ADVERTISEMENT

ಅರೆಕೆರೆ: ಸ್ವಯಂಚಾಲಿತ ಸೋಲಾರ್ ವಿದ್ಯುತ್‌ ಪಂಪ್‌ಗೆ ಚಾಲನೆ

ವಿದ್ಯುತ್ ವೆಚ್ಚ, ಸಮಯ, ಪರಿಶ್ರಮ ಉಳಿತಾಯ: ಎಸ್.ಆರ್. ವಿಶ್ವನಾಥ್

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2025, 15:48 IST
Last Updated 1 ಏಪ್ರಿಲ್ 2025, 15:48 IST
ಸ್ವಯಂಚಾಲಿತ ಸೋಲಾರ್‌ ಪವರ್‌ಪಂಪ್‌ ಘಟಕಕ್ಕೆ ಶಾಸಕ ಎಸ್‌.ಆರ್‌.ವಿಶ್ವನಾಥ್‌ ಚಾಲನೆ ನೀಡಿದರು.
ಸ್ವಯಂಚಾಲಿತ ಸೋಲಾರ್‌ ಪವರ್‌ಪಂಪ್‌ ಘಟಕಕ್ಕೆ ಶಾಸಕ ಎಸ್‌.ಆರ್‌.ವಿಶ್ವನಾಥ್‌ ಚಾಲನೆ ನೀಡಿದರು.   

ಯಲಹಂಕ: ವಿದ್ಯುತ್‌ ವೆಚ್ಚ, ಸಮಯ ಹಾಗೂ ಪರಿಶ್ರಮವನ್ನು ಕಡಿಮೆಮಾಡುವ ನಿಟ್ಟಿನಲ್ಲಿ ಅರಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ(ಸುರಧೇನುಪುರ ಗೇಟ್‌) ಬಸವಲಿಂಗಪ್ಪ ಬಡಾವಣೆಯಲ್ಲಿ ನೂತನವಾಗಿ ಸ್ಥಾಪಿಸಿರುವ ಸ್ವಯಂ ಚಾಲಿತ ಸೋಲಾರ್‌ ಪವರ್‌ ಪಂಪ್‌ ಘಟಕವನ್ನು ಲೋಕಾರ್ಪಣೆಗೊಳಿಸಲಾಯಿತು.

ಕೊಳವೆಬಾವಿಗಳಿಂದ ನೀರನ್ನು ಮೇಲೆತ್ತಿ ಓವರ್‌ಹೆಡ್‌ ಟ್ಯಾಂಕ್‌ಗೆ ಸರಬರಾಜು ಮಾಡಿ, ಮನೆ ಮನೆಗೆ ನೀರು ಪೂರೈಕೆ ಮಾಡಲು ಈ ಸೋಲಾರ್‌ ಪವರ್‌ ಪಂಪ್‌ ಅಳವಡಿಸಲಾಗಿದೆ. ಈ ಘಟಕ ನಿರ್ಮಾಣದಿಂದ ಪ್ರತಿನಿತ್ಯ ಪಂಚಾಯಿತಿಗೆ ಬರುತ್ತಿದ್ದ ₹8 ಸಾವಿರ ವಿದ್ಯುತ್‌ ಬಿಲ್‌ನ ಹೊರೆ ಕಡಿತವಾಗಲಿದೆ.

ಈ ಹಿಂದೆ ವಿದ್ಯುತ್‌ನಿಂದ ಒಂದು ಲಕ್ಷ ಲೀಟರ್‌ ಸಾಮರ್ಥ್ಯದ ಓವರ್‌ಹೆಡ್‌ ಟ್ಯಾಂಕ್‌ ತುಂಬಲು ಎಂಟು ಗಂಟೆ ಸಮಯ ತೆಗೆದುಕೊಳ್ಳುತ್ತಿತ್ತು. ಸೋಲಾರ್‌ ಪಂಪ್‌ನಿಂದ ಕೇವಲ ಮೂರು ಗಂಟೆಗಳಲ್ಲಿ ಟ್ಯಾಂಕ್‌ ತುಂಬಲಿದೆ. ಹೀಗಾಗಿ ಸಮಯದ ಜೊತೆಗೆ ಶ್ರಮ ಮತ್ತು ಹಣವೂ ಉಳಿತಾಯವಾಗಲಿದೆ.

ADVERTISEMENT

ಈ ಘಟಕಕ್ಕೆ ಸೆನ್ಸಾರ್‌ ಅಳವಡಿಸಲಾಗಿದೆ. ಇದರಿಂದ ಟ್ಯಾಂಕ್‌ನಲ್ಲಿ ನೀರು ಕಡಿಮೆಯಾದಂತೆ, ಸ್ವಯಂ ಚಾಲನೆಯಾಗುತ್ತದೆ. ಇದರಿಂದ ಗ್ರಾಮಗಳಿಗೆ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗುವುದಿಲ್ಲ.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಜಲಜೀವನ್‌ ಮಿಷನ್‌, ಅಕ್ವಾ ಶೈನ್‌ ಟೆಕ್ನಾಲಜೀಸ್‌ ಫ್ರೈ.ಲಿ., ಸಂಸ್ಥೆ ಹಾಗೂ ಅಮೆರಿಕ ಮೂಲದ ಎನ್‌ಜಿಒ ಸಂಸ್ಥೆಯ ಸಹಭಾಗಿತ್ವದಲ್ಲಿ ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ ಈ ವ್ಯವಸ್ಥೆ ಅಳವಡಿಸಲಾಗಿದೆ.

ಘಟಕಕ್ಕೆ ಚಾಲನೆನೀಡಿ ಮಾತನಾಡಿದ ಶಾಸಕ ಎಸ್‌.ಆರ್‌.ವಿಶ್ವನಾಥ್‌, ‘ಸೌರಶಕ್ತಿ ಆಧಾರಿತ ಘಟಕದಿಂದಾಗಿ ನಿರಂತರವಾಗಿ ಮನೆಗಳಿಗೆ ನೀರು ಪೂರೈಕೆಯಾಗುತ್ತದೆ. ಈ ಸೌರಘಟಕದಲ್ಲಿ ಉತ್ಪತ್ತಿಯಾಗುವ ಹೆಚ್ಚುವರಿ ವಿದ್ಯುತ್‌ ಅನ್ನು ಬೆಸ್ಕಾಂಗೆ ಮಾರಾಟ ಮಾಡಲಾಗುತ್ತದೆ. ಅದರಿಂದ ಬರುವ ಹಣವನ್ನು ಪಂಚಾಯಿತಿಗೆ ಸಂದಾಯವಾಗುವಂತೆ ಮಾಡಲಾಗಿದೆ. ರಾಜ್ಯದಲ್ಲಿ ಮೊದಲ ಬಾರಿಗೆ ಇಂಥ ಪ್ರಯೋಗವನ್ನು ಮಾಡಿರುವ ಹೆಗ್ಗಳಿಕೆಗೆ ಅರಕೆರೆ ಪಂಚಾಯಿತಿಯದ್ದಾಗಿದೆ’ ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆಂಜಿನಮ್ಮ, ಉಪಾಧ್ಯಕ್ಷ ಎಸ್‌.ಮಂಜುನಾಥ್‌, ಮಾಜಿ ಅಧ್ಯಕ್ಷರಾದ ಕೆ.ಆರ್‌.ತಿಮ್ಮೇಗೌಡ, ಲಕ್ಷ್ಮೀನಾರಾಯಣಗೌಡ, ಮುನಿಲಕ್ಷ್ಮಮ್ಮ, ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.