ADVERTISEMENT

ಚಳಿಯ ನಡುವೆ ‘ಸ್ಮಾರ್ಟ್‌ ರನ್‌’

ಸಿರಿಧಾನ್ಯಗಳ ಅರಿವು ಮೂಡಿಸಿದ ಜಾಥಾ

​ಪ್ರಜಾವಾಣಿ ವಾರ್ತೆ
Published 6 ಜನವರಿ 2019, 20:23 IST
Last Updated 6 ಜನವರಿ 2019, 20:23 IST
‘ಸ್ಮಾರ್ಟ್‌ ರನ್‌– 2019’ ರಲ್ಲಿ ಯುವಜನರು ಉತ್ಸಾಹದಿಂದ ಭಾಗವಹಿಸಿದರು -ಪ್ರಜಾವಾಣಿ ಚಿತ್ರ
‘ಸ್ಮಾರ್ಟ್‌ ರನ್‌– 2019’ ರಲ್ಲಿ ಯುವಜನರು ಉತ್ಸಾಹದಿಂದ ಭಾಗವಹಿಸಿದರು -ಪ್ರಜಾವಾಣಿ ಚಿತ್ರ   

ಬೆಂಗಳೂರು: ಮಂಜು ಮುಸುಕಿದ ವಾತಾವರಣ, ಇಬ್ಬನಿಯ ತುಂತುರು, ಮೈ ನಡುಗಿಸುವ ಚಳಿಯ ನಡುವೆಯೇ ಹಳದಿ ಟೀ–ಶರ್ಟ್‌ ತೊಟ್ಟು ಓಡಲು ನೂರಾರು ಜನ ಸಿದ್ಧರಾಗಿದ್ದರು.

ಸಿರಿಧಾನ್ಯಗಳ ಕುರಿತು ಅರಿವು ಮೂಡಿಸುವ ಬಗ್ಗೆ ರಾಜ್ಯ ಕೃಷಿ ಇಲಾಖೆ ಭಾನುವಾರಕಬ್ಬನ್‌ ಉದ್ಯಾನದಲ್ಲಿ ಆಯೋಜಿಸಿದ್ದ ‘ಸ್ಮಾರ್ಟ್‌ ರನ್‌–2019’ ಓಟದಲ್ಲಿ ಅವರೆಲ್ಲ ಭಾಗವಹಿಸಿದರು.

ಹಿರಿಯರು, ಕಿರಿಯರು ಎಂಬ ಭೇದವಿಲ್ಲದೇ ನೂರಾರು ಮಂದಿ ಓಟದಲ್ಲಿ ಭಾಗವಹಿಸಿದರು. ಹಲವರು ಜರ್ಕಿನ್‌, ಸ್ವೆಟರ್‌, ಟೋಪಿ ಧರಿಸಿ, ಇಯರ್‌ ಫೋನ್‌ಗಳನ್ನು ಸಿಕ್ಕಿಸಿಕೊಂಡು ಹಾಡು ಕೇಳುತ್ತ ಓಡಿದರೆ, ಇನ್ನು ಕೆಲವರು ತಂಪಾದ ವಾತಾವರಣವನ್ನು ಆನಂದಿಸುತ್ತ ಮುಂದಡಿ ಇಟ್ಟರು. ಕೆಲವರು ವ್ಯಾಯಾಮ, ಜುಂಬಾ ನೃತ್ಯ ಮಾಡಿದರು.

ADVERTISEMENT

ಓಟಕ್ಕೆ ಚಾಲನೆ ನೀಡಿದ ಕೃಷಿ ಸಚಿವ ಎಚ್.ಎನ್.ಶಿವಶಂಕರ ರೆಡ್ಡಿ, ‘ಸಾವಯವ ಪದಾರ್ಥ ಮತ್ತು ಸಿರಿಧಾನ್ಯಗಳು ಆರೋಗ್ಯಕ್ಕೆ ಒಳ್ಳೆಯದು ಎಂಬ ಬಗ್ಗೆ ಜನರಲ್ಲಿ ಜಾಗೃತಿ ಉಂಟಾಗಿದೆ. ಹಾಗಾಗಿ, ಅವು ಜನಪ್ರಿಯತೆಯನ್ನು ಪಡೆಯುತ್ತಿವೆ’ ಎಂದು ಹೇಳಿದರು.

ಜಯದೇವ ಹೃದ್ರೋಗ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ಸಿ.ಎನ್‌.ಮಂಜುನಾಥ್, ‘ಸಿರಿಧಾನ್ಯಗಳು ಪೋಷಕಾಂಶಗಳ ಆಕರಗಳು. ಮಧುಮೇಹ, ಬೊಜ್ಜು ಕಡಿಮೆ ಮಾಡಲು ಇವು ಸಹಕಾರಿ’ ಎಂದರು.

ಸಿರಿಧಾನ್ಯಗಳ ಬಳಕೆಗೆ ಒತ್ತು ನೀಡುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಕೃಷ್ಣ ಬೈರೇಗೌಡ ಸಲಹೆ ನೀಡಿದರು.

ನಗರದ ಅರಮನೆ ಮೈದಾನದಲ್ಲಿ ಇದೇ 18 ರಿಂದ 20ರವರೆಗೆ ನಡೆಯಲಿರುವ ಸಾವಯವ ಮತ್ತು ಸಿರಿಧಾನ್ಯಗಳ ಅಂತರರಾಷ್ಟ್ರೀಯ ಮಾರಾಟ ಮೇಳಕ್ಕೆ ಪೂರ್ವಭಾವಿಯಾಗಿ ಈ ಓಟವನ್ನು ಆಯೋಜಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.