ADVERTISEMENT

ಐಎಂಎ ಪರವಾನಗಿ | ನಿರ್ಲಕ್ಷ್ಯ ವಹಿಸಿದ್ದ ಐ.ಟಿ, ಇ.ಡಿ

​ಪ್ರಜಾವಾಣಿ ವಾರ್ತೆ
Published 18 ಜೂನ್ 2019, 20:06 IST
Last Updated 18 ಜೂನ್ 2019, 20:06 IST
   

ಬೆಂಗಳೂರು: ಐಎಂಎ ಸಮೂಹ ಸಂಸ್ಥೆ ಆರಂಭಿಸಿ ಮನ್ಸೂರ್‌ ಖಾನ್‌ ಭಾರಿ ಮೊತ್ತದ ವಂಚನೆ ನಡೆಸಲು ಪರವಾನಗಿ ನೀಡಿದ ಏಜೆನ್ಸಿಗಳ ನಿರ್ಲಕ್ಷ್ಯವೂ ಮುಖ್ಯ ಕಾರಣ ಎನ್ನಲಾಗಿದೆ.

‘ಪರವಾನಗಿ ನೀಡಿದ ಇಲಾಖೆಗೆ ಪ್ರತಿ ವರ್ಷ ಆರ್ಥಿಕ ವ್ಯವಹಾರದ ಲೆಕ್ಕಪತ್ರವನ್ನು ನೋಂದಾಯಿತ ಸಂಸ್ಥೆ ಸಲ್ಲಿಸಬೇಕು. ಆದರೆ, ಐಎಂಎ ಸ್ಥಾಪನೆಯಾದಂದಿನಿಂದ ಈವರೆಗೆ ಲೆಕ್ಕಪತ್ರವನ್ನೇ ಸಲ್ಲಿಸಿಲ್ಲ. ಆದರೂ ಅದರ ನೋಂದಣಿ ನವೀಕರಿಸಿರುವುದು ತನಿಖೆಯಿಂದ ಬಹಿರಂಗವಾಗಿದೆ’ ಎಂದು ಎಸ್‌ಐಟಿ ಮೂಲಗಳು ಹೇಳಿವೆ.

‘ನೋಂದಣಿ ಇಲಾಖೆಗಳು ಎಚ್ಚರ ವಹಿಸುತ್ತಿದ್ದರೆ ಈ ರೀತಿಯ ವಂಚನೆಯನ್ನು ತಡೆಯಬಹುದಿತ್ತು. ಆದರೆ, ಲೆಕ್ಕಪತ್ರ ಪರಿಶೀಲಿಸುವ ಕೆಲಸ ಯಾಕೆ ನಡೆದಿಲ್ಲ ಎನ್ನುವುದು ಗೊತ್ತಾಗುತ್ತಿಲ್ಲ’ ಎಂದೂ ಮೂಲಗಳುಹೇಳಿವೆ.

ADVERTISEMENT

‘ಕಂಪನಿಯ ಪರವಾನಗಿ ನವೀಕರಣಕ್ಕೆ ಕೋರಿಕೆ ಸಲ್ಲಿಸುವ ವೇಳೆ ಹೂಡಿಕೆಯಾದ ಹಣ, ಲಾಭಾಂಶ ಹಂಚಿಕೆ, ಅದರ ಮೂಲ ಎಲ್ಲವನ್ನೂ ಬಹಿರಂಗಪಡಿಸಬೇಕು. ಈ ಬಗ್ಗೆ ಸಂಬಂಧಿಸಿದ ಏಜೆನ್ಸಿಗಳೂ ನಿಗಾ ವಹಿಸಬೇಕು. ಅದಕ್ಕೆಂದೇ ಸಂಸ್ಥೆಗಳ ಬಳಿ ಮಾರುಕಟ್ಟೆ ಗುಪ್ತ ಮಾಹಿತಿ ಪಡೆಯುವ ವ್ಯವಸ್ಥೆ ಇದೆ. ಲೋಪಗಳು ಕಂಡುಬಂದರೆ ಸಂಸ್ಥೆಯ ಮಾಲೀಕರ ಗಮನಕ್ಕೆ ತರೆಬೇಕು. ಸಂದೇಹ ಬಂದರೆ ಪೊಲೀಸರಿಗೆ ದೂರು ನೀಡಬೇಕು. ಆರ್‌ಬಿಐಗೂ ಮಾಹಿತಿ ನೀಡಬೇಕು. ಬಳಿಕ ಸಾರ್ವಜನಿಕರಿಗೆ ಪ್ರಕಟಣೆ ಹೊರಡಿಸಬೇಕು. ಅಂತಹ ಸಂಸ್ಥೆಯ ವ್ಯವಹಾರಗಳ ಬಗ್ಗೆ ಎಚ್ಚರಿಕೆಯಿಂದಿರುವಂತೆ ಜನರಿಗೆ ತಿಳಿಹೇಳಬೇಕು. ಆದರೆ, ದುರದೃಷ್ಟವಶಾತ್‌ ಐಎಂಎ ವಿಚಾರದಲ್ಲಿ ಇದು ಯಾವುದೂ ಪಾಲನೆ ಆಗಿಲ್ಲ’.

ಕೇಂದ್ರ ಸರ್ಕಾರದ ಏಜೆನ್ಸಿಗಳಾದ ಆದಾಯ ತೆರಿಗೆ (ಐ.ಟಿ) ಇಲಾಖೆ, ಜಾರಿ ನಿರ್ದೇಶನಾಲಯ (ಇ.ಡಿ) ಏಜೆನ್ಸಿಗಳಿಗೂ ಹೊಣೆಗಾರಿಕೆ ಇದೆ. ಹಣ ಲೇವಾದೇವಿ ಪ್ರಕರಣದಲ್ಲಿ ಇ.ಡಿ ಪ್ರಕರಣ ದಾಖಲಿಸಿಕೊಳ್ಳಬೇಕು. ಅನುಮಾನಾಸ್ಪದವಾಗಿ ಹಣದ ವ್ಯವಹಾರ ನಡೆದಾಗ ಈ ಏಜೆನ್ಸಿಗಳು ಎಚ್ಚೆತ್ತುಕೊಳ್ಳಬೇಕು. ಈ ಹಂತಗಳಲ್ಲಿ ಪೊಲೀಸರಿಗೆ ಮಧ್ಯಪ್ರವೇಶಿಸಲು ಅವಕಾಶ ಇಲ್ಲ. ವಂಚನೆ ಸಂಬಂಧ ದೂರು ಪೊಲೀಸ್‌ ಠಾಣೆಯಲ್ಲಿ ದಾಖಲಾದ ಬಳಿಕವಷ್ಟೆ ಪ್ರಕರಣ ಬಯಲಾಗಿದೆ’ ಎಂದೂ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.