ಬೆಂಗಳೂರು: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಲು ದೂರದ ವಾರ್ಡ್‌ಗಳಿಗೆ ಶಿಕ್ಷಕರನ್ನು ನಿಯೋಜಿಸಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ದೂರಿದ್ದಾರೆ.
ಈ ಬಗ್ಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರಿಗೆ ಅವರು ಪತ್ರ ಬರೆದಿದ್ದಾರೆ.
‘ಸಮೀಕ್ಷಕರಾಗಿರುವ ಶಿಕ್ಷಕರಿಗೆ ತರಬೇತಿ ನೀಡುವ ಸಂದರ್ಭದಲ್ಲಿ ಶಾಲೆ ಮತ್ತು ನಿವಾಸಕ್ಕೆ ಹತ್ತಿರ ಇರುವ ಹತ್ತು ವಾರ್ಡ್‌ಗಳನ್ನು ಆಯ್ಕೆ ಮಾಡಲು ಅವಕಾಶ ನೀಡಲಾಗಿತ್ತು. ಆದರೆ, ಈ ಹತ್ತು ವಾರ್ಡ್‌ಗಳಲ್ಲಿ ಯಾವುದಾದರೂ ಒಂದು ವಾರ್ಡ್ ಅನ್ನು ನೀಡುವ ಬದಲು 25 ಕಿ.ಮೀ ನಿಂದ 30 ಕಿ.ಮೀ ದೂರದಲ್ಲಿ ಸಮೀಕ್ಷೆ ನಡೆಸಲು ಆದೇಶ ಬಂದಿದೆ’ ಎಂದು ಶಿಕ್ಷಕರು ಆರೋಪಿಸಿ ಮಲ್ಲೇಶ್ವರದಲ್ಲಿರುವ ನಗರ ಪಾಲಿಕೆ ಜಂಟಿ ಆಯುಕ್ತರ ಕಚೇರಿ ಆವರಣದಲ್ಲಿ ಪ್ರತಿಭಟಿಸಿದರು.
‘ತರಬೇತಿ ಸಂದರ್ಭದಲ್ಲಿ ಆಯ್ಕೆ ಮಾಡಿಕೊಂಡಿರುವ ವಾರ್ಡ್‌ಗಳಿಗೇ ಸಮೀಕ್ಷಕರನ್ನಾಗಿ ನೇಮಿಸಬೇಕು. ಹೃದಯ ಸಂಬಂಧಿ ಕಾಯಿಲೆ, ಕಿಡ್ನಿ, ಕ್ಯಾನ್ಸರ್ ಇನ್ನಿತರ ದೀರ್ಘಕಾಲದ ಕಾಯಿಲೆ ಇರುವವರಿಗೆ, ಅಂಗವಿಕಲರಿಗೆ ಸಮೀಕ್ಷೆಯಿಂದ ರಿಯಾಯಿತಿ ನೀಡಬೇಕು. ಎರಡು ತಿಂಗಳ ಒಳಗೆ ನಿವೃತ್ತರಾಗಲಿರುವವರನ್ನು ಸಮೀಕ್ಷೆಗೆ ನಿಯೋಜಿಸಬಾರದು’ ಎಂದು ಆಗ್ರಹಿಸಿದರು.
‘ನನ್ನ ಮನೆ ಥಣಿಸಂದ್ರದಲ್ಲಿದೆ. ಸುಮಾರು 35 ಕಿ.ಮೀ. ದೂರದಲ್ಲಿರುವ ಅರೆಕೆರೆಯಲ್ಲಿ ಸಮೀಕ್ಷೆ ನಡೆಸಲು ಆದೇಶ ಬಂದಿದೆ. ಇದೇ ರೀತಿ ಅನೇಕರಿಗೆ ಆದೇಶಗಳು ಬಂದಿವೆ. ನಾವು ಸಮೀಕ್ಷೆ ನಡೆಸುವ ಸ್ಥಳಕ್ಕೆ ಹೋಗಿ ಬರುವುದಕ್ಕೆ ಸಂಚಾರ ದಟ್ಟಣೆಯ ನಡುವೆ 4 ತಾಸು ಬೇಕಾಗುತ್ತದೆ. ಹೀಗಾದರೆ ಸಮೀಕ್ಷೆ ನಡೆಸುವುದು ಹೇಗೆ’ ಎಂದು ಶಿಕ್ಷಕ ಉಮೇಶ್ ಅಸಹಾಯಕತೆ ತೋಡಿಕೊಂಡರು.
‘ಒಂದೆರಡು ದಿನದಲ್ಲಿ ಸಮಸ್ಯೆಗೆ ಪರಿಹಾರ’
‘ಜಿಬಿಎ ವ್ಯಾಪ್ತಿಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಶನಿವಾರದಿಂದ ಆರಂಭವಾಗಿದ್ದು ಮೊಬೈಲ್– ಆ್ಯಪ್ ಕಾರ್ಯನಿರ್ವಹಣೆಯಲ್ಲಿ ಕೆಲವು ಸಮಸ್ಯೆಗಳಾಗಿವೆ. ಇವುಗಳನ್ನು ನಾವು ಮೊದಲೇ ನಿರೀಕ್ಷಿಸಿದ್ದು ಎಲ್ಲದ್ದಕ್ಕೂ ಒಂದೆರಡು ದಿನಗಳಲ್ಲಿ ಪರಿಹಾರ ಕಲ್ಪಿಸಲಾಗುವುದು’ ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ತಿಳಿಸಿದರು. ‘ಅನಾರೋಗ್ಯ ಅನಿವಾರ್ಯ ಕಾರಣಗಳಿದ್ದವರಿಗೆ ಅಂಗವಿಕಲರಿಗೆ ಸಮೀಕ್ಷೆಯಿಂದ ರಿಯಾಯಿತಿ ನೀಡಲಾಗಿದೆ. ಸುಮಾರು 875 ಮಂದಿಗೆ ರಿಯಾಯಿತಿ ನೀಡಿ ಆದೇಶಿಸಲಾಗಿದೆ. ಒಂದಷ್ಟು ಸಮಸ್ಯೆ ಇರಬಹುದು. ಕೆಲವರಿಗೆ ಆದೇಶ ತಲುಪದೇ ಇರಬಹುದು. ಮಾನವೀಯತೆ ದೃಷ್ಟಿಯಿಂದ ಸ್ಪಷ್ಟ ಕಾರಣಗಳಿದ್ದರೆ ಅಂತಹವರಿಗೆ ನಾವು ಸಮೀಕ್ಷೆಯಿಂದ ರಿಯಾಯಿತಿ ನೀಡಿದ್ದೇವೆ’ ಎಂದು ಅವರು ಹೇಳಿದರು. ‘ಯಾವುದೇ ಇಲಾಖೆಯವರನ್ನು ಸಮೀಕ್ಷೆಯಲ್ಲಿ ತೊಡಗಿಸಿಕೊಳ್ಳಬಹುದು ಎಂದು ಮುಖ್ಯಮಂತ್ರಿಯವರು ಸೂಚಿಸಿದ್ದಾರೆ. ಹೀಗಾಗಿ ವೈದ್ಯ ಆಸ್ಪತ್ರೆ ಸೇರಿದಂತೆ ಯಾವುದೇ ಇಲಾಖೆಯಲ್ಲಿ ಕನಿಷ್ಠ ಸಿಬ್ಬಂದಿ ಇರುವಂತೆ ನೋಡಿಕೊಂಡೇ ಸಮೀಕ್ಷಕರನ್ನು ಗುರುತಿಸಿ ಆದೇಶಿಸಲಾಗಿದೆ’ ಎಂದರು.
ಅವೈಜ್ಞಾನಿಕ ನೇಮಕ: ಪುಟ್ಟಣ್ಣ
ಸಮೀಕ್ಷೆಗೆ ಶಿಕ್ಷಕರನ್ನು ಯಾವುದೋ ದೂರದ ಊರಿಗೆ ನೇಮಕ ಮಾಡುವ ಮೂಲಕ ಪಾಲಿಕೆ ಅಧಿಕಾರಿಗಳು ಅವೈಜ್ಞಾನಿಕವಾಗಿ ವರ್ತಿಸಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಆರೋಪಿಸಿದ್ದಾರೆ. ಶಿಕ್ಷಕರ ವಾಸ ಇರುವ ವಾರ್ಡ್ ಕೆಲಸ ಮಾಡುವ ವಾರ್ಡ್ ಅಥವಾ ಸುತ್ತಲಿನ 10 ವಾರ್ಡ್‌ಗಳ ವ್ಯಾಪ್ತಿಯಲ್ಲಿಯೇ ಸಮೀಕ್ಷೆ ಮಾಡಲು ಆದೇಶಿಸಬೇಕು. ಈಗ ಹೊರಡಿಸಿರುವ ಅವೈಜ್ಞಾನಿಕ ಆದೇಶವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.
‘ಅಂಗವಿಕಲರು ಭಾಗವಹಿಸಲ್ಲ’
ಅಂಗವಿಕಲರನ್ನು ಬೆಂಗಳೂರು ನಗರ ಜಿಲ್ಲೆ ಹೊರತುಪಡಿಸಿ ಬೇರೆ ಎಲ್ಲಿಯೂ ಸಮೀಕ್ಷಕರಾಗಿ ಬಳಕೆ ಮಾಡಿಕೊಂಡಿಲ್ಲ. ಇಲ್ಲಿ 350 ಅಂಗವಿಕಲರನ್ನು ಸಮೀಕ್ಷೆಗೆ ನೇಮಿಸಿಕೊಂಡಿದ್ದಾರೆ. ಅಂಗವಿಕಲರನ್ನು ಕೈಬಿಡುವಂತೆ ಜಿಬಿಎ ಮುಖ್ಯ ಆಯುಕ್ತರಿಗೆ ಮನವಿ ಸಲ್ಲಿಸಿದ್ದೇವೆ. ನಾವು ಸಮೀಕ್ಷೆಯಲ್ಲಿ ಪಾಲ್ಗೊಳ್ಳುವುದಿಲ್ಲ. ವಿನಾಯತಿ ನೀಡದಿದ್ದರೆ ನ್ಯಾಯಾಲಯದ ಮೊರೆ ಹೋಗುತ್ತೇವೆ ಎಂದು ಅಂಗವಿಕಲ ಸರ್ಕಾರಿ ನೌಕರರ ಅಧ್ಯಕ್ಷ ಬೀರಪ್ಪ ಹಂಡಿಗಿ ಹೇಳಿಕೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.