
ಬೆಂಗಳೂರು: ‘ಸಮಾಜದಲ್ಲಿ ಎಲ್ಲರೂ ಘನತೆಯಿಂದ ಬದುಕುವಂತಹ ಸಮಾಜ ನಿರ್ಮಾಣದಲ್ಲಿ ಸಮಾಜ ಕಾರ್ಯಕರ್ತರು ಹೆಚ್ಚು ತೊಡಗಿಸಿಕೊಳ್ಳಬೇಕು’ ಎಂದು ಬೆಂಗಳೂರು ನಗರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಲಿಂಗರಾಜ ಗಾಂಧಿ ಕರೆ ನೀಡಿದರು.
ನಗರ ವಿಶ್ವವಿದ್ಯಾಲಯದ ‘ಸ್ನಾತಕೋತ್ತರ ಸಮಾಜಕಾರ್ಯ ವಿಭಾಗ(ಎಂಎಸ್‌ಡಬ್ಲ್ಯು)ದಲ್ಲಿ ಆಯೋಜಿಸಿದ್ದ ‘ವಿಶ್ವ ಸಮಾಜಕಾರ್ಯ ದಿನ’ದಲ್ಲಿ ಅವರು ಮಾತನಾಡಿದರು.
ವಿಶ್ವವಿದ್ಯಾಲಯದ ಸಮಾಜಕಾರ್ಯ ವಿಭಾಗದ ವಿದ್ಯಾರ್ಥಿಗಳು ಜ್ಞಾನ ಹಾಗೂ ಕೌಶಲ ಹೆಚ್ಚಿಸಿಕೊಂಡು ಸಮಾಜದ ಅಭಿವೃದ್ಧಿಗೆ ಸಮರ್ಪಿಸಿಕೊಳ್ಳಬೇಕು ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಗರ ಜಿಲ್ಲೆಯ ಉಪ ನಿರ್ದೇಶಕ ಸಿದ್ದರಾಮಣ್ಣ ಅವರು ಮಾತನಾಡಿ, ‘ವಿಶ್ವ ಸಮಾಜಕಾರ್ಯ ದಿನದಂದು ವಿದ್ಯಾರ್ಥಿಗಳು ತಮ್ಮನ್ನು ತಾವು ಸಮರ್ಥ ಸಮಾಜ ಕಾರ್ಯಕರ್ತರನ್ನಾಗಿ ರೂಪಿಸಿಕೊಳ್ಳಲು ಪಣತೊಡಬೇಕು. ಸಮಾಜ ಕಾರ್ಯ ಪದವಿ ಪಡೆದ ವಿದ್ಯಾರ್ಥಿಗಳಿಗೆ ವಿಫಲ ಉದ್ಯೋಗ ಅವಕಾಶವಿದ್ದು, ಸಮಾಜ ನಿರ್ಮಾಣದ ಆ ಮೂಲಕ ರಾಷ್ಟ್ರ ನಿರ್ಮಾಣದ ಜವಾಬ್ದಾರಿ ನಿಭಾಯಿಸಲು ಸಜ್ಜಾಗಬೇಕು’ ಎಂದು ಕರೆ ನೀಡಿದರು.
ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಸದಸ್ಯ ಕೆ.ಟಿ. ತಿಪ್ಪೇಸ್ವಾಮಿ, ರಿತಿಕ ಸಿನ್ಹಾ, ವೆಂಕಟೇಶ್ ಮೂರ್ತಿ, ಸುಜಾತ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.