ADVERTISEMENT

10 ಕಡೆ ಸ್ಮಾರ್ಟ್ ಪಾರ್ಕಿಂಗ್ ಇಂದಿನಿಂದ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2020, 19:41 IST
Last Updated 18 ಸೆಪ್ಟೆಂಬರ್ 2020, 19:41 IST

ಬೆಂಗಳೂರು: ಕೋವಿಡ್ ಕಾರಣಕ್ಕೆ ಸ್ಥಗಿತಗೊಂಡಿದ್ದ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆಗೆ ಮರುಚಾಲನೆ ನೀಡಲು ಮುಂದಾಗಿರುವ ಬಿಬಿಎಂಪಿ, ಮೊದಲ ಹಂತದಲ್ಲಿ ಕೇಂದ್ರ ವಾಣಿಜ್ಯ ಪ್ರದೇಶದ (ಸಿಬಿಡಿ) 10 ಕಡೆ ಪಾರ್ಕಿಂಗ್ ವ್ಯವಸ್ಥೆಯನ್ನು ಶನಿವಾರದಿಂದಲೇ ಜಾರಿಗೆ ತರಲಿದೆ.

ಖಾಸಗಿ ಸಹಭಾಗಿತ್ವದಲ್ಲಿ ಆರಂಭಿಸಿರುವ ಈ ಯೋಜನೆಗೆಬಿಬಿಎಂಪಿ ಆಡಳಿತಾಧಿಕಾರಿ ಗೌರವ್‌ ಗುಪ್ತ ಚಾಲನೆ ನೀಡುವರು. ಸೆಂಟ್ರಲ್ ಪಾರ್ಕಿಂಗ್ ಸರ್ವಿಸಸ್‌ ಸಂಸ್ಥೆ ಈ ಯೋಜನೆ ಅನುಷ್ಠಾನಗೊಳಿಸುತ್ತಿದ್ದು, ಪಾಲಿಕೆಗೆ ವಾರ್ಷಿಕ ₹31.56 ಕೋಟಿ ವರಮಾನ ನಿರೀಕ್ಷೆ ಮಾಡಲಾಗಿದೆ.

ಮೊದಲ ಹಂತದಲ್ಲಿಕನ್ನಿಂಗ್‌ಹ್ಯಾಮ್ ರಸ್ತೆ, ಎಂ.ಜಿ. ರಸ್ತೆ, ಕಸ್ತೂರಬಾ ರಸ್ತೆ, ಸೇಂಟ್ ಮಾರ್ಕ್ಸ್ ರಸ್ತೆ, ರೆಸಿಡೆನ್ಸಿ ರಸ್ತೆ, ಮ್ಯೂಸಿಯಂ ಕ್ರಾಸ್ ರಸ್ತೆ, ವಿಠಲ್‌ ಮಲ್ಯ ರಸ್ತೆ, ಮಲ್ಯ ಆಸ್ಪತ್ರೆ ರಸ್ತೆ, ಚರ್ಚ್‌ ಸ್ಟ್ರೀಟ್, ಆಲಿ ಅಸ್ಕರ್ ರಸ್ತೆಯಲ್ಲಿ ಜಾರಿಗೊಳ್ಳಲಿದೆ. 475 ಕಾರುಗಳು ಮತ್ತು 510 ದ್ವಿಚಕ್ರ ವಾಹನಗಳ ನಿಲುಗಡೆಗೆ ಅವಕಾಶ ಆಗಲಿದೆ.

ADVERTISEMENT

‘ಮುಂದಿನ ಕೆಲವೇ ತಿಂಗಳಲ್ಲಿ ಉಳಿದ ಹಲವು ರಸ್ತೆಗಳಲ್ಲಿ ಈ ವ್ಯವಸ್ಥೆ ಜಾರಿಗೆ ತರಲಾಗುವುದು’ ಎಂದು ಪಾಲಿಕೆ ಆಯುಕ್ತ ಎನ್. ಮಂಜುನಾಥ ಪ್ರಸಾದ್ ತಿಳಿಸಿದ್ದಾರೆ.

ನಗರದ ರಸ್ತೆಗಳನ್ನು ಎ, ಬಿ ಮತ್ತು ಸಿ ಎಂಬುದಾಗಿ ಮೂರು ವಿಭಾಗಗಳನ್ನು ಮಾಡಲಾಗಿದೆ. ವಿಭಾಗ ಆಧರಿಸಿ ಪಾರ್ಕಿಂಗ್ ಶುಲ್ಕ ವಿಧಿಸಲಾಗುತ್ತದೆ. ಸಾಕಷ್ಟು ರಸ್ತೆಗಳು ಸಿ ವಲಯದ ವ್ಯಾಪ್ತಿಗೇ ಬರಲಿದೆ.

ಪಾರ್ಕಿಂಗ್ ಶುಲ್ಕ, ಮಾರ್ಗದರ್ಶನ ವ್ಯವಸ್ಥೆಯನ್ನು ಒಳಗೊಂಡ ಸ್ಮಾರ್ಟ್ ಪಾರ್ಕಿಂಗ್ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ. ಈ ಆ್ಯಪ್ ಇದ್ದ ವಾಹನಗಳ ಚಾಲಕರು ಪಾರ್ಕಿಂಗ್‌ಗೆ ಜಾಗ ಇದೆಯೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಬಹುದು. ಯುಪಿಐ ಆಧರಿಸಿ ಶುಲ್ಕವನ್ನೂ ಡಿಜಿಟಲ್ ರೂಪದಲ್ಲೇ ಪಾವತಿಸಬಹುದು. ‌

‘ಆರಂಭದಲ್ಲಿ ಒಂದು ವಾರ ಪಾರ್ಕಿಂಗ್ ಶುಲ್ಕವನ್ನು ಪೂರ್ಣ ಪ್ರಮಾಣದಲ್ಲಿ ಮರುಪಾವತಿ ಮಾಡಲಾಗುವುದು. ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವುದನ್ನು ಉತ್ತೇಜಿಸಲು ಈ ಕ್ರಮ ಕೈಗೊಳ್ಳಲಾಗಿದೆ’ ಎಂದು ಸ್ಮಾರ್ಟ್ ಪಾರ್ಕಿಂಗ್ ಸರ್ವಿಸಸ್ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.