ADVERTISEMENT

ಘನತ್ಯಾಜ್ಯ ನಿರ್ವಹಣೆ: ಎಂಎಸ್‌ಜಿಪಿಗೆ ನೋಟಿಸ್‌

ಅವೈಜ್ಞಾನಿಕ ಸಂಸ್ಕರಣೆ, ಎಸ್‌ಡಬ್ಲ್ಯುಎಂ ನಿಯಮ, ಜಲ ಕಾಯ್ದೆ ಉಲ್ಲಂಘನೆ: ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ

​ಪ್ರಜಾವಾಣಿ ವಾರ್ತೆ
Published 3 ಜುಲೈ 2025, 15:26 IST
Last Updated 3 ಜುಲೈ 2025, 15:26 IST
<div class="paragraphs"><p>ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಲೋಗೊ</p></div>

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಲೋಗೊ

   

ಬೆಂಗಳೂರು: ನಗರದಿಂದ ಸಾಗಣೆಯಾಗುವ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಂಗಡಿಸಿ ಗೊಬ್ಬರ ತಯಾರಿಸುವ ಪ್ರಕ್ರಿಯೆಯಲ್ಲಿ ವಿಫಲವಾಗಿರುವ ಎಂಎಸ್‌ಜಿಪಿ ಇನ್‌ಫ್ರಾಟೆಕ್‌ ಸಂಸ್ಥೆಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನೋಟಿಸ್‌ ಜಾರಿ ಮಾಡಿದೆ.

ಘನತ್ಯಾಜ್ಯ ನಿರ್ವಹಣೆ ನಿಯಮಗಳ ಉಲ್ಲಂಘನೆ, ತಣ್ಣೀರಹಳ್ಳಿ ಗ್ರಾಮಸ್ಥರ ದೂರು, ಬೆಂಗಳೂರು ಮಹಾನಗರ ಸ್ವಚ್ಛತೆ ಮತ್ತು ಲಾರಿ ಮಾಲೀಕರು, ಗುತ್ತಿಗೆದಾರರ ಸಂಘದ ದೂರು ಸೇರಿದಂತೆ ಮಂಡಳಿಯ ದೊಡ್ಡಬಳ್ಳಾಪುರದ ಪ್ರಾದೇಶಿಕ ಅಧಿಕಾರಿಯವರ ತಪಾಸಣಾ ವರದಿಯನ್ನು ಪರಿಗಣಿಸಿ ನೋಟಿಸ್‌ ನೀಡಲಾಗಿದೆ. ಮಂಡಳಿ ಅಧ್ಯಕ್ಷರ ಸಮ್ಮುಖದಲ್ಲಿ ಜುಲೈ 10ರಂದು  ಎಂಎಸ್‌ಜಿಪಿಯ ಪ್ರಮುಖರು ಖುದ್ದಾಗಿ ಹಾಜರಾಗಿ, ತಾಂತ್ರಿಕ ಚರ್ಚೆಯಲ್ಲಿ ಭಾಗವಹಿಸಬೇಕು. ಇಲ್ಲದಿದ್ದಲ್ಲಿ, ಜಲ ಕಾಯ್ದೆಯಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಲಾಗಿದೆ.

ADVERTISEMENT

ದೊಡ್ಡಬೆಳವಂಗಲದ ಚಿಗರೇನಹಳ್ಳಿಯಲ್ಲಿರುವ ಎಂಎಸ್‌ಜಿಪಿ ಸಂಸ್ಕರಣಾ ಘಟಕದಲ್ಲಿ ಪ್ರತಿ ದಿನ 750 ಟನ್‌ ತ್ಯಾಜ್ಯವನ್ನು ವಿಂಗಡಿಸಿ, ಸಾವಯವ ಗೊಬ್ಬರ/ ವೆರ್ಮಿ ಕಾಂಪೋಸ್ಟ್‌ ತಯಾರಿಸಲು 2022ರ ಡಿಸೆಂಬರ್‌ 29ರಿಂದ 2026ರ ಜೂನ್‌ 30ರವರೆಗೆ ಘನತ್ಯಾಜ್ಯ ನಿರ್ವಹಣೆ ನಿಯಮಗಳಡಿ ಬಿಬಿಎಂಪಿ ಆದೇಶ ನೀಡಿದೆ. ಅವೈಜ್ಞಾನಿಕವಾಗಿ ತ್ಯಾಜ್ಯವನ್ನು ಸಂಸ್ಕರಿಸುತ್ತಿರುವುದರಿಂದ ಪರಿಸರಕ್ಕೆ ಬಹಳಷ್ಟು ಹಾನಿಯಾಗಲಿದೆ. ಅಲ್ಲದೆ, ಜಲ (ರಕ್ಷಣೆ ಮತ್ತು ಮಾಲಿನ್ಯ ನಿಯಂತ್ರಣ) ಕಾಯ್ದೆ 1974ರಂತೆ ನಿಯಮಗಳನ್ನು ಉಲ್ಲಂಘಿಸಿದಂತಾಗಿದೆ ಎಂದು ನೋಟಿಸ್‌ನಲ್ಲಿ ಹೇಳಲಾಗಿದೆ.

‘ಬೆಂಗಳೂರು ಮಹಾನಗರ ಸ್ವಚ್ಛತೆ ಮತ್ತು ಲಾರಿ ಮಾಲೀಕರು, ಗುತ್ತಿಗೆದಾರರ ಸಂಘದ ದೂರಿನನ್ವಯ 2024ರ ಆಗಸ್ಟ್ 13ರಂದು ಸಂಸ್ಕರಣೆ ಘಟಕಕ್ಕೆ ಮಂಡಳಿಯ ಪ್ರಾದೇಶಿಕ ಅಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 2024ರ ಅಕ್ಟೋಬರ್‌ 18ರಂದು ಶೋಕಾಸ್‌ ನೋಟಿಸ್‌ ಜಾರಿ ಮಾಡಿ, ಜಲ ಕಾಯ್ದೆಯಂತೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಆದರೆ, ಈ ಬಗ್ಗೆ ನೀವು ಯಾವುದೇ ಕ್ರಮ ಕೈಗೊಂಡಿಲ್ಲದ ಕಾರಣ, ಮಂಡಳಿಯ ಸದಸ್ಯ ಕಾರ್ಯದರ್ಶಿಯವರು ಡಿಸೆಂಬರ್‌ 19ರಂದು ನೋಟಿಸ್‌ ಜಾರಿ ಮಾಡಿದ್ದಾರೆ’ ಎಂದು ವಿವರಿಸಲಾಗಿದೆ.

‘ಈ ನೋಟಿಸ್‌ಗೆ ಸಮಯಾವಕಾಶ ಕೋರಿಕೊಂಡಿದ್ದ ಎಂಎಸ್‌ಜಿಪಿಯವರು, 2025ರ ಫೆಬ್ರುವರಿ ಎರಡನೇ ವಾರ ಮತ್ತು ಮಾರ್ಚ್ ಮೊದಲ ವಾರದಲ್ಲಿ ವಿವರಣೆ ನೀಡಿ, ಸಂಸ್ಕರಣೆ ಘಟಕದಲ್ಲಿ ಅಗತ್ಯ ಕ್ರಮ ಕೈಗೊಂಡಿರುವುದಾಗಿ ತಿಳಿಸಿದ್ದೀರಿ. ಅಲ್ಲದೆ, ಹೆಚ್ಚುವರಿ ನಿಧಿ ಅಥವಾ ಅನುದಾನ ಪಡೆಯುವಲ್ಲಿ ಸ್ಥಳೀಯ ಸಂಸ್ಥೆಯಿಂದ ತೊಂದರೆಯಾಗುತ್ತಿದೆ, ಬ್ಯಾಂಕ್‌ಗಳೂ ಸಾಲ ನೀಡುತ್ತಿಲ್ಲ. ರಿಯಲ್‌ ಎಸ್ಟೇಟ್‌ನವರು ಎಂಎಸ್‌ಜಿಪಿಯನ್ನು ಮುಚ್ಚಿಸಬೇಕೆಂಬ ಹುನ್ನಾರ ಹೊಂದಿದ್ದಾರೆ ಎಂದು ಹೇಳಿದ್ದೀರಿ. ಈ ಹೇಳಿಕೆ ಮೂಲಕ ನೀವು ಘನತ್ಯಾಜ್ಯ ನಿರ್ವಹಣೆ ನಿಯಮಗಳನ್ನು ಅಳವಡಿಸಿಕೊಳ್ಳುವಲ್ಲಿ ಇನ್ನೂ ಸಾಕಷ್ಟು ಹಿಂದೆ ಉಳಿದಿದ್ದೀರಿ ಎಂಬುದು ಸಾಬೀತಾಗುತ್ತದೆ. ಜಲ ಕಾಯ್ದೆಯಂತೆ ಕ್ರಮ ಕೈಗೊಳ್ಳುವ ಮೊದಲು ಒಂದು ಬಾರಿ ತಾಂತ್ರಿಕ ಚರ್ಚೆ ನಡೆಸಬೇಕೆಂಬ ಬೆಂಗಳೂರು ಉತ್ತರ ವಲಯದ ಹಿರಿಯ ಪರಿಸರ ಅಧಿಕಾರಿಯವರ ಸಲಹೆಯಂತೆ ಈ ನೋಟಿಸ್‌ ಜಾರಿ ಮಾಡಲಾಗಿದೆ’ ಎಂದು ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.