ADVERTISEMENT

ಬೆಂಗಳೂರು: ಉರಗ ರಕ್ಷಕರಿಂದ ಅರೆ ಬೆತ್ತಲೆ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2025, 15:44 IST
Last Updated 19 ಆಗಸ್ಟ್ 2025, 15:44 IST
ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವನ್ಯಜೀವಿ ಸಂರಕ್ಷಕರು, ಉರಗ ಸಂರಕ್ಷಕರು, ಹಾವು ಹಿಡಿಯುವವರು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವನ್ಯಜೀವಿ ಸಂರಕ್ಷಕರು, ಉರಗ ಸಂರಕ್ಷಕರು, ಹಾವು ಹಿಡಿಯುವವರು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.    

ಬೆಂಗಳೂರು: ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ಉರಗ ರಕ್ಷಕರು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಮಂಗಳವಾರ ಅರೆಬೆತ್ತಲೆ ಪ್ರತಿಭಟನೆ ನಡೆಸಿ, ತಮ್ಮನ್ನು ಹಾವಾಡಿಗ ಜಾತಿಗೆ ಸೇರಿಸುವ ಮೂಲಕ ಸೌಲಭ್ಯಗಳನ್ನು ನೀಡುವಂತೆ ಆಗ್ರಹಿಸಿದರು.

‘ಉರಗ ರಕ್ಷಕರ ನೆರವಿಗೆ ಬರುವುದಾಗಿ ಏಳು ತಿಂಗಳ ಹಿಂದೆಯೇ ಸರ್ಕಾರ ಹೇಳಿತ್ತು. ಆದರೆ, ಇದುವರೆಗೂ ನಮ್ಮ ಅಹವಾಲುಗಳನ್ನು  ಆಲಿಸಿಲ್ಲ. ಹಾವು ಹಿಡಿದು ಜನರ ಜೀವ ರಕ್ಷಿಸುವವರ ನೆರವಿಗೆ ಬರುವುದು ಯಾವಾಗ?’ ಎಂದು ಅರಣ್ಯ ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ಸಮಾಜದ ಬೆಂಗಳೂರು ನಗರ ಘಟಕದ ಅಧ್ಯಕ್ಷ ದೇವರಾಜು ಪ್ರಶ್ನಿಸಿದರು.

ವನ್ಯಜೀವಿ ಸಂರಕ್ಷಕರು, ಹಾವು ರಕ್ಷಕರು ಕೆಲಸ ಮಾಡುವ ವೇಳೆ ಆಕಸ್ಮಿಕವಾಗಿ ಸಾವನ್ನಪ್ಪಿದಾಗ ಕುಟುಂಬಕ್ಕೆ ಪರಿಹಾರ ನೀಡಬೇಕು. ದಾಳಿಗೆ ಒಳಗಾದಾಗ ವೈದ್ಯಕೀಯ ವೆಚ್ಚ ಭರಿಸಬೇಕು. ಉರಗ ಸಂರಕ್ಷಕರಿಗೆ ಮಾಸಿಕ ಧನ ಅಥವಾ ಗೌರವಧನ ನೀಡುವ ಯೋಜನೆ ರೂಪಿಸಬೇಕು ಎಂದು ಆಗ್ರಹಿಸಿದರು.

ADVERTISEMENT

ಹಾವು ರಕ್ಷಕರಿಗೆ ಅಧಿಕೃತವಾಗಿ ತರಬೇತಿ ನೀಡಿ ಸಲಕರಣೆಗಳನ್ನು ಒದಗಿಸಬೇಕು. ಜೀವ ವಿಮೆ ಹಾಗೂ ಆರೋಗ್ಯ ವಿಮೆ ಮಾಡಿಸಬೇಕು. ಪರವಾನಗಿ ಹಾಗೂ ಗುರುತಿನ ಚೀಟಿಯನ್ನು ಸಂಬಂಧಿಸಿದ ಇಲಾಖೆಯಿಂದ ನೀಡಬೇಕು. ವನ್ಯಜೀವಿ ಸಂರಕ್ಷಕರಿಗೆ ತುರ್ತು ನಿಧಿ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.

ಗುರುತಿನ ಚೀಟಿ ಗೌರವಧನಕ್ಕೆ ಆಗ್ರಹ

ವನ್ಯಜೀವಿ ಸಂರಕ್ಷಕರಿಗೆ ಗುರುತಿನ ಚೀಟಿ ಗೌರವಧನ ಜೀವವಿಮೆ ಸೇರಿ ವಿವಿಧ ಸೌಲಭ್ಯಗಳನ್ನು ರಾಜ್ಯ ಸರ್ಕಾರ ಒದಗಿಸಬೇಕು ಎಂದು ಅರಣ್ಯ ಪರಿಸರ ಮತ್ತು ವನ್ಯಜೀವಿ ಸಂರಕ್ಷಕರ ಹಿತ ರಕ್ಷಣೆ ಮತ್ತು ಕಲ್ಯಾಣ ಸಂಸ್ಥೆ ಆಗ್ರಹಿಸಿದೆ.  ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವನ್ಯಜೀವಿ ಸಂರಕ್ಷಕ ಕೌಶಿಕ್ ‘ವನ್ಯಜೀವಿ ಸಂರಕ್ಷಕರ ಸೇವೆಯನ್ನು ಪರಿಗಣಿಸಿ ರಾಜ್ಯ ಸರ್ಕಾರ ವಿವಿಧ ಸೌಲಭ್ಯ ಒದಗಿಸಬೇಕು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.