ADVERTISEMENT

Solar Roof Top: ‘ಕಾಮನ್ ಏರಿಯಾ’ಕ್ಕೆ ‘ಹಸಿರು ಇಂಧನ’ದ ಶಕ್ತಿ

‘ಚಾವಣಿ ಸೌರಶಕ್ತಿ’ ಅಳವಡಿಕೆಗೆ ಅಪಾರ್ಟ್‌ಮೆಂಟ್‌ಗಳ ಆಸಕ್ತಿ

ಗಾಣಧಾಳು ಶ್ರೀಕಂಠ
Published 3 ಫೆಬ್ರುವರಿ 2025, 23:45 IST
Last Updated 3 ಫೆಬ್ರುವರಿ 2025, 23:45 IST
ಬ್ರಿಗೇಡ್ ವುಡ್ಸ್‌ ಅಪಾರ್ಟ್‌ಮೆಂಟ್‌ನ ಚಾವಣಿ ಮೇಲೆ ಅಳವಡಿಸಿರುವ ಸೌರ ವಿದ್ಯುತ್‌ ಫಲಕಗಳು
ಬ್ರಿಗೇಡ್ ವುಡ್ಸ್‌ ಅಪಾರ್ಟ್‌ಮೆಂಟ್‌ನ ಚಾವಣಿ ಮೇಲೆ ಅಳವಡಿಸಿರುವ ಸೌರ ವಿದ್ಯುತ್‌ ಫಲಕಗಳು   

ಬೆಂಗಳೂರು: ‘ಮನೆಯ ಚಾವಣಿಯ ಮೇಲೆ ಸೌರಫಲಕ ಅಳವಡಿಕೆಯಿಂದಾಗಿ ವಿದ್ಯುತ್ ಬಿಲ್‌ನಲ್ಲಿ ತಿಂಗಳಿಗೆ ಕನಿಷ್ಠ ಲಕ್ಷ ರೂಪಾಯಿವರೆಗೂ ಉಳಿತಾಯವಾಗುವ ವಿಶ್ವಾಸವಿದೆ. ಇದು ಅಪಾರ್ಟ್‌ಮೆಂಟ್‌ ನಿವಾಸಿಗಳ ಸಂಘಟಿತ ಪ್ರಯತ್ನದಿಂದ ಸಾಕಾರಗೊಂಡ ಯೋಜನೆ…’

ವೈಟ್‌ಫೀಲ್ಡ್‌ನಲ್ಲಿರುವ ಬ್ರಿಗೇಡ್‌ ವುಡ್ಸ್‌ ಅಪಾರ್ಟ್‌ಮೆಂಟ್‌ನ ಆನಂದರಾಜು ಪಾಟೀಲ್, ತಮ್ಮ ಅಪಾರ್ಟ್‌ಮೆಂಟ್‌ ಚಾವಣಿ ಮೇಲೆ ಅಳವಡಿಸಿರುವ ಸೌರ ವಿದ್ಯುತ್‌ ಘಟಕ’ದಿಂದ ಆಗುವ ಉಪಯೋಗದ ಬಗ್ಗೆ ಸಂತಸದಿಂದ ಈ ಅಭಿಪ್ರಾಯ ಹಂಚಿಕೊಂಡರು.

ಒಂದು ವರ್ಷದಿಂದ ನಗರದಾದ್ಯಂತ ಇಂಥ ಹಲವು ಅಪಾರ್ಟ್‌ಮೆಂಟ್‌ ಕ್ಷೇಮಾಭಿವೃದ್ಧಿ ಸಂಘಗಳ ಸದಸ್ಯರು ತಮ್ಮ‌ ಅಪಾರ್ಟ್‌ಮೆಂಟ್ ಚಾವಣಿಯ ಮೇಲೆ ‘ಪಿಎಂ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆ’ಯಡಿ (ಪಿಎಂಎಸ್‌ಜಿಎಂಬಿವೈ) ಇಂಧನ ಇಲಾಖೆಯ ಪ್ರೋತ್ಸಾಹಧನದೊಂದಿಗೆ ‘ಚಾವಣಿ ಸೌರವಿದ್ಯುತ್ ಘಟಕ‘ಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಈ ಘಟಕದಲ್ಲಿ ಉತ್ಪಾದನೆಯಾಗುವ ವಿದ್ಯುತ್ ಅನ್ನು ಅಪಾರ್ಟ್‌ಮೆಂಟ್‌ನ ಕ್ಲಬ್‌ಹೌಸ್, ತ್ಯಾಜ್ಯ ನೀರು ಸಂಸ್ಕರಣಾ ಘಟಕ (ಎಸ್‌ಟಿಪಿ), ಜಿಮ್, ಈಜುಕೊಳ ದಂತಹ ಸಾಮಾನ್ಯ ಬಳಕೆಯ ಸ್ಥಳಗಳಿಗೆ (ಕಾಮನ್‌) ಉಪಯೋಗಿಸುತ್ತಿದ್ದಾರೆ. ಈ ಮೂಲಕ ಲಕ್ಷ ರೂಪಾಯಿಯವರಗೆ ವಿದ್ಯುತ್ ಬಿಲ್ ಉಳಿತಾಯ ಮಾಡುತ್ತಿವೆ.

‘ಇತ್ತೀಚೆಗೆ ಚಾವಣಿ ಸೌರ ವಿದ್ಯುತ್ ಅಳವಡಿಕೆಗೆ ಹೆಚ್ಚು ಅಪಾರ್ಟ್‌ಮೆಂಟ್‌ಗಳು ಆಸಕ್ತಿ ತೋರುತ್ತಿವೆ. ಮಹದೇವಪುರ ವಲಯದಲ್ಲಿ‌ ಕಳೆದ ವರ್ಷದಿಂದ ಐದಾರು ಅಪಾರ್ಟ್‌ಮೆಂಟ್‌ಗಳು ಪಿಎಂಎಸ್‌ಜಿಎಂಬಿವೈ ಅಡಿ ಸೌರ ವಿದ್ಯುತ್ ಘಟಕ ಅಳವಡಿಸಿಕೊಂಡಿವೆ‌. ಬೆಸ್ಕಾಂ ಕೂಡ ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುತ್ತಿದೆ’ ಎಂದು ಬೆಸ್ಕಾಂನ ಸಹಾಯಕ ಎಂಜಿನಿಯರ್ ಮೈಲಾರಪ್ಪ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ವಿದ್ಯುತ್ ಬಿಲ್ ಉಳಿತಾಯ:  

ಬ್ರಿಗೆಡ್‌ ವುಡ್ಸ್‌ ಅಪಾರ್ಟ್‌ಮೆಂಟ್‌ನಲ್ಲಿ 300 ಮನೆಗಳಿವೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಚಾವಣಿ ಮೇಲೆ ಸೌರ ವಿದ್ಯುತ್ ಘಟಕ ಅಳವಡಿಸುವ ಪ್ರಕ್ರಿಯೆಗೆ ಚಾಲನೆ ನೀಡಿ, ಡಿಸೆಂಬರ್‌ನಲ್ಲಿ ಪೂರ್ಣಗೊಳಿಸಿದ್ದಾರೆ. ಜನವರಿ 8ರಂದು ಗ್ರಿಡ್‌ಗೆ ಸಂಪರ್ಕ ಕಲ್ಪಿಸಲಾಗಿದೆ. ಗಣರಾಜ್ಯೋತ್ಸವ ದಿನದಂದು ಸೌರ ವಿದ್ಯುತ್ ಉತ್ಪಾದನೆಗೆ ಚಾಲನೆ ನೀಡಲಾಗಿದೆ.

‘ಘಟಕ ಅಳವಡಿಕೆಗೆ ₹75 ಲಕ್ಷ ವೆಚ್ಚವಾಗಿದೆ. ಪಿಎಂಎಸ್‌ಜಿಎಂಬಿ ಯೋಜನೆಯಡಿ ₹19 ಲಕ್ಷ ಸಹಾಯಧನ ಲಭ್ಯವಾಗುತ್ತಿದೆ. ಅಪಾರ್ಟ್‌ಮೆಂಟ್‌ನಲ್ಲಿರುವ ‘ನಿವಾಸಿ ಮಾಲೀಕರ ನಿಧಿ’ಯಲ್ಲಿದ್ದ ಹಣವನ್ನು ಈ ಯೋಜನೆಗೆ ಬಳಸಿಕೊಂಡಿದ್ದೇವೆ. ಸದಸ್ಯರೆಲ್ಲರ ಒಮ್ಮತದಿಂದ ಯೋಜನೆ ಸಾಕಾರಗೊಂಡಿದೆ. ಎರಡು ಚಾವಣಿಗಳಲ್ಲಿ 109 ಕಿಲೊ ವಾಟ್ ಸಾಮರ್ಥ್ಯದ ಈ ಘಟಕಗಳನ್ನು ಅಳವಡಿಸಲಾಗಿದೆ’ ಎಂದು ಬ್ರಿಗೇಡ್‌ ವುಡ್ಸ್‌ ಅಪಾರ್ಟ್‌ಮೆಂಟ್‌ ಕ್ಷೇಮಾಭಿವೃದ್ಧಿ ಸಂಘದ ಖಜಾಂಚಿ ಆನಂದರಾಜ ಪಾಟೀಲ್ ವಿವರಿಸಿದರು.

‘ಅಪಾರ್ಟ್‌ಮೆಂಟ್‌ನ ಕಾಮನ್‌ ಏರಿಯಾದಲ್ಲಿರುವ ಎಸ್‌ಟಿಪಿ, ಕ್ಲಬ್‌ಹೌಸ್‌, ಈಜುಕೊಳ, ಜಿಮ್‌, ಲಿಫ್ಟ್‌ ಸೇರಿದಂತೆ ಹಲವು ಸೌಕರ್ಯಗಳಿಗೆ ಸೌರ ವಿದ್ಯುತ್‌ ಬಳಕೆ ಮಾಡುತ್ತೇವೆ. ಕಾಮನ್ ಏರಿಯಾಕ್ಕಾಗಿ ತಿಂಗಳಿಗೆ ಸುಮಾರು 35 ಸಾವಿರ ಯೂನಿಟ್‌ ವಿದ್ಯುತ್ ಬಳಕೆಯಾಗುತ್ತಿದೆ. ₹4.5 ಲಕ್ಷದಷ್ಟು ವಿದ್ಯುತ್ ಬಿಲ್ ಬರುತ್ತಿತ್ತು. ಈ ಸೌಲಭ್ಯ ಅಳವಡಿಕೆಯಿಂದ ಅಪಾರ್ಟ್‌ಮೆಂಟ್‌ನ ಒಟ್ಟು ವಿದ್ಯುತ್ ಬಿಲ್‌ನಲ್ಲಿ ₹80 ಸಾವಿರದಿಂದ ₹1ಲಕ್ಷದವರೆಗೂ ಉಳಿತಾಯವಾಗಲಿದೆ‘ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಿದ್ಯುತ್ ಬಿಲ್ ಶೂನ್ಯ:

ಹೂಡಿ ಸಮೀಪವಿರುವ ಪಾವನಿ ಡಿವೈನ್‌ ಅಪಾರ್ಟ್‌ಮಂಟ್‌ನಲ್ಲಿ 165 ಮನೆಗಳಿವೆ. ಕಳೆದ ವರ್ಷ ಏಪ್ರಿಲ್ ತಿಂಗಳಲ್ಲಿ ಚಾವಣಿ ಸೌರಶಕ್ತಿ ಘಟಕ ಅಳವಡಿಕೆಯಾಗಿದೆ. 120 ಕೆವಿಎ ಮಂಜೂರಾಗಿದ್ದು, ಎರಡು ವಿಭಾಗದಲ್ಲಿ ಘಟಕ ಅಳವಡಿಸಲಾಗುತ್ತಿದೆ. ಸದ್ಯ ಅಪಾರ್ಟ್‌ಮೆಂಟ್‌ನ ‘ಎ‘ ಬ್ಲಾಕ್‌ನಲ್ಲಿ 40 ಕೆವಿಎ ಸಾಮರ್ಥ್ಯದ ಮೊದಲ ಘಟಕ ಅಳವಡಿಸಲಾಗಿದೆ (ಉಳಿದ 80 ಕೆವಿಎಯನ್ನು ಬಿ ಬ್ಲಾಕ್‌ಗೆ ಅಳವಡಿಸಲಾಗುತ್ತದೆ). ಈ ಘಟಕದಿಂದ ಉತ್ಪಾದನೆಯಾಗುವ ವಿದ್ಯುತ್ ಅನ್ನು ಈಜುಕೊಳ, ಕ್ಲಬ್‌ ಹೌಸ್‌, ಎರಡು ಕೊಳವೆಬಾವಿಗಳಿರುವ ಕಾಮನ್ ಏರಿಯಾಗೆ ಬಳಸಲಾಗುತ್ತಿದೆ.

‘ಸೌರ ವಿದ್ಯುತ್ ಘಟಕ ಅಳವಡಿಸಿದ ಮೇಲೆ, ತಿಂಗಳಿಗೆ ಸರಾಸರಿ ₹60 ಸಾವಿರ ಉಳಿತಾಯವಾಗುತ್ತಿದೆ. ಎಂಟು ತಿಂಗಳಿನಿಂದ ಅಂದಾಜು ₹5 ಲಕ್ಷದಿಂದ ₹6 ಲಕ್ಷದವರೆಗೆ ಉಳಿತಾಯವಾಗಿದೆ.  ಸೌರ ವಿದ್ಯುತ್‌ ಬಳಕೆಯ ಭಾಗವಾಗಿರುವುದಕ್ಕೆ ಹೆಮ್ಮೆ ಇದೆ’ ಎಂದು ಪಾವನಿ ಡಿವೈನ್‌ ಅಪಾರ್ಟ್‌ಮೆಂಟ್ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಇ.ವಿ.ಪವನ್ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಪರಿಸರ ರಕ್ಷಣೆಗೆ ಕೊಡುಗೆ

ಸುಮಧರ ಶ್ರೀನಿವಾಸಮ್ ಅಪಾರ್ಟ್‌ಮೆಂಟ್‌ನಲ್ಲಿ 50 ಕೆವಿಎ ಸಾಮರ್ಥ್ಯದ ‘ಚಾವಣಿ ಸೌರಶಕ್ತಿ ಘಟಕ’ವನ್ನು ಅಳವಡಿಸಿದ್ದಾರೆ. ಇಲ್ಲೂ ಕೂಡ ಕಾಮನ್‌ ಏರಿಯಾಕ್ಕೆ ವಿದ್ಯುತ್ ಬಳಕೆ ಮಾಡುತ್ತಿದ್ದಾರೆ. ‘ಸದ್ಯ ವಿದ್ಯುತ್ ಬಿಲ್ ನಿರೀಕ್ಷೆಯಲ್ಲಿದ್ದೇವೆ. ಕಾಮನ್ ಏರಿಯಾದಲ್ಲಿ ಬಳಸುತ್ತಿದ್ದ ವಿದ್ಯುತ್‌ನಿಂದ ₹50 ಸಾವಿರ ಬಿಲ್ ಬರುತ್ತಿತ್ತು. ಅದು ಪೂರ್ಣ ಉಳಿಯಬಹುದು’ ಎಂದು ಅಪಾರ್ಟ್‌ಮೆಂಟ್ ಅಸೋಸಿಯೇಷನ್ ಅಧ್ಯಕ್ಷ ಜಯೇಶ್ ತಿಳಿಸಿದರು.

‘ಸೌರಶಕ್ತಿ ಘಟಕ ಅಳವಡಿಕೆಯಿಂದ ವಿದ್ಯುತ್ ಬಿಲ್ ಉಳಿತಾಯಕ್ಕಿಂತ, ಅಷ್ಟು ಪ್ರಮಾಣದಲ್ಲಿ ವಿದ್ಯುತ್ ಬಳಸುವುದನ್ನು ಉಳಿಸಬಹುದು. ಇದರಿಂದ ಪರಿಸರ ಸಂರಕ್ಷಣೆಗೆ ನಮ್ಮಿಂದ ಒಂದು ಸಣ್ಣ ಕೊಡುಗೆ ನೀಡಿದಂತಾಗುತ್ತದೆ’ ಎಂದು ಅವರು ಹೇಳುತ್ತಾರೆ.

ಪ್ರೋತ್ಸಾಹ ಧನ

ಪಿಎಂಎಸ್‌ಜಿಎಂಬಿವೈ ಅಡಿಯಲ್ಲಿ ಗುಂಪು ವಸತಿ ಸೊಸೈಟಿಗಳು ಹಾಗೂ ಬಹುಮಹಡಿ ವಸತಿ ಸಮುಚ್ಚಯಗಳ ಚಾವಣಿಗಳಲ್ಲಿ ಸಾಮಾನ್ಯ ಬಳಕೆಯ ಸ್ಥಳಗಳಲ್ಲಿ (ಕಾಮನ್ ಏರಿಯಾ) ವಿದ್ಯುತ್‌ ಬಳಕೆಗೆ ಸೌರ ವಿದ್ಯುತ್‌ ಘಟಕ ಅಳವಡಿಸಲು ಪ್ರತಿ ಕಿ. ವ್ಯಾಟ್‌ಗೆ ₹18 ಸಾವಿರ ಸಹಾಯಧನ ಸಿಗಲಿದೆ (ಒಂದು ಮನೆಗೆ 3ಕೆವಿಎ ಯಂತೆ 500 ಕಿವ್ಯಾಟ್‌ವರೆಗೆ)

ನೋಂದಣಿ ಹೇಗೆ?

ಪಿಎಂಎಸ್‌ಜಿಎಂಬಿವೈ ಅಡಿ ಚಾವಣಿ ಸೌರಶಕ್ತಿ ವಿದ್ಯುತ್ ಘಟಕ ನೋಂದಣಿಗಾಗಿ https://www.pmsuryaghar.gov.in/ ಜಾಲತಾಣಕ್ಕೆ ಭೇಟಿ ನೀಡಿ. ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಿ. ಬೆಸ್ಕಾಂ ಗುರುತಿಸಿರುವ ವೆಂಡರ್ಸ್‌ಗಳನ್ನು(ಏಜೆನ್ಸಿಗಳು) ಆಯ್ಕೆ ಮಾಡಿಕೊಳ್ಳಬೇಕು. ಬೆಸ್ಕಾಂ ವ್ಯಾಪ್ತಿಯಲ್ಲಿ 5289 ವೆಂಡರ್ಸ್‌ಗಳನ್ನು ಆಯ್ಕೆ ಮಾಡಲಾಗಿದೆ.

137 ಅರ್ಜಿಗಳು 27ಕ್ಕೆ ಚಾಲನೆ

ಬೆಸ್ಕಾಂ ವ್ಯಾಪ್ತಿಯಲ್ಲಿ ಈವರೆಗೆ ವಸತಿ ಕ್ಷೇಮಾಭಿವೃದ್ಧಿ ಸಂಘಗಳಿಂದ ಮನೆ ಚಾವಣಿ ಮೇಲೆ ಸೌರಫಲಕ ಅಳವಡಿಕೆಗಾಗಿ ಎಂಎನ್‌ಆರ್‌ಇ/ಬೆಸ್ಕಾಂ ಪೋರ್ಟಲ್‌ನಲ್ಲಿ 137 ಅರ್ಜಿಗಳು ನೋಂದಣಿಯಾಗಿವೆ ಇದರಲ್ಲಿ 27 ಯೋಜನೆಗಳಿಗೆ ಚಾಲನೆ ನೀಡಿದ್ದೇವೆ. ಉಳಿದ ಅರ್ಜಿಗಳು ಅನುಷ್ಠಾನ ಹಂತದಲ್ಲಿವೆ. ಶೀಘ್ರವೇ ಎಲ್ಲವನ್ನೂ ಪೂರ್ಣಗೊಳಿಸುತ್ತೇವೆ – ರಮೇಶ್ ವಿ.ಎಸ್‌. ಪ್ರಧಾನ ವ್ಯವಸ್ಥಾಪಕ ಡಿಎಸ್‌ಎಂ ವಿಭಾಗ ಬೆಸ್ಕಾಂ

ಪಾವನಿ ಡಿವೈನ್ ಅಪಾರ್ಟ್‌ಮೆಂಟ್‌ ಚಾವಣಿ ಮೇಲೆ ಸೌರ ವಿದ್ಯುತ್ ಫಲಕಗಳನ್ನು ಅಳವಡಿಸಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.