
ಸಮ್ಮೇಳನದಲ್ಲಿ ಸಾಹಿತ್ಯಾಸಕ್ತರು ಪುಸ್ತಕಗಳನ್ನು ಖರೀದಿಸಿದರು
ಪ್ರಜಾವಾಣಿ ಚಿತ್ರ
ಬೆಂಗಳೂರು: ‘ಚಾಗದ ಭೋಗದಕ್ಕರದ ಗೇಯದ ಗೊಟ್ಟಿಯಲಂಪಿನಿಂಪುಗಳ್ಗಾಗರವಾದ ಮಾನಸರೆ...’ ಎಂಬ ಪಂಪನ ‘ವಿಕ್ರಮಾರ್ಜುನ ವಿಜಯ’ ಕಾವ್ಯದ ಸಾಲುಗಳನ್ನು ನಿವೃತ್ತ ಕನ್ನಡ ಪ್ರಾಧ್ಯಾಪಕಿ ಎನ್.ಆರ್. ಲಲಿತಾಂಬ ಅವರು ವಾಚಿಸಿದರೆ, ಆ ಸಾಲುಗಳನ್ನು ರಾಗಬದ್ಧವಾಗಿ ಹಾಡಿದವರು ಎಂ.ಡಿ. ಪಲ್ಲವಿ.
ಹೀಗೆ ಹಳಗನ್ನಡ, ನಡುಗನ್ನಡ ಹಾಗೂ ಹೊಸಗನ್ನಡ ಕಾವ್ಯಗಳಲ್ಲಿನ ಆಯ್ದ ಸಾಲುಗಳ ವಾಚನಕ್ಕೆ ಕಿವಿಯಾದ ಪ್ರೇಕ್ಷಕರು, ಗಾಯನಕ್ಕೆ ತಲೆದೂಗಿದರು. ಇದಕ್ಕೆ ಕಾರಣ ವಾಚನ–ಗಾಯನದ ಜುಗಲ್‌ಬಂದಿ. ಸಮಾಜಮುಖಿ ಸಾಹಿತ್ಯ ಸಮ್ಮೇಳನದ ಮುಖ್ಯವೇದಿಕೆಯಲ್ಲಿ ಶನಿವಾರ ನಡೆದ ‘ಹಳಗನ್ನಡ ಸಾಹಿತ್ಯ–ಹಿಂದಣ ಹೆಜ್ಜೆಯನರಿತಲ್ಲದೆ’ ಗೋಷ್ಠಿಯು ಪ್ರೇಕ್ಷಕರನ್ನು ತನ್ನತ್ತ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಯಿತು. ಹಳಗನ್ನಡದ ಅಗತ್ಯ, ಮಹತ್ವ ಹಾಗೂ ಉಚ್ಚಾರಣೆಯ ವೈಶಿಷ್ಟ್ಯವನ್ನೂ ಸಾರಿತು.
ರನ್ನನ ‘ಗದಾಯುದ್ಧ’ ಕಾವ್ಯದಲ್ಲಿ ಬರುವ ದುರ್ಯೋಧನನ ಅವಸಾನದ ಪ್ರಸಂಗವನ್ನು ಪ್ರಾಧ್ಯಾಪಕ ಶಾಂತರಾಜು ವಾಚಿಸಿದರು. ಇದನ್ನು ಗಮಕ ರೂಪದಲ್ಲಿ ಪ್ರಸ್ತುಪಡಿಸಿದವರು ಪ್ರಸಿದ್ಧ ಗಮಕಿ ಗಂಗಮ್ಮ ಕೇಶವಮೂರ್ತಿ. ಧ್ವನಿಯಲ್ಲಿನ ಏರಿಳಿತ ಸನ್ನಿವೇಶವನ್ನು ಕಟ್ಟಿಕೊಡುವಂತಿತ್ತು. ನಿವೃತ್ತ ಪ್ರಾಧ್ಯಾಪಕ ಚಂದ್ರಶೇಖರ ನಾದೂರು ಅವರು ರಾಘವಾಂಕನ ‘ಹರಿಶ್ಚಂದ್ರ’ ಕಾವ್ಯದಲ್ಲಿ ಬರುವ ಚಂದ್ರಮತಿ ಪ್ರಲಾಪವನ್ನು ವಾಚಿಸಿದರು. ಕರ್ನಾಟಕ ಶಾಸ್ತೀಯ ಸಂಗೀತ ಗಾಯಕಿ ಶ್ಯಾಮಲಾ ಪ್ರಕಾಶ್ ಅವರು ಗಮಕ ರೂಪದಲ್ಲಿ ಹಾಡಿದರು. ಕುವೆಂಪು ಅವರ ‘ಶ್ರೀ ರಾಮಾಯಣ ದರ್ಶನಂ’ ಕಾವ್ಯದ ಸಾಲುಗಳನ್ನು ಕಥಾ ಕೀರ್ತನಕಾರ ಲಕ್ಷ್ಮಣದಾಸ್ ವಾಚಿಸಿದರೆ, ಗಮಕಿ ಎಂ.ಆರ್. ಸತ್ಯನಾರಾಯಣ ಅವರು ಗಮಕ ಗಾಯನ ಪ್ರಸ್ತುತಪಡಿಸಿದರು.
ಈ ಗೋಷ್ಠಿಯಲ್ಲಿ ಆಶಯ ನುಡಿಗಳನ್ನಾಡಿದ ಸಾಹಿತಿ ಹಂಪ ನಾಗರಾಜಯ್ಯ, ‘ಹಳಗನ್ನಡದಲ್ಲಿ ಇತಿಹಾಸ, ಭಾಷೆಯ ಸೊಬಗು, ಛಂದಸ್ಸು ಎಲ್ಲವೂ ಇದೆ. ಹಳಗನ್ನಡ ಕವಿಗಳು ನಮ್ಮಗೆ ದೊಡ್ಡ ಆಸ್ತಿಯನ್ನು ಬಿಟ್ಟು ಹೋಗಿದ್ದಾರೆ. ಆದರೆ, ಇತ್ತೀಚೆಗೆ ಹಳಗನ್ನಡಕ್ಕೆ ಪ್ರಾಧಾನ್ಯ ಕಡಿಮೆ ಆಗುತ್ತಿದೆ’ ಎಂದರು.
ಸಾಹಿತ್ಯದ ಚಿಂತನ ಮಂಥನ
ಸಮಾಜಮುಖಿ ಪತ್ರಿಕೆ ವತಿಯಿಂದ ಅರಮನೆ ರಸ್ತೆಯಲ್ಲಿರುವ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಆವರಣದಲ್ಲಿ ಹಮ್ಮಿಕೊಂಡಿದ್ದ ‘ಸಮಾಜಮುಖಿ ಸಾಹಿತ್ಯ ಸಮ್ಮೇಳನ’ವು ಕನ್ನಡ ಸಾಹಿತ್ಯದ ಚಿಂತನ–ಮಂಥನಕ್ಕೆ ವೇದಿಕೆಯಾಯಿತು. ಮೊದಲ ದಿನವಾದ ಶನಿವಾರ ಐದು ವೇದಿಕೆಗಳಲ್ಲಿ ನಡೆದ ವಿವಿಧ ಗೋಷ್ಠಿಗಳು ಕನ್ನಡ ಸಾಹಿತ್ಯದ ಸಮಕಾಲೀನ ಹಾಗೂ ಭವಿಷ್ಯದ ನೆಲೆ–ಬೆಲೆಗಳನ್ನು ಗುರುತಿಸಲು ಸಹಕಾರಿಯಾಯಿತು. ಚರ್ಚಾ ಗೋಷ್ಠಿಗಳಲ್ಲಿ ವಿಷಯ ವೈವಿಧ್ಯ ಇದ್ದ ಕಾರಣ ಉತ್ಸವದಲ್ಲಿ ಪಾಲ್ಗೊಂಡಿದ್ದವರು ತಮ್ಮಿಷ್ಟದ ಗೋಷ್ಠಿಗಳನ್ನು ಆಯ್ಕೆ ಮಾಡಿಕೊಂಡು ವಿಷಯ ತಜ್ಞರ ಮಾತುಗಳನ್ನು ಆಲಿಸಿದರು.
ಪುಸ್ತಕ ಪ್ರದರ್ಶನ–ಮಾರಾಟ
ಸಮ್ಮೇಳನದಲ್ಲಿ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಹಮ್ಮಿಕೊಳ್ಳಲಾಗಿತ್ತು. ಪ್ರಮುಖ ಪ್ರಕಾಶನ ಸಂಸ್ಥೆಗಳ 16 ಮಳಿಗೆಗಳು ಇದ್ದವು. ಸಾಹಿತ್ಯಾಸಕ್ತರು ಪುಸ್ತಕಗಳನ್ನು ಖರೀದಿಸುವ ಜತೆಗೆ ಸಾಹಿತಿಗಳ ಜತೆಗೆ ಫೋಟೊಗಳನ್ನೂ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು. ಬೆಳಿಗ್ಗೆ ಹಮ್ಮಿಕೊಂಡಿದ್ದ ಸಮಾಜಮುಖಿ ಬಯಲು ಚಿತ್ರಕಲಾ ಶಿಬಿರದಲ್ಲಿ ನಾಡಿನ ಪ್ರಮುಖ ಕಲಾವಿದರು ಕಲಾಕೃತಿಗಳನ್ನು ರಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.