ADVERTISEMENT

ಪಾದರಾಯನಪುರ ಶಾಂತ; ನಗರದಲ್ಲೂ ಬಿಗಿ ಭದ್ರತೆ

* ಪಾಸ್‌ ದುರುಪಯೋಗ ಆರೋಪ * ನಗರದಾದ್ಯಂತ ವಾಹನಗಳ ತಪಾಸಣೆ * ಸಂಚಾರ ದಟ್ಟಣೆ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2020, 19:45 IST
Last Updated 21 ಏಪ್ರಿಲ್ 2020, 19:45 IST
ಬೆಂಗಳೂರಿನ ಪಾದರಾಯನಪುರದಲ್ಲಿ ಪೊಲೀಸ್ ಭದ್ರತೆ (ಪ್ರಜಾವಾಣಿ ಚಿತ್ರ: ಎಂ.ಎಸ್.ಮಂಜುನಾಥ್)
ಬೆಂಗಳೂರಿನ ಪಾದರಾಯನಪುರದಲ್ಲಿ ಪೊಲೀಸ್ ಭದ್ರತೆ (ಪ್ರಜಾವಾಣಿ ಚಿತ್ರ: ಎಂ.ಎಸ್.ಮಂಜುನಾಥ್)   

ಬೆಂಗಳೂರು: ಬಿಬಿಎಂಪಿ, ಆರೋಗ್ಯ ಇಲಾಖೆ ಹಾಗೂ ಪೊಲೀಸರ ಮೇಲೆ ಹಲ್ಲೆ ನಡೆದ ಬಳಿಕ ಪಾದರಾಯನಪುರ ಹಾಗೂ ಬಾಪೂಜಿನಗರದಲ್ಲಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದು, ಎರಡೂ ವಾರ್ಡ್‌ಗಳು ಮಂಗಳವಾರ ಶಾಂತವಾಗಿದ್ದವು. ಜೊತೆಗೆ, ಮುಂಜಾಗ್ರತಾ ಕ್ರಮವಾಗಿ ನಗರದಾದ್ಯಂತ ಭದ್ರತೆ ಹೆಚ್ಚಿಸಲಾಗಿದೆ.

ಗಲಾಟೆ ನಡೆದಿದ್ದ ಅರಫತ್ ನಗರದಲ್ಲಿ ಹೆಚ್ಚಿನ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ. ಶಸ್ತ್ರಸಜ್ಜಿತ ಸಿಬ್ಬಂದಿಯೂ ಕಾವಲು ಕಾಯುತ್ತಿದ್ದಾರೆ. ಪೊಲೀಸರ ವಾಹನಗಳೂ ಗಸ್ತು ತಿರುಗುತ್ತಿವೆ. ಮಹಿಳಾ ಪೊಲೀಸರು ಸಹ ವಾರ್ಡ್‌ನಲ್ಲಿ ಪಥ ಸಂಚಲನ ನಡೆಸಿ ಎಚ್ಚರಿಕೆ ಸಂದೇಶ ರವಾನಿಸಿದರು.

ಪ್ರತಿಯೊಂದು ಮನೆಗಳ ಮೇಲೂ ಪೊಲೀಸರು ಕಣ್ಣಿಟ್ಟಿದ್ದಾರೆ. ಅನಗತ್ಯವಾಗಿ ಓಡಾಡುವವರನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸುತ್ತಿದ್ದಾರೆ. ಅಗತ್ಯ ಸೇವೆ ಹೊರತುಪಡಿಸಿ ಬೇರೆ ಯಾರೂ ಮನೆಯಿಂದ ಹೊರಗೆ ಬರುತ್ತಿಲ್ಲ. ಪಾದರಾಯನಪುರ ಹಾಗೂ ಬಾಪೂಜಿನಗರ ವಾರ್ಡ್‌ಗಳು ಸ್ತಬ್ಧವಾಗಿವೆ. ಎಲ್ಲ ರಸ್ತೆಯಲ್ಲೂ ಪೊಲೀಸರೇ ಎದ್ದು ಕಾಣುತ್ತಿದ್ದರು.

ADVERTISEMENT

ಕೆಲ ಮಕ್ಕಳು ಹಾಗೂ ವೃದ್ಧರು, ಔಷಧಿ ಹಾಗೂ ಹಾಲು ತರಲು ಹೊರಗೆ ಬಂದಿದ್ದರು. ಅವರು ಮಾಸ್ಕ್‌ ಹಾಕಿರಲಿಲ್ಲ. ಪೊಲೀಸರೇ ಅವರಿಗೆ ಮಾಸ್ಕ್‌ ಕೊಟ್ಟು ಕಳುಹಿಸಿದರು.

ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಹಾಗೂ ಸ್ಥಳೀಯ ಕಾರ್ಪೊರೇಟರ್‌ಗಳು ಬೈಕ್‌ನಲ್ಲೇ ಸುತ್ತಾಡಿ ಜನರ ಸಮಸ್ಯೆ ಆಲಿಸಿದರು. ದಿನಸಿ ಹಾಗೂ ಇತರೆ ವಸ್ತುಗಳ ಪೂರೈಕೆಗೆ ಕ್ರಮ ಕೈಗೊಳ್ಳುವುದಾಗಿ ಹೇಳಿದರು. ಠಾಣೆಗೂ ಭೇಟಿ ನೀಡಿದರು. ಇದೇ ವೇಳೆ ಶಾಸಕ ಮಾಸ್ಕ್ ಹಾಕಿರಲಿಲ್ಲ. ಇದು ಹೆಚ್ಚು ಚರ್ಚೆಗೆ ಕಾರಣವಾಯಿತು.

ಎಲ್ಲ ರಸ್ತೆಗಳು ಬಂದ್: ‘ಪಾದರಾಯನಪುರದ ಎಲ್ಲ ಮುಖ್ಯ ಹಾಗೂ ಒಳರಸ್ತೆಗಳನ್ನು ಬಂದ್ ಮಾಡಲಾಗುವುದು. ಇಡೀ ಪ್ರದೇಶಕ್ಕೆ ಒಂದೇ ರಸ್ತೆ ಉಳಿಸಿ, ಅಲ್ಲಿಯೇ ಪೊಲೀಸರು ಮೊಕ್ಕಾಂ ಹೂಡಲಿದ್ದಾರೆ. ಯಾರಾದರೂ ಹೊರಗೆ ಬರಲು ಹಾಗೂ ಒಳಗೆ ಹೋಗಲು ಪ್ರಯತ್ನಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಹೇಳಿದರು.

ಪಾಸ್‌ಗಳ ದುರುಪಯೋಗ: ‘ಅಗತ್ಯ ಸೇವೆ ಸಲ್ಲಿಸುವವರಿಗೆ ಪಾಸ್‌ಗಳನ್ನು ವಿತರಿಸಲಾಗಿತ್ತು. ಅಂಥ ಪಾಸ್‌ಗಳನ್ನು ಬಹುತೇಕರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಅಂಥವರನ್ನು ಪತ್ತೆ ಮಾಡಲು ಕ್ರಮ ಕೈಗೊಳ್ಳಲಾಗಿದೆ’ ಎಂದು ಭಾಸ್ಕರ್ ರಾವ್ ಹೇಳಿದರು.

‘ಅಗತ್ಯ ಸೇವೆ ಎಂಬ ಕಾರಣಕ್ಕೆ ಹೆಚ್ಚು ದಾಖಲೆಗಳನ್ನು ಪರಿಶೀಲನೆ ಮಾಡದೇ ಪಾಸ್‌ ನೀಡಲಾಗಿತ್ತು. ಹಲವರು ತಪ್ಪು ಮಾಹಿತಿ ನೀಡಿ ಪಾಸ್‌ ಪಡೆದಿದ್ದು ಗೊತ್ತಾಗಿದೆ’ ಎಂದು ತಿಳಿಸಿದರು.

ವಾಹನ ತಪಾಸಣೆಯಿಂದ ಸಂಚಾರ ದಟ್ಟಣೆ: ಪಾಸ್‌ ಇಲ್ಲದ ಹಾಗೂ ಪಾಸ್‌ ಇದ್ದರೂ ಅನಗತ್ಯವಾಗಿ ಓಡಾಡುವರ ಪತ್ತೆಗಾಗಿ ನಗರದ ಹಲವೆಡೆ ಮಂಗಳವಾರ ವಾಹನಗಳ ತಪಾಸಣೆ ಮಾಡಲಾಯಿತು.

ಬಳ್ಳಾರಿ ರಸ್ತೆ, ಮೈಸೂರು ರಸ್ತೆ, ಕನಕಪುರ ರಸ್ತೆ, ತುಮಕೂರು ರಸ್ತೆ ಹಾಗೂ ಸುತ್ತಮುತ್ತ ರಸ್ತೆಗಳಲ್ಲಿ ತಪಾಸಣೆ ಚುರುಕಿನಿಂದ ನಡೆಯಿತು. ರಸ್ತೆಗೆ ಅಡ್ಡವಾಗಿ ಬ್ಯಾರಿಕೇಡ್‌ಗಳನ್ನು ಹಾಕಿ ಪ್ರತಿಯೊಂದು ವಾಹನವನ್ನು ತಡೆದ ಪೊಲೀಸರು ದಾಖಲೆಗಳ ಪರಿಶೀಲನೆ ನಡೆಸಿದರು.

ಈ ಹಿಂದೆ ಏ. 20ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ದೇಶದಾದ್ಯಂತ ಲಾಕ್‌ಡೌನ್ ಮುಂದುವರಿದಿರುವುದರಿಂದ ನಗರದಲ್ಲಿ ನಿಷೇಧಾಜ್ಞೆಯನ್ನೂ ಮೇ 3ರವರೆಗೂ ಮುಂದುವರಿಸಲಾಗಿದೆ ಎಂದುಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಪ್ರತಿಕ್ರಿಯಿಸಿದರು.

'ತಪ್ಪು ಮಾಡದ ಮಗನನ್ನು ಬಿಟ್ಟು ಬಿಡಿ'

ಗಲಾಟೆ ಸಂಬಂಧ ಬಂಧಿಸಿರುವ ಯುವಕನ ತಾಯಿಯೊಬ್ಬರು ಪೊಲೀಸರ ಠಾಣೆ ಬಳಿ ಬಂದು, ಯುವಕನ ಬಿಡುಗಡೆಗೆ ಒತ್ತಾಯಿಸಿದರು.

‘ಔಷಧಿ ತರಲೆಂದು ಮಗನನ್ನು ಮನೆಯಿಂದ ಹೊರಗೆ ಕಳುಹಿಸಿದೆ. ಆತ ವಾಪಸು ಬರುವಾಗ ಗಲಾಟೆ ನಡೆದಿದೆ. ಆತನಿಗೂ ಗಲಾಟೆಗೂ ಯಾವುದೇ ಸಂಬಂಧವಿಲ್ಲ. ವಿಚಾರಣೆ ಮಾಡಿ ಆತನನ್ನು ಬಿಡಿ’ ಎಂದು ಕೋರಿದರು. ಪೊಲೀಸರು ಹಾಗೂ ಸ್ಥಳೀಯರು ತಾಯಿಯನ್ನು ವಾಪಸು ಮನೆಗೆ ಕಳುಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.