ADVERTISEMENT

ಹಡ್ಸನ್ ವೃತ್ತದಲ್ಲಿ ಕಲುಷಿತ ಗಾಳಿಯನ್ನು ಶುದ್ಧೀಕರಿಸಲಿದೆ ‘ನೂತನ’ ಯಂತ್ರ

ಹಡ್ಸನ್‌ ವೃತ್ತ: ‘ಹೊಂಜು ಗೋಪುರ’ ಪ್ರಾಯೋಗಿಕ ಅಳವಡಿಕೆ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2021, 20:00 IST
Last Updated 23 ಮಾರ್ಚ್ 2021, 20:00 IST
ಕಲುಷಿತ ಗಾಳಿಯನ್ನು ಶುದ್ಧೀಕರಿಸುವ ‘ಹೊಂಜು ಗೋಪುರ’ ಯಂತ್ರವನ್ನು ಹಡ್ಸನ್‌ ವೃತ್ತದ ಬಳಿ ಇಡಲಾಗಿದೆ
ಕಲುಷಿತ ಗಾಳಿಯನ್ನು ಶುದ್ಧೀಕರಿಸುವ ‘ಹೊಂಜು ಗೋಪುರ’ ಯಂತ್ರವನ್ನು ಹಡ್ಸನ್‌ ವೃತ್ತದ ಬಳಿ ಇಡಲಾಗಿದೆ   

ಬೆಂಗಳೂರು: ಮಲಿನ ಗಾಳಿಯನ್ನು ಶುದ್ಧೀಕರಿಸುವ ಹೊಂಜು ಗೋಪುರವನ್ನು (Smog Tower) ’ನೂತನ್‌ ಲ್ಯಾಬ್ಸ್‌ ಕರ್ನಾಟಕ‘ ನವೋದ್ಯಮ ಸಂಸ್ಥೆಯು ನಗರದ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಿದೆ. ಈ ಯಂತ್ರವನ್ನು ಹಡ್ಸನ್‌ ವೃತ್ತದ ಬಳಿ ಪ್ರಾಯೋಗಿಕವಾಗಿ ಅಳವಡಿಸಲಾಗಿದೆ.

‘ನ್ಯಾನೊ ತಂತ್ರಜ್ಞಾನದ ಆಧಾರದಲ್ಲಿ ಕೆಲಸ ಮಾಡುವ ಈ ಹೊಂಜು ಗೋಪುರವು ವಾತಾವರಣದಲ್ಲಿರುವ ಕಲುಷಿತ ಗಾಳಿಯನ್ನು ಹೀರಿಕೊಂಡು ನ್ಯಾನೊ ಕಣಗಳ ಮೂಲಕ ಹಾಯಿಸುತ್ತದೆ. ಪಿ.ಎಂ 2.5ನಿಂದ ಪಿ.ಎಂ 10 ಗಾತ್ರದವರೆಗಿನ ದೂಳಿನ ಕಣಗಳು, ಇಂಗಾಲದ ಮಾನಾಕ್ಸೈಡ್, ಗಂಧಕದ ಡೈಯಾಕ್ಸೈಡ್, ನೈಟ್ರೋಜಿನಸ್ ಆಕ್ಸೈಡ್, ಆವಿಯಾಗುವ ಆರ್ಗಾನಿಕ್ ಸಂಯುಕ್ತಗಳು ಮತ್ತು ಇತರ ಅಪಾಯಕಾರಿ ರಾಸಾಯನಿಕ ಪದಾರ್ಥಗಳನ್ನು ಇದು ಹೀರಿಕೊಳ್ಳುತ್ತದೆ’ ಎಂದು ಈ ಯಂತ್ರವನ್ನು ಅಭಿವೃದ್ಧಿಪಡಿಸಿರುವ ಎಚ್‌.ಎಸ್‌.ನೂತನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಹೊಂಜು ಗೋಪುರವು ಒಟ್ಟು 11 ಹಂತಗಳಲ್ಲಿ ಕಾರ್ಯನಿರ್ವಹಿಸಲಿದೆ. ಸಣ್ಣ ಸಣ್ಣ ದೂಳಿನ ಕಣ, ಗಾಳಿಯಲ್ಲಿರುವ ವಿಷಯುಕ್ತ ಅನಿಲಗಳು ಸೇರಿದಂತೆ ಅಪಾಯಕಾರಿ ಅಂಶಗಳನ್ನು ಹೀರಿಕೊಂಡು ಶುದ್ಧ ಗಾಳಿಯನ್ನು ಹೊರಬಿಡುತ್ತದೆ. ಪ್ರತಿ ನಿಮಿಷಕ್ಕೆ 15 ಸಾವಿರ ಘನ ಅಡಿಗಳಷ್ಟು ಗಾಳಿಯನ್ನು ಶುದ್ಧೀಕರಿಸಬಲ್ಲದು. ಅತ್ಯಂತ ಹೆಚ್ಚು ವಾಯು ಮಾಲಿನ್ಯ ಇರುವ ಕಡೆ ಇದನ್ನು ಸ್ಥಾಪಿಸಿ ಕಲುಷಿತ ಗಾಳಿಯನ್ನು ಶುದ್ಧೀಕರಿಸಬಹುದು’ ಎಂದು ಅವರು ವಿವರಿಸಿದರು.

ADVERTISEMENT

‘ನಾವು ಸದ್ಯಕ್ಕೆ ನಿರ್ಮಿಸಿರುವ ಹೊಂಜು ಗೋಪುರ ಯಂತ್ರವು15 ಅಡಿ ಎತ್ತರ, 6 ಅಡಿ ಸುತ್ತಳತೆ ಹೊಂದಿದೆ. ಈ ಯಂತ್ರದ ಕಾರ್ಯನಿರ್ವಹಣೆಗೆ 11 ಕಿಲೋ ವಾಟ್‌ ಸಾಮರ್ಥ್ಯದ ವಿದ್ಯುತ್‌ ಬೇಕು. ಈ ಯಂತ್ರವನ್ನು ದಿನದಲ್ಲಿ 10 ಗಂಟೆ ಚಲಾವಣೆಯಲ್ಲಿಟ್ಟರೂ ಸಾಕು. ಯಂತ್ರವನ್ನು ಒಂದು ಗಂಟೆ ಚಲಾವಣೆಯಲ್ಲಿಡಲು 11 ಯೂನಿಟ್‌ಗಳಷ್ಟು ವಿದ್ಯುತ್‌ ಬೇಕು. ವಿದ್ಯುತ್‌ ವ್ಯವಸ್ಥೆಯನ್ನು ಬಿಬಿಎಂಪಿಯೇ ಕಲ್ಪಿಸಬೇಕು. ಇದರಲ್ಲಿ ಸಂಗ್ರಹವಾಗುವ ಕಣಗಳನ್ನು ಪ್ರತಿ ವಾರ ತೆರವುಗೊಳಿಸಬೇಕು. ಬಿಬಿಎಂಪಿ ಈ ಯಂತ್ರವನ್ನು ಖರೀದಿಸಿದರೆ ಐದು ವರ್ಷ ನಮ್ಮ ಸಂಸ್ಥೆಯೇ ನಿರ್ವಹಣೆ ಮಾಡಲಿದೆ’ ಎಂದು ನೂತನ್‌ ತಿಳಿಸಿದರು.

ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್‌ ಹಾಗೂ ಪಾಲಿಕೆಯ ಸೂಪರಿಂಟೆಂಡಿಂಗ್‌ ಎಂಜಿನಿಯರ್ ಬಸವರಾಜ್ ಕಬಾಡೆ ಅವರು ಈ ಯಂತ್ರವನ್ನು ಪರಿಶೀಲಿಸಿದರು.

‘ಈ ಹೊಂಜು ಗೋಪುರ ಯಂತ್ರ ಹೇಗೆ ಕಾರ್ಯ ನಿರ್ವಹಿಸುತ್ತಿದೆ ಎಂಬುದನ್ನು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ (ಕೆಎಸ್‌ಪಿಸಿಬಿ) ವಾಯು ಗುಣಮಟ್ಟ ನಿಗಾ ವಾಹನದ ಮೂಲಕ ಪರಿಶೀಲನೆ ನಡೆಸಲಾಗುತ್ತಿದೆ. ಈ ಯಂತ್ರದಿಂದ ವಾಯುವಿನ ಗುಣಮಟ್ಟ ಹೆಚ್ಚಳವಾಗುವುದು ಖಚಿತಪಟ್ಟರೆ 15ನೇ ಹಣಕಾಸು ಆಯೋಗದ ನಿಧಿಯ ಅನುದಾನ ಬಳಸಿ ಇದನ್ನು ಖರೀದಿಸುತ್ತೇವೆ. ನಗರದ ಪ್ರಮುಖ ಜಂಕ್ಷನ್‌ಗಳು ಹಾಗೂ ಹೆಚ್ಚು ಸಂಚಾರ ದಟ್ಟಣೆಯಾಗುವ ಪ್ರದೇಶಗಳಲ್ಲಿ ಅಳವಡಿಸುತ್ತೇವೆ’ ಎಂದು ಮಂಜುನಾಥ ಪ್ರಸಾದ್‌ ತಿಳಿಸಿದರು.

'ನಮ್ಮ ನಗರದಲ್ಲೇ ಬಳಕೆ– ನನ್ನ ಕನಸು’

‘ನಾನು ಐಎಎಸ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದೆ. ನಗರದಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯಕ್ಕೆ ಪರಿಹಾರ ಕಂಡುಹಿಡಿಬೇಕು ಎಂಬ ಆಶಯದಿಂದ ಈ ಯಂತ್ರವನ್ನು ಅಭಿವೃದ್ಧಿಪಡಿಸುವ ಸಂಶೋಧನೆಯಲ್ಲಿ ತೊಡಗಿದೆ. ಈ ಯಂತ್ರಕ್ಕೆ ದೇಶ ವಿದೇಶಗಳಿಂದ ಬೇಡಿಕೆ ಬಂದಿದೆ. ಆದರೆ, ನನ್ನ ಕನಸಿನ ಯೋಜನೆಯ ಮೊದಲ ಪ್ರಯೋಜನ ನಮ್ಮ ನಗರಕ್ಕೆ ಸಿಗಬೇಕೆಂಬುದು ನನ್ನ ಆಶಯ’ ಎಂದು ನೂತನ್‌ ತಿಳಿಸಿದರು.

‘ಸಂಗ್ರಹವಾಗುವ ಕಣಗಳಿಂದ ಗೊಬ್ಬರ’

‘ಈ ಯಂತ್ರವು ಗಾಳಿಯಿಂದ ಹೀರಿಕೊಳ್ಳುವ ಕಣಗಳನ್ನು ಕೃಷಿ ಮಣ್ಣಿಗೆ ಮೈಕ್ರೊ ಪೋಷಕಾಂಶವಾಗಿ ಬಳಸಬಹುದು. ಈ ಕಣಗಳನ್ನು ಒಣಗಿಸಿ ಹೆಂಚು ತಯಾರಿಗೂ ಬಳಸಬಹುದು. ಕಸರಹಿತವಾಗಿ ಕಾರ್ಯನಿರ್ವಹಣೆ ಮಾಡುವ ಯಂತ್ರವಿದು’ ಎಂದು ನೂತನ್‌ ವಿವರಿಸಿದರು.

ಅಂಕಿ ಅಂಶ

15,000 ಘನ ಅಡಿ – ಹೊಂಜು ಗೋಪುರವು ಪ್ರತಿ ನಿಮಿಷಕ್ಕೆ ಶುದ್ಧೀಕರಿಸುವ ಗಾಳಿಯ ಪ್ರಮಾಣ

2,800 ಕೆ.ಜಿ –ಯಂತ್ರದ ತೂಕ

₹ 60 ಲಕ್ಷ – ಹೊಂಜು ಗೋಪುರದ ಅಂದಾಜು ದರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.