ADVERTISEMENT

ಚರ್ಮದ ಬ್ಯಾಂಕ್: ಲಾಕ್‌ಡೌನ್‌ನಿಂದ ಚರ್ಮ ಸಂಗ್ರಹಕ್ಕೆ ಅಡ್ಡಿ, ದಾಸ್ತಾನು ಖಾಲಿ

ಕೋವಿಡ್,

ವರುಣ ಹೆಗಡೆ
Published 10 ಜುಲೈ 2021, 22:36 IST
Last Updated 10 ಜುಲೈ 2021, 22:36 IST
ಚರ್ಮದ ಬ್ಯಾಂಕ್ ಉಸ್ತುವಾರಿ ಬಿ.ಎನ್. ನಾಗರಾಜ್ ಅವರು ವೀಕ್ಷಣೆಗೆ ಇರಿಸಲಾದ ಚರ್ಮದ ಮಾದರಿಯನ್ನು ಪರಿಶೀಲಿಸುತ್ತಿರುವುದು– ಪ್ರಜಾವಾಣಿ ಚಿತ್ರ
ಚರ್ಮದ ಬ್ಯಾಂಕ್ ಉಸ್ತುವಾರಿ ಬಿ.ಎನ್. ನಾಗರಾಜ್ ಅವರು ವೀಕ್ಷಣೆಗೆ ಇರಿಸಲಾದ ಚರ್ಮದ ಮಾದರಿಯನ್ನು ಪರಿಶೀಲಿಸುತ್ತಿರುವುದು– ಪ್ರಜಾವಾಣಿ ಚಿತ್ರ   

ಬೆಂಗಳೂರು: ಕೋವಿಡ್ ಕಾಯಿಲೆಯು ಚರ್ಮ ಸಂಗ್ರಹಕ್ಕೆ ಹಿನ್ನಡೆಯನ್ನು ಉಂಟು ಮಾಡಿದೆ. ಒಂದು ವರ್ಷದಿಂದ ಯಾವುದೇ ವ್ಯಕ್ತಿ ಚರ್ಮ ದಾನ ಮಾಡಿಲ್ಲ. ಇದರಿಂದಾಗಿ ನಗರದಲ್ಲಿ ಸರ್ಕಾರ ಸ್ಥಾಪಿಸಿರುವ ಏಕೈಕ ಚರ್ಮದ ಬ್ಯಾಂಕ್‌ನಲ್ಲಿ ದಾಸ್ತಾನು ಸಂಪೂರ್ಣ ಖಾಲಿಯಾಗಿದೆ.

ವಿಕ್ಟೋರಿಯಾ ಆಸ್ಪತ್ರೆಯಲ್ಲಿರುವ ಚರ್ಮದ ಬ್ಯಾಂಕ್ ಕೋವಿಡ್ ನಡುವೆಯೂ ಕಾರ್ಯನಿರ್ವಹಿಸಿತ್ತು. ಕೊರೋನಾ ಮೊದಲ ಅಲೆಯಲ್ಲಿ ಒಬ್ಬರಿಂದ ಮಾತ್ರ ಚರ್ಮ ಸಂಗ್ರಹ ಪ್ರಕ್ರಿಯೆ ನಡೆದಿತ್ತು. ಎರಡನೇ ಅಲೆಯ ಅವಧಿಯಲ್ಲಿ, ಚರ್ಮ ದಾನಕ್ಕೆ ನೋಂದಾಯಿಸಿಕೊಂಡಿದ್ದ ವ್ಯಕ್ತಿಗಳು ಮೃತಪಟ್ಟಾಗ ಅವರ ಕುಟುಂಬದ ಸದಸ್ಯರು ಚರ್ಮ ದಾನಕ್ಕೆ ಸಂಬಂಧಿಸಿದಂತೆ ಬ್ಯಾಂಕನ್ನು ಸಂಪರ್ಕಿಸಿಲ್ಲ. ಬ್ಯಾಂಕ್‌ನಲ್ಲಿ 4 ಸಾವಿರ ಚದರ ಸೆಂ.ಮೀ. ಚರ್ಮದ ದಾಸ್ತಾನು ಇತ್ತು. ಅದು ಕೂಡಾ ಕಳೆದ ವರ್ಷಾಂತ್ಯದಲ್ಲಿ ಖಾಲಿಯಾಗಿದೆ. ಹಾಗಾಗಿ ಬೇಡಿಕೆ ಸಲ್ಲಿಸಿದ
ವರಿಗೂ ಚರ್ಮ ದೊರೆಯದಂತಹ ಸ್ಥಿತಿ ನಿರ್ಮಾಣವಾಗಿದೆ.

2016ರಲ್ಲಿ ಆರಂಭವಾದ ಚರ್ಮದ ಬ್ಯಾಂಕ್‌, ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಡಿ (ಬಿಎಂಸಿಆರ್‌ಐ) ಕಾರ್ಯನಿರ್ವಹಿಸುತ್ತಿದೆ. ಇದುವರೆಗೆ 118 ಮೃತ ದಾನಿಗಳಿಂದ ಚರ್ಮ ಸಂಗ್ರಹಿಸಿರುವ ಬ್ಯಾಂಕ್‌,
ಇತರ ಆಸ್ಪತ್ರೆಗಳು ಹಾಗೂ ವೈದ್ಯಕೀಯ ಕಾಲೇಜುಗಳಿಗೆ ಪೂರೈಸಿದೆ. ನೂರಕ್ಕೂ ಅಧಿಕ ಮಂದಿಗೆ ಚರ್ಮ ಕಸಿ ಮಾಡಿಸಿಕೊಳ್ಳಲು ಈ ಬ್ಯಾಂಕ್ ಸಹಕಾರಿಯಾಗಿದೆ.

ADVERTISEMENT

ಹೆಚ್ಚಿನ ಬೇಡಿಕೆ: ‘ಬೆಂಕಿ ಅವಘಡ ಹಾಗೂ ರಸ್ತೆ ಅಪಘಾತ ಪ್ರಕರಣಗಳ ಗಾಯಾಳುಗಳಿಗೆ ಚರ್ಮ ಕಸಿ ಚಿಕಿತ್ಸೆ ಅಗತ್ಯ. ವ್ಯಕ್ತಿ ಮೃತಪಟ್ಟಾಗ ಕುಟುಂಬಸ್ಥರು ಅಂಗಾಂಗದ ಮಾದರಿ ಯಲ್ಲಿಯೇ ಚರ್ಮವನ್ನೂ ದಾನ ಮಾಡಬಹುದು. ಮಾಹಿತಿ ಕೊರತೆ, ತಪ್ಪು ಕಲ್ಪನೆಯಿಂದ ಜನ ಚರ್ಮ ದಾನಕ್ಕೆ ಆಸಕ್ತಿ ತೋರಿಸುತ್ತಿಲ್ಲ. ಹೆಸರು ನೋಂದಾಯಿಸಿದ ವ್ಯಕ್ತಿ ಮೃತಪಟ್ಟಾಗ ಅವರ ಕುಟುಂಬದ ಸದಸ್ಯರು ಚರ್ಮ ಸಂಗ್ರಹಕ್ಕೆ ಸಂಬಂಧಿಸಿದಂತೆ ನಿಗದಿತ ಅವಧಿಯೊಳಗೆ ಬ್ಯಾಂಕ್‌ಗೆ ಮಾಹಿತಿ ಒದಗಿಸದಿರುವುದರಿಂದಲೂ ಸಮಸ್ಯೆಯಾಗುತ್ತಿದೆ. ಸದ್ಯ ಚರ್ಮದ ದಾಸ್ತಾನು ಇಲ್ಲ’ ಎಂದುಪ್ಲಾಸ್ಟಿಕ್ ಸರ್ಜರಿ ಮತ್ತು ಸುಟ್ಟ ಗಾಯಗಳ ವಿಭಾಗ ಹಾಗೂ ಸ್ಕಿನ್ ಬ್ಯಾಂಕ್‌ನ ಮುಖ್ಯಸ್ಥ ಡಾ.ಕೆ.ಟಿ. ರಮೇಶ್ ‘ಪ್ರಜಾವಾಣಿ’ ತಿಳಿಸಿದರು.

‘ಸುಟ್ಟ ಗಾಯ, ರಸ್ತೆ ಅಪಘಾತ ಸೇರಿದಂತೆ ವಿವಿಧ ಸಂದರ್ಭದಲ್ಲಿ ವ್ಯಕ್ತಿಯ ಚರ್ಮವುಶೇ 50ಕ್ಕೂ ಅಧಿಕ ಹಾನಿಗೊಳಗಾಗಿದ್ದರೆ, ಅವರು ಚೇತರಿಸಿಕೊಳ್ಳಲು ಚರ್ಮದ ಕಸಿ ಅಗತ್ಯ. ವ್ಯಕ್ತಿ ಮೃತಪಟ್ಟ 6ರಿಂದ 8ಗಂಟೆಯೊಳಗೆ ಚರ್ಮ ಪಡೆದುಕೊಳ್ಳಬೇಕು.ಕೊರೊನಾ ಸೋಂಕಿತ ಮೃತ ವ್ಯಕ್ತಿಗಳಿಂದ ಚರ್ಮ ಸಂಗ್ರಹಿಸಲು ಅವಕಾಶವಿಲ್ಲ. ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಕೆ ಹಾಗೂ ಲಾಕ್‌ಡೌನ್ ಸಡಿಲಿಕೆಯಿಂದಾಗಿ ಇನ್ನುಮುಂದೆ ಚರ್ಮ ದಾನ ಪ್ರಕ್ರಿಯೆ ಈ

ಸುಟ್ಟಗಾಯ: ರೋಗಿಗಳ ಸಂಖ್ಯೆ ಹೆಚ್ಚಳ
ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿರುವ ಮಹಾಬೋಧಿ ಸುಟ್ಟ ಗಾಯಗಳ ಚಿಕಿತ್ಸಾ ಕೇಂದ್ರಕ್ಕೆ ಪ್ರತಿನಿತ್ಯ ಸರಾಸರಿ 50ರಿಂದ 60 ಹೊರರೋಗಿಗಳು ಬರುತ್ತಿದ್ದಾರೆ. ಲಾಕ್‌ಡೌನ್ ಅವಧಿಯಲ್ಲಿ ಕೂಡ ಈ ಕೇಂದ್ರವು ಕಾರ್ಯನಿರ್ವಹಿಸಿದೆ. ಇತರ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು ಕೋವಿಡ್ ಚಿಕಿತ್ಸೆಗೆ ಆದ್ಯತೆ ನೀಡಿದ ಪರಿಣಾಮ ಈ ಕೇಂದ್ರಕ್ಕೆ ಬರುವ ಹೊರರೋಗಿಗಳ ಸಂಖ್ಯೆ ಅಧಿಕವಾಗಿತ್ತು.

‘ಸುಟ್ಟ ಗಾಯದಿಂದ ನರಳುವವರಿಗೆ ಲಾಕ್‌ಡೌನ್ ಅವಧಿಯಲ್ಲೂ ಚಿಕಿತ್ಸೆ ಒದಗಿಸ ಲಾಗಿದೆ. ಕೋವಿಡ್‌ ಪೂರ್ವದ ದಿನ ಗಳಲ್ಲಿ ಬರುತ್ತಿದ್ದಷ್ಟೇ ರೋಗಿಗಳು ಈ ಅವಧಿಯಲ್ಲೂ ಬರುತ್ತಿದ್ದರು. ಈಗ ಈ ಕೇಂದ್ರದಲ್ಲಿ ಪ್ಲಾಸ್ಟಿಕ್ ಸರ್ಜರಿಯನ್ನೂ ಪ್ರಾರಂಭಿಸಲಾ
ಗಿದೆ. ಪ್ರತಿನಿತ್ಯ ಸರಾಸರಿ 5ರಿಂದ 6 ಮಂದಿಗೆ ಶಸ್ತ್ರಚಿಕಿತ್ಸೆ ನೆರವೇರಿಸ
ಲಾಗುತ್ತದೆ’ ಎಂದು ಡಾ.ಕೆ.ಟಿ. ರಮೇಶ್ ತಿಳಿಸಿದರು.

ಮೊದಲಿನಂತೆ ನಡೆಯಬಹುದು’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

5 ವರ್ಷದವರೆಗೂ ಶೇಖರಣೆ ಸಾಧ್ಯ
18 ವರ್ಷ ದಾಟಿದ ವ್ಯಕ್ತಿ ಮರಣ ಹೊಂದಿದ ಬಳಿಕ ಕುಟುಂಬದ ಸದಸ್ಯರ ಒಪ್ಪಿಗೆ ಪಡೆದು ಕಾಲು ಹಾಗೂ ತೊಡೆಯ ಭಾಗದ ಚರ್ಮದ ಮೇಲ್ಪದರ ಪಡೆಯಲಾಗುತ್ತದೆ. ದಾನಿಯು ಎಚ್ಐವಿ, ಎಚ್‌ಸಿವಿ, ಚರ್ಮದ ಕ್ಯಾನ್ಸರ್‌ ಪೀಡಿತರಲ್ಲ ಎಂಬುದನ್ನು ಖಚಿತಪಡಿಸಿಕೊಂಡು, ಅಗತ್ಯ ಇರುವವರಿಗೆ ಚರ್ಮ ನೀಡಲಾಗುತ್ತದೆ.ವೈದ್ಯಕೀಯ ಉಪಕರಣದ ಸಹಾಯದಿಂದ ರಕ್ತಸ್ರಾವ ಆಗದ ರೀತಿಯಲ್ಲಿ ಚರ್ಮದ ಮೇಲ್ಪದರವನ್ನು ಮಾತ್ರ ತೆಗೆದು, ಬ್ಯಾಂಡೇಜ್ ಮಾಡಲಾಗುತ್ತದೆ. ಸಂಸ್ಕರಿಸಿದ ಚರ್ಮವನ್ನು 5 ವರ್ಷದವರೆಗೂ ಶೇಖರಣೆ ಮಾಡಬಹುದು ಎನ್ನು ತ್ತಾರೆ ಚರ್ಮ ಬ್ಯಾಂಕಿನ ಉಸ್ತುವಾರಿಬಿ.ಎನ್. ನಾಗರಾಜ್.

ಸಹಾಯವಾಣಿ: 080 26703633 ಅಥವಾ 82775 76147

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.