ADVERTISEMENT

ಕೇತಗಾನಹಳ್ಳಿ ಸರ್ಕಾರಿ ಜಮೀನುಗಳ ಒತ್ತುವರಿ–ಎಸ್‌ಐಟಿ ರಚನೆಗೆ ತಡೆ: ಮೇಲ್ಮನವಿ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2025, 3:04 IST
Last Updated 4 ಸೆಪ್ಟೆಂಬರ್ 2025, 3:04 IST
ಕೋರ್ಟ್ (ಸಾಂದರ್ಭಿಕ ಚಿತ್ರ)
ಕೋರ್ಟ್ (ಸಾಂದರ್ಭಿಕ ಚಿತ್ರ)   

ಬೆಂಗಳೂರು: ‘ರಾಮನಗರ ತಾಲ್ಲೂಕು ಬಿಡದಿ ಹೋಬಳಿಯ ಕೇತಗಾನಹಳ್ಳಿ ವ್ಯಾಪ್ತಿಯಲ್ಲಿನ ಸರ್ಕಾರಿ ಜಮೀನುಗಳ ಒತ್ತುವರಿ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ, ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿರುವ ರಾಜ್ಯ ಸರ್ಕಾರದ ಆದೇಶಕ್ಕೆ ನೀಡಲಾಗಿರುವ ಮಧ್ಯಂತರ ತಡೆ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ವಿಭಾಗೀಯ ನ್ಯಾಯಪೀಠದಲ್ಲಿ ಮೇಲ್ಮನವಿ ಸಲ್ಲಿಸಿದೆ.

ಎಸ್‌ಐಟಿ ರಚನೆ ಪ್ರಶ್ನಿಸಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವ ಡಿ.ಸಿ.ತಮ್ಮಣ್ಣ, ಅವರ ಪತ್ನಿ ಕೆ.ಜಿ.ಪ್ರಮೀಳಾ, ಪುತ್ರ ಡಿ.ಟಿ.ಸಂತೋಷ್‌, ಸುನಂದಾ ಸಲ್ಲಿಸಿರುವ ಅರ್ಜಿಗಳನ್ನು ನ್ಯಾಯಮೂರ್ತಿ ಇ.ಎಸ್‌.ಇಂದಿರೇಶ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ಹಾಜರಾಗಿದ್ದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಕಿರಣ್ ವಿ.ರೋಣ ಅವರು ಮೇಲ್ಮನವಿಗೆ ಸಂಬಂಧಿಸಿದಂತೆ ನ್ಯಾಯಪೀಠಕ್ಕೆ ಮೊಮೊ ಸಲ್ಲಿಸಿದರು. ಈ ಅಂಶವನ್ನು ದಾಖಲಿಸಿಕೊಂಡ ನ್ಯಾಯಪೀಠ ವಿಚಾರಣೆಯನ್ನು ಅಕ್ಟೋಬರ್ 8ಕ್ಕೆ ಮುಂದೂಡಿತು.

ಪ್ರಕರಣವೇನು?: ‘ಎಚ್‌.ಡಿ.ಕುಮಾರಸ್ವಾಮಿ ಮತ್ತು ಅವರ ಸಂಬಂಧಿಗಳು ಕೇತಗಾನಹಳ್ಳಿಯ ಸರ್ವೇ ನಂಬರ್‌ 8, 9, 10, 16, 17 ಮತ್ತು 79ರಲ್ಲಿ 14 ಎಕರೆ ಸರ್ಕಾರಿ ಜಮೀನು ಒತ್ತುವರಿ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ವರದಿಯ ಅನುಸಾರ ಕ್ರಮ ಕೈಗೊಳ್ಳಬೇಕು ಎಂದು 2020ರಲ್ಲಿ ಹೈಕೋರ್ಟ್‌ ಆದೇಶಿಸಿತ್ತು. ಅರ್ಜಿದಾರರ ಪರ ಹೈಕೋರ್ಟ್‌ ವಕೀಲರಾದ ಎ.ವಿ.ನಿಶಾಂತ್‌ ಮತ್ತು ಟಿ.ಸುನಿಲ್‌ ರಾವ್‌ ಹಾಜರಿದ್ದರು.

ADVERTISEMENT

ಆದರೆ, ‘ಈ ಆದೇಶವನ್ನು ಜಾರಿಗೊಳಿಸಿಲ್ಲ’ ಎಂದು ಆರೋಪಿಸಿ ಸಮಾಜ ಪರಿವರ್ತನಾ ಸಮುದಾಯ, ರಾಜ್ಯ ಸರ್ಕಾರದ ವಿರುದ್ಧ ಹೈಕೋರ್ಟ್‌ನಲ್ಲಿ ಸಿವಿಲ್‌ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದೆ. ಈ ಹಿನ್ನೆಲೆಯಲ್ಲಿ ಐಎಎಸ್‌ ಅಧಿಕಾರಿ ಅಮ್ಲಾನ್ ಆದಿತ್ಯ ಬಿಸ್ವಾಸ್‌ ನೇತೃತ್ವದಲ್ಲಿ ಎಸ್‌ಐಟಿ ರಚಿಸಿ ಸರ್ಕಾರ 2025ರ ಜನವರಿ 28ರಂದು ಆದೇಶಿಸಿತ್ತು. ಈ ಆದೇಶಕ್ಕೆ ಏಕಸದಸ್ಯ ನ್ಯಾಯಪೀಠ ತಡೆ ನೀಡಿತ್ತು. 

ನಟಿ ರಾಧಿಕಾಗೆ ನೋಟಿಸ್‌

ಇದೇ ಪ್ರಕರಣದ ವಿಚಾರವಾಗಿ ತನಿಖಾಧಿಕಾರಿಗಳು ನಟಿ ಮತ್ತು ನಿರ್ಮಾಪಕಿ ರಾಧಿಕಾ ಅವರಿಗೆ ನೋಟಿಸ್‌ ನೀಡಿದ್ದರು. ಜಮೀರ್ ಅವರಿಗೆ ₹2 ಕೋಟಿ ಸಾಲ ನೀಡಿದ್ದರ ಬಗ್ಗೆ ದಾಖಲೆಗಳನ್ನು ಒದಗಿಸಿ ಎಂದು ಸೂಚಿಸಿದ್ದರು. ಕಳೆದ ವಾರವಷ್ಟೇ ತನಿಖಾಧಿಕಾರಿಗಳ ಎದುರು ಹಾಜರಾಗಿದ್ದ ರಾಧಿಕಾ ಅವರು, ದಾಖಲೆಗಳನ್ನು ಒದಗಿಸಲು ಸಮಯ ನೀಡುವಂತೆ ಕೋರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.