ADVERTISEMENT

ಗಾಯಾಳು ಆರೈಕೆಗೆ ಬೇಕು ಮೃತರ ಚರ್ಮ: ದಾನಿಗಳಿಗಾಗಿ ಕಾಯುತ್ತಿದೆ ಸ್ಕಿನ್ ಬ್ಯಾಂಕ್

ವರುಣ ಹೆಗಡೆ
Published 17 ಜನವರಿ 2026, 1:40 IST
Last Updated 17 ಜನವರಿ 2026, 1:40 IST
<div class="paragraphs"><p>ಸ್ಕಿನ್‌ ಬ್ಯಾಂಕ್‌ನಲ್ಲಿರುವ ಚರ್ಮದ ದಾಸ್ತಾನನ್ನು ತಾಂತ್ರಿಕ ಸಿಬ್ಬಂದಿ ಪರಿಶೀಲಿಸಿದರು&nbsp; ಪ್ರ</p></div>

ಸ್ಕಿನ್‌ ಬ್ಯಾಂಕ್‌ನಲ್ಲಿರುವ ಚರ್ಮದ ದಾಸ್ತಾನನ್ನು ತಾಂತ್ರಿಕ ಸಿಬ್ಬಂದಿ ಪರಿಶೀಲಿಸಿದರು  ಪ್ರ

   

ಜಾವಾಣಿ ಚಿತ್ರ; ರಂಜು ಪಿ.

ಬೆಂಗಳೂರು: ರಾಜ್ಯದ ಮೊದಲ, ಏಕೈಕ ಸರ್ಕಾರಿ ಸ್ಕಿನ್‌ ಬ್ಯಾಂಕ್‌ನಲ್ಲಿರುವ (ಚರ್ಮ ನಿಧಿ) ಮೃತರ ಚರ್ಮಕ್ಕೆ ಭಾರಿ ಬೇಡಿಕೆಯಿದ್ದು, ಚರ್ಮ ದಾಸ್ತಾನು ಸೀಮಿತವಾಗಿದೆ. ಹೀಗಾಗಿ, ಬೆಂಕಿ ಅವಘಡ ಸೇರಿ ವಿವಿಧ ಸಂದರ್ಭದಲ್ಲಿ ಗಾಯಾಳುಗಳಿಗೆ ಚರ್ಮ ಒದಗಿಸುವುದು ಸವಾಲಾಗಿದೆ. 

ADVERTISEMENT

ಅರಿವಿನ ಕೊರತೆ, ಕುಟುಂಬಸ್ಥರು ಮಾಹಿತಿ ಒದಗಿಸದಿರುವುದು ಸೇರಿ ವಿವಿಧ ಕಾರಣಗಳಿಂದ ಚರ್ಮ ಸಂಗ್ರಹಕ್ಕೆ ಹಿನ್ನಡೆಯಾಗಿದೆ. ಹೀಗಾಗಿ, ಬೇಡಿಕೆ ಮತ್ತು ಪೂರೈಕೆ ನಡುವೆ ಶೇ 90ರಷ್ಟು ವ್ಯತ್ಯಾಸ ಉಂಟಾಗಿದೆ. ಸದ್ಯ ಈ ಬ್ಯಾಂಕ್‌ನಲ್ಲಿ 2 ಸಾವಿರ ಚದರ ಸೆಂ.ಮೀ. ಚರ್ಮ ಮಾತ್ರ ದಾಸ್ತಾನು ಇದ್ದು, ಗಾಯದ ಪ್ರಮಾಣ ಆಧರಿಸಿ ಒಬ್ಬರಿಂದ ಇಬ್ಬರಿಗೆ ಮಾತ್ರ ನೀಡಲು ಸಾಧ್ಯವಾಗಲಿದೆ. ಇನ್ನೊಂದೆಡೆ ರಾಜ್ಯದ ವಿವಿಧೆಡೆ ಹೆಚ್ಚುತ್ತಿರುವ ರಸ್ತೆ ಅಪಘಾತ, ಬೆಂಕಿ ಅವಘಡ ಸೇರಿ ವಿವಿಧ ಸಂದರ್ಭದಲ್ಲಿ ಚರ್ಮಕ್ಕೆ ಭಾರಿ ಪ್ರಮಾಣದಲ್ಲಿ ಹಾನಿ ಮಾಡಿಕೊಂಡವರಿಗೆ, ಚರ್ಮ ಕಸಿ ನಡೆಸಲು ಆಸ್ಪತ್ರೆಗಳು ಈ ಬ್ಯಾಂಕ್‌ಗೆ ಚರ್ಮಕ್ಕಾಗಿ ಬೇಡಿಕೆ ಸಲ್ಲಿಸುತ್ತಿವೆ. 

ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯು (ಬಿಎಂಸಿಆರ್‌ಐ), ರೋಟರಿ ಮತ್ತು ಆಶೀರ್ವಾದ್ ಸಂಸ್ಥೆಯ ಸಹಯೋಗದಲ್ಲಿ 2016ರಲ್ಲಿ ಈ ಸ್ಕಿನ್ ಬ್ಯಾಂಕ್ ಸ್ಥಾಪಿಸಿದೆ. ಬಿಎಂಸಿಆರ್‌ಐ ಅಡಿ ಇರುವ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಈ ಬ್ಯಾಂಕ್‌ ಕಾರ್ಯನಿರ್ವಹಿಸುತ್ತಿದೆ. ಅಂಗಾಂಗ ದಾನದ ಮಾದರಿಯಲ್ಲಿಯೇ ಮೃತರ ಚರ್ಮವನ್ನು ಇಲ್ಲಿ ದಾನವಾಗಿ ಪಡೆದು ದಾಸ್ತಾನು ಮಾಡಲಾಗುತ್ತದೆ. ಈವರೆಗೆ 280 ಮೃತರಿಂದ ಚರ್ಮವನ್ನು ದಾನವಾಗಿ ಪಡೆದು, 326 ಮಂದಿಗೆ ಅಗತ್ಯಕ್ಕೆ ಅನುಸಾರ ಚರ್ಮವನ್ನು ಉಚಿತವಾಗಿ ಒದಗಿಸಲಾಗಿದೆ.  

ಸುಟ್ಟಗಾಯಗಳ ಚಿಕಿತ್ಸಾ ಕೇಂದ್ರ: ವಿಕ್ಟೋರಿಯಾ ಆಸ್ಪತ್ರೆಯ ಮಹಾಬೋಧಿ ಸುಟ್ಟಗಾಯಗಳ ಚಿಕಿತ್ಸಾ ಕೇಂದ್ರವು 50 ಹಾಸಿಗೆಗಳನ್ನು ಒಳಗೊಂಡಿದೆ. ಇಲ್ಲಿ ಶೇ 80ರಷ್ಟು ಹಾಸಿಗೆಗಳು ವರ್ಷದ ಬಹುತೇಕ ದಿನ ಭರ್ತಿ ಆಗಿರುತ್ತವೆ. ಚರ್ಮಕ್ಕೆ ಗಂಭೀರ ಹಾನಿ ಮಾಡಿಕೊಂಡವರಿಗೆ ಇಲ್ಲಿ ಚಿಕಿತ್ಸೆ ಒದಗಿಸಿ, ಅಗತ್ಯವಿದ್ದಲ್ಲಿ ಸ್ಕಿನ್ ಬ್ಯಾಂಕ್‌ನಿಂದ ಚರ್ಮವನ್ನು ದಾಖಲಾದ ಗಾಯಾಳುಗಳಿಗೆ ಆದ್ಯತೆ ಮೇರೆಗೆ ಒದಗಿಸಲಾಗುತ್ತದೆ. ರಾಜ್ಯದ ವಿವಿಧೆಡೆ ರಸ್ತೆ ಅಪಘಾತ ಹಾಗೂ ಬೆಂಕಿ ಅವಘಡಗಳು ಹೆಚ್ಚುತ್ತಿರುವ ಪರಿಣಾಮ, ಚರ್ಮಕ್ಕೆ ತಿಂಗಳಿಗೆ ಸರಾಸರಿ 15 ರಿಂದ 20 ಕಡೆಗಳಿಂದ ಬೇಡಿಕೆ ಸಲ್ಲಿಕೆಯಾಗುತ್ತಿವೆ. ಆದರೆ, ದಾನಿಗಳ ಕೊರತೆಯಿಂದ ಲಭ್ಯ ಚರ್ಮವನ್ನು 8ರಿಂದ 10 ಮಂದಿಗೆ ಒದಗಿಸಲು ಸಾಧ್ಯವಾಗುತ್ತಿದೆ. 

‘ಸಣ್ಣ ಪ್ರಮಾಣದಲ್ಲಿ ಗಾಯವಾದಲ್ಲಿ ಅವರದೇ ಚರ್ಮವನ್ನು ತೆಗೆದು ಕಸಿ ಮಾಡಬಹುದು. ಹೆಚ್ಚಿನ ಪ್ರಮಾಣದ ಚರ್ಮಕ್ಕೆ ಹಾನಿಯಾಗಿದ್ದಲ್ಲಿ, ಅವರಿಂದ ಚರ್ಮ ಪಡೆಯಲು ಸಾಧ್ಯವಾಗುವುದಿಲ್ಲ. ಆ ವೇಳೆ ದಾನಿಗಳಿಂದ ಪಡೆದ ಚರ್ಮದ ಅಗತ್ಯ ಇರುತ್ತದೆ. 18ರಿಂದ 70 ವರ್ಷದೊಳಗಿನವರು ಮೃತಪಟ್ಟ 6ರಿಂದ 8 ಗಂಟೆಯೊಳಗೆ ಅವರ ಚರ್ಮವನ್ನು ಪಡೆದು, ಐದು ಹಂತದಲ್ಲಿ ಸಂಸ್ಕರಿಸುತ್ತೇವೆ. ಬೇಡಿಕೆ ಮತ್ತು ಪೂರೈಕೆ ನಡುವೆ ಹೊಂದಾಣಿಕೆಯಾಗುತ್ತಿಲ್ಲ’ ಎಂದು ಬಿಎಂಸಿಆರ್‌ಐ ಪ್ಲಾಸ್ಟಿಕ್ ಸರ್ಜರಿ ಮತ್ತು ಸುಟ್ಟಗಾಯಗಳ ವಿಭಾಗ ಹಾಗೂ ಸ್ಕಿನ್ ಬ್ಯಾಂಕ್ ಮುಖ್ಯಸ್ಥ ಡಾ. ಯೋಗೀಶ್ವರಪ್ಪ ಸಿ.ಎನ್. ತಿಳಿಸಿದರು. 

ಹೊರ ರಾಜ್ಯಗಳಿಂದಲೂ ಚರ್ಮಕ್ಕೆ ಬೇಡಿಕೆ ಬರುತ್ತಿದೆ. ಚರ್ಮ ದಾನ ಕೂಡ ಅಂಗಾಂಗ ದಾನದಂತೆ ಸರಳ ಪ್ರಕ್ರಿಯೆ. ಜನರು ಚರ್ಮದ ದಾನಕ್ಕೆ ಮುಂದಾಗುವ ಮೂಲಕ ಇನ್ನಷ್ಟು ಜೀವಕ್ಕೆ ನೆರವಾಗಬೇಕು
ಡಾ. ಯೋಗೀಶ್ವರಪ್ಪ ಸಿ.ಎನ್. ಸ್ಕಿನ್ ಬ್ಯಾಂಕ್ ಮುಖ್ಯಸ್ಥ

5 ವರ್ಷದವರೆಗೂ ಶೇಖರಣೆ  

‘18 ವರ್ಷ ಮೇಲ್ಪಟ್ಟ ಮೃತರ ಕಾಲು ಹಾಗೂ ತೊಡೆಯ ಭಾಗದ ಚರ್ಮದ ಮೇಲ್ಪದರವನ್ನು ದಾನವಾಗಿ ಪಡೆಯಲಾಗುತ್ತದೆ. ಈ ಪ್ರಕ್ರಿಯೆಗೂ ಮೊದಲು ಕುಟುಂಬದ ಸದಸ್ಯರ ಒಪ್ಪಿಗೆ ಪಡೆಯಲಾಗುತ್ತದೆ. ದಾನಿಯು ಎಚ್ಐವಿ ಎಚ್‌ಸಿವಿ ಚರ್ಮದ ಕ್ಯಾನ್ಸರ್‌ ಪೀಡಿತರಲ್ಲ ಎಂಬುದನ್ನು ಖಚಿತಪಡಿಸಿಕೊಂಡು ಪಡೆದ ಚರ್ಮವನ್ನು ಅಗತ್ಯ ಇರುವವರಿಗೆ ನೀಡಲಾಗುತ್ತದೆ. ವೈದ್ಯಕೀಯ ಉಪಕರಣದ ಸಹಾಯದಿಂದ ರಕ್ತಸ್ರಾವ ಆಗದ ರೀತಿಯಲ್ಲಿ ಚರ್ಮದ ಮೇಲ್ಪದರವನ್ನು ಮಾತ್ರ ತೆಗೆದು ಬ್ಯಾಂಡೇಜ್ ಮಾಡಲಾಗುತ್ತದೆ. ಸಂಸ್ಕರಿಸಿದ ಚರ್ಮವನ್ನು 5 ವರ್ಷದವರೆಗೂ ಶೇಖರಿಸಬಹುದು’ ಎಂದು ಚರ್ಮ ಬ್ಯಾಂಕಿನ ತಾಂತ್ರಿಕ ಸಿಬ್ಬಂದಿ ಕೆ.ಆರ್. ಲೋಹಿತಾಶ್ವ ವಿವರಿಸಿದರು.

‘ಜನರು ನೇತ್ರದಾನ ಹಾಗೂ ಇತರ ಅಂಗಾಂಗಗಳನ್ನು ದಾನ ಮಾಡಲು ಸಿದ್ಧರಿದ್ದಾರೆ. ಆದರೆ ಚರ್ಮದಾನ ಮಾಡುವುದರಿಂದ ದೇಹ ವಿರೂಪಗೊಳ್ಳುತ್ತದೆ ಎಂಬ ತಪ್ಪು ಕಲ್ಪನೆಯಿಂದ ಹಿಂಜರಿಯುತ್ತಾರೆ. ದಾನಿಗಳಿಂದ ದೇಹದ ಎಲ್ಲ ಚರ್ಮ ಪಡೆಯುವುದಿಲ್ಲ. ತೊಡೆಗಳು ಮತ್ತು ಕಾಲುಗಳಿಂದ (1000ದಿಂದ 1500 ಚದರ ಸೆಂ.ಮೀ) ಚರ್ಮದ ಹೊರ ಪದರವನ್ನು ಮಾತ್ರ ಪಡೆಯಲಾಗುತ್ತದೆ’ ಎಂದರು. 

24x7 ಸಹಾಯವಾಣಿ

ಚರ್ಮದಾನದ ಬಗ್ಗೆ ಪ್ರತಿಜ್ಞೆ ಕೈಗೊಳ್ಳುವವರು ಹಾಗೂ ದಾನಕ್ಕೆ ಸಂಬಂಧಿಸಿದಂತೆ ಸಹಾಯವಾಣಿ ಸಂಖ್ಯೆ 080 26703633 ಅಥವಾ 24x7 ಸಹಾಯವಾಣಿ 8277576147ಕ್ಕೆ ಸಂಪರ್ಕಿಸಬಹುದಾಗಿದೆ. ಚರ್ಮ ದಾನಕ್ಕೆ ಸಂಬಂಧಿಸಿದಂತೆ ದಾನಿಗಳ ಕುಟುಂಬಕ್ಕೆ ಪ್ರಮಾಣಪತ್ರವನ್ನೂ ನೀಡಲಾಗುತ್ತದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.