ಬೆಂಗಳೂರು: ‘ರೊಟೇರಿಯನ್‌ಗಳು, ಉದ್ಯಮಿಗಳು ತಮ್ಮ ದುಡಿಮೆಯ ಹಣದಲ್ಲಿ ಇಂತಿಷ್ಟನ್ನು ಸಮಾಜಮುಖಿ ಸೇವೆಗೆ ವಿನಿಯೋಗಿಸುತ್ತಿರುವುದು ಶ್ಲಾಘನೀಯ’ ಎಂದು ಸಂಸದ ಡಾ.ಸಿ.ಎನ್.ಮಂಜುನಾಥ್ ಪ್ರಶಂಸೆ ವ್ಯಕ್ತಪಡಿಸಿದರು.
ಬೆಂಗಳೂರು ಮ್ಯಾನೇಜ್‌ಮೆಂಟ್ ಅಸೋಸಿಯೇಷನ್ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಮಾಜ ಸುಧಾರಣೆ ಸೇವೆಯಲ್ಲಿ ತೊಡಗಿಸಿಕೊಂಡಿರುವ ಕರ್ನಾಟಕದ ಸಾಧಕರನ್ನು ಅಭಿನಂದಿಸಿ ಅವರು ಮಾತನಾಡಿದರು.
‘ಬೆಂಗಳೂರು ಉದ್ದಿಮೆದಾರರು ಸರ್ಕಾರಕ್ಕೆ ಜಿಎಸ್‌ಟಿ ಮೂಲಕ ಪ್ರತಿ ತಿಂಗಳು ₹2 ಲಕ್ಷ ಕೋಟಿ ಹಣವನ್ನು ಪಾವತಿಸುತ್ತಿದ್ದಾರೆ. ರಕ್ಷಣಾ ಉಪಕರಣಗಳ ಉತ್ಪಾದನೆಯಲ್ಲಿ ಬೆಂಗಳೂರು ಮುಂಚೂಣಿಯಲ್ಲಿದೆ’ ಎಂದು ಶ್ಲಾಘಿಸಿದರು.
ಸ್ಕಿಲ್ ಪ್ರಾಜೆಕ್ಟ್ ಟಾಟಾ ಸಂಸ್ಥೆಯ ಮಾರ್ಗದರ್ಶಕ ಎಚ್.ಎನ್.ಶ್ರೀನಿವಾಸ್ ಮಾತನಾಡಿ, ‘ಸತತ ಪರಿಶ್ರಮ, ಸೇವಾ ಮನೋಭಾವದ ಗುಣವಿದ್ದಾಗ ಪ್ರಶಸ್ತಿ, ಬಿರುದು, ಅಭಿನಂದನೆಗಳು ಅರಸಿ ಬರುತ್ತವೆ. ಸೇವಾ ಮನೋಭಾವವಿರುವ ಉದ್ಯಮಿಗಳು ಶ್ರೇಷ್ಠ ಉದ್ಯಮಿಯಾಗುತ್ತಾರೆ’ ಎಂದು ಹೇಳಿದರು.
ಅಂತರರಾಷ್ಟ್ರೀಯ ರೋಟರಿ ನಿರ್ದೇಶಕ ವಿ.ಶ್ರೀನಿವಾಸಮೂರ್ತಿ ಮಾತನಾಡಿ, ‘ಬೆಂಗಳೂರು ಮ್ಯಾನೇಜ್‌ಮೆಂಟ್ ಅಸೋಸಿಯೇಷನ್ 67 ವರ್ಷಗಳಿಂದ ಸಾಮಾಜಿಕ, ಶಿಕ್ಷಣ, ಆರೋಗ್ಯ, ಉದ್ಯೋಗ ಕ್ಷೇತ್ರದ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸುತ್ತಾ ಬಂದಿದೆ. ನಿರುದ್ಯೋಗಿಗಳಿಗೆ ತರಬೇತಿ ನೀಡುವ ಮೂಲಕ ಸಾವಿರಾರು ಜನರಿಗೆ ನೆರವಾಗಿದೆ’ ಎಂದರು.
ರೋಟರಿ ನಿರ್ದೇಶಕ ಕೆ.ಪಿ.ನಾಗೇಶ್, ‘ಐಟಿಐ, ಡಿಪ್ಲೊಮಾ ಪೂರ್ಣಗೊಳಿಸಿದ ಗ್ರಾಮೀಣ ಪ್ರದೇಶದ ನಿರುದ್ಯೋಗಿ ಯುವಕ–ಯುವತಿಯರಿಗೆ ಸಂಸ್ಥೆಯು ಪ್ರತಿ ವರ್ಷ ಉಚಿತವಾಗಿ ಎರಡು ತಿಂಗಳು ಕೌಶಲ ತರಬೇತಿ ನೀಡುತ್ತಿದೆ. ತರಬೇತಿ ಪೂರ್ಣಗೊಳಿಸಿದವರಿಗೆ ಕಾರ್ಖಾನೆಗಳಲ್ಲಿ ಉದ್ಯೋಗ ದೊರಕಿಸಿಕೊಡಲು ಪ್ರಯತ್ನಿಸಲಾಗುತ್ತಿದೆ. ಅನೇಕ ಕಂಪನಿಗಳು ಉದ್ಯೋಗ ನೀಡಲು ಮುಂದೆ ಬರುತ್ತಿವೆ’ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಎಸ್.ನಾಗೇಂದ್ರ, ಶಿವ್ ಮಾತನ್, ಶೀತಲ್ ಕುಮಾರ್, ರೋಟರಿ ಜಿಲ್ಲಾ ಪ್ರಚಾರ ಸಮಿತಿಯ ನಿರ್ದೇಶಕ ಕೆ.ಟಿ.ನಿರಂಜನ್ ಮತ್ತಿತರರು ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.