ADVERTISEMENT

ಬೆಂಗಳೂರು | ವಿಡಿಯೊ ಲೈಕ್ ಕೆಲಸ: ₹ 7.32 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 15 ಮೇ 2023, 16:13 IST
Last Updated 15 ಮೇ 2023, 16:13 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‌ಲೋಡ್ ಮಾಡುವ ವಿಡಿಯೊಗಳನ್ನು ಲೈಕ್ ಹಾಗೂ ಶೇರ್ ಮಾಡಿದರೆ ಹಣ ನೀಡುವುದಾಗಿ ಹೇಳಿ ಶುಲ್ಕದ ಹೆಸರಿನಲ್ಲಿ ₹ 7.32 ಲಕ್ಷ ಪಡೆದು ವಂಚಿಸಲಾಗಿದೆ.

‘ಹುಳಿಮಾವು ನಿವಾಸಿಯಾಗಿರುವ 25 ವರ್ಷದ ಯುವಕ ವಂಚನೆ ಬಗ್ಗೆ ದೂರು ನೀಡಿದ್ದಾರೆ. ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಆಗ್ನೇಯ ವಿಭಾಗದ ಸೈಬರ್ ಕ್ರೈಂ ಠಾಣೆ ಪೊಲೀಸರು ಹೇಳಿದರು.

‘ದೂರುದಾರರ ಮೊಬೈಲ್‌ಗೆ ಸಂದೇಶ ಕಳುಹಿಸಿದ್ದ ಆರೋಪಿಗಳು, ‘ನಾನು ವಿಡಿಯೊ ಮಾರುಕಟ್ಟೆ ಕಂಪನಿ ಪ್ರತಿನಿಧಿ. ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‌ಲೋಡ್ ಮಾಡುವ ನಮ್ಮ ವಿಡಿಯೊಗಳನ್ನು ಲೈಕ್ ಹಾಗೂ ಶೇರ್ ಮಾಡಿದರೆ, ಪ್ರತಿ ವಿಡಿಯೊಗೆ ₹ 150 ನೀಡಲಾಗುವುದು’ ಎಂದಿದ್ದರು. ಅದನ್ನು ನಂಬಿದ್ದ ದೂರುದಾರ, ಆರೋಪಿಗಳು ಕಳುಹಿಸಿದ್ದ ವಿಡಿಯೊ ಲೈಕ್ ಹಾಗೂ ಶೇರ್ ಮಾಡಿದ್ದರು.’

ADVERTISEMENT

‘ದೂರುದಾರರ ಖಾತೆಗೆ ಆರಂಭದಲ್ಲಿ ₹ 150 ಜಮೆ ಮಾಡಲಾಗಿತ್ತು. ಇದಾದ ನಂತರ, ಆರೋಪಿಗಳು ಪುನಃ ವಿಡಿಯೊಗಳ ಲಿಂಕ್ ಕಳುಹಿಸಿದ್ದರು. ಅವುಗಳನ್ನೂ ದೂರುದಾರ ಲೈಕ್ ಹಾಗೂ ಶೇರ್ ಮಾಡಿದ್ದರು. ಬಾಕಿ ಹಣ ಜಮೆ ಮಾಡಲು ಕೆಲ ಶುಲ್ಕ ಪಾವತಿಸಬೇಕೆಂದು ಆರೋಪಿಗಳು ಹೇಳಿದ್ದರು. ಅದನ್ನು ನಂಬಿದ್ದ ದೂರುದಾರ, ಹಂತ ಹಂತವಾಗಿ ₹ 7.32 ಲಕ್ಷ ವರ್ಗಾಯಿಸಿದ್ದರು. ಇದಾದ ನಂತರ ಆರೋಪಿಗಳು ನಾಪತ್ತೆಯಾಗಿದ್ದಾರೆ’ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.