ್ಳಿ, ಬಿಳೆಕಹಳ್ಳಿಯಲ್ಲಿ ಸಿರಿವೈಭವ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತ ಶಾಖೆಗಳಿದ್ದವು. ಸುಮಾರು 2,500 ಸದಸ್ಯರು ಹಣ ಹೂಡಿಕೆ ಮಾಡಿದ್ದರು.’

‘ಹೂಡಿಕೆ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದ ಅಧ್ಯಕ್ಷೆ ಹಾಗೂ ಅವರ ಪತಿ ಸ್ವಂತ ಉದ್ದೇಶಕ್ಕೆ ಬಳಸಿಕೊಂಡು ಅವ್ಯವಹಾರ ಮಾಡಿದ್ದಾರೆ. ಸಹಕಾರ ಸಂಘಗಳ ನಿಬಂಧಕರು, ಲೆಕ್ಕಪತ್ರಗಳ ಪರಿಶೀಲನೆ ವೇಳೆ ಅಕ್ರಮ ಪತ್ತೆ ಮಾಡಿದ್ದಾರೆ’ ಎಂದು ತಿಳಿಸಿದರು.

‘ವಿವಿಧ ಉದ್ಯಮಗಳಲ್ಲಿ ಹಣ ಹೂಡಿಕೆ ಮಾಡಿ, ಲಾಭ ನೀಡುವುದಾಗಿ ಆರೋಪಿಗಳು ಸದಸ್ಯರಿಗೆ ಭರವಸೆ ನೀಡುತ್ತಿದ್ದರು. ಸಿರಿವೈಭವ್ ಗೋಲ್ಡ್ ಪ್ಯಾಲೆಸ್ ಹಾಗೂ ಇತರೆ ವ್ಯವಹಾರ ಸಹ ಆರೋಪಿಗಳು ನಡೆಸುತ್ತಿದ್ದರು. ಇವುಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ’ ಎಂದು ಹೇಳಿದರು.

ಸದಸ್ಯರಿಂದ ಮಾಹಿತಿ ಸಂಗ್ರಹ: ‘ಸಿರಿವೈಭವ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತದಲ್ಲಿ ಹಣ ಹೂಡಿಕೆ ಮಾಡಿದ್ದ ಸದಸ್ಯರಿಂದ ಮಾಹಿತಿ ಪಡೆಯಲಾಗುತ್ತಿದೆ. ಪರಿಶೀಲನೆ ನಡೆಸಿ, ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಪೊಲೀಸ್ ಅಧಿಕಾರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.