ರಮ್ಯಾ ಮತ್ತು ಭಾರ್ಗವ್
ಬೆಂಗಳೂರು: ಯಲಹಂಕದ ಆರ್‌ಎನ್‌ಝೆಡ್ ಅಪಾರ್ಟ್‌ಮೆಂಟ್‌ನಲ್ಲಿ ತಾಯಿ ಹಾಗೂ ಮಗ ನೇಣು ಬಿಗಿದುಕೊಂಡು ಆತ್ಮಹತ್ಯೆಕೊಂಡಿದ್ದಾರೆ.
ರಮ್ಯಾ ಶ್ರೀಧರ್(43) ಮತ್ತು ಅವರ ಪುತ್ರ ಭಾರ್ಗವ್ (23) ಆತ್ಮಹತ್ಯೆ ಮಾಡಿಕೊಂಡವರು.
ಈ ಸಂಬಂಧ ಯಲಹಂಕ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ. ಜುಲೈ 9ರಂದು ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದು ಕುಟುಂಬಸ್ಥರು ಹಾಗೂ ಪೊಲೀಸರಿಗೆ ಶುಕ್ರವಾರ ಮಾಹಿತಿ ಗೊತ್ತಾಗಿದೆ.
ಪ್ರಾಥಮಿಕ ತನಿಖೆಯಲ್ಲಿ ಕೆಲವು ತಿಂಗಳ ಹಿಂದೆ ರಮ್ಯಾ ಪತಿ ಶ್ರೀಧರ್ ಅನಾರೋಗ್ಯಕ್ಕೀಡಾಗಿ ಮೃತಪಟ್ಟಿದ್ದರು. ಅದರಿಂದ ತಾಯಿ, ಪುತ್ರ ಮಾನಸಿಕವಾಗಿ ಕುಗ್ಗಿದ್ದರು. ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.
ಆಂಧ್ರಪ್ರದೇಶದ ರಮ್ಯಾ ಅವರು ಸಾಫ್ಟವೇರ್ ಎಂಜಿನಿಯರ್ ಶ್ರೀಧರ್ ಅವರನ್ನು ಪ್ರೀತಿಸಿ ಮದುವೆ ಆಗಿದ್ದರು. ದಂಪತಿಗೆ ಮಗಳು ಇದ್ದಾರೆ. ದಂಪತಿ ಮಕ್ಕಳ ಜತೆ ಬೆಂಗಳೂರಿನ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದರು. ಪುತ್ರಿ ಪಿ.ಜಿಯಲ್ಲಿದ್ದರು ಎಂದು ಪೊಲೀಸರು ಹೇಳಿದರು.
‘ಪತಿ ಮೃತಪಟ್ಟ ಮೇಲೆ ರಮ್ಯಾ ಅವರಿಗೆ ಕುಟುಂಬದ ನಿರ್ವಹಣೆ ನಡೆಸುವುದು ಕಷ್ಟವಾಗಿತ್ತು. ಫ್ಲ್ಯಾಟ್ ಬಾಡಿಗೆ, ಮಕ್ಕಳ ವಿದ್ಯಾಭ್ಯಾಸಕ್ಕೆ ಹಣ ಹೊಂದಿಸಲು ಆಕೆ ಪರದಾಡುತ್ತಿದ್ದರು ಎನ್ನಲಾಗಿದೆ. ಇದರಿಂದ ಖಿನ್ನತೆಗೆ ಒಳಗಾಗಿದ್ದರು. ಸಂಬಂಧಿಕರಿಗೆ ಕರೆ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿಕೊಂಡಿದ್ದರು’ ಎನ್ನಲಾಗಿದೆ.
ಪಿ.ಜಿಯಲ್ಲಿದ್ದ ರಮ್ಯಾ ಅವರ ಪುತ್ರಿ ಎರಡು ದಿನಕ್ಕೊಮ್ಮೆ ತಾಯಿಗೆ ಕರೆ ಮಾಡುತ್ತಿದ್ದರು. ಜುಲೈ 9ರಂದು ರಾತ್ರಿ ತಾಯಿಗೆ ಕರೆ ಮಾಡಿ ಮಾತಾಡಿದ್ದರು. ಈ ವೇಳೆಯೂ ತಾಯಿ ಮತ್ತು ಸಹೋದರ ಆತ್ಮಹತ್ಯೆ ಮಾಡಿಕೊಳ್ಳುವ ಮಾತನಾಡಿದ್ದರು. ಆಗ ಇಬ್ಬರನ್ನೂ ಸಮಾಧಾನ ಪಡಿಸಿದ್ದರು. ‘ತಂದೆ ಮೃತಪಟ್ಟ ಬಳಿಕ ಆರ್ಥಿಕವಾಗಿ ಮತ್ತು ಮಾನಸಿಕವಾಗಿ ಕುಗ್ಗಿದ್ದರು’ ಎಂದು ಮೃತ ರಮ್ಯಾರ ಪುತ್ರಿ ಪೊಲೀಸರ ಬಳಿ ಹೇಳಿಕೊಂಡಿದ್ದಾರೆ.
ಜುಲೈ 12ರ ಶುಕ್ರವಾರ ಸಂಜೆ ಪುತ್ರಿ ಬಂದು ಮನೆಯ ಬಾಗಿಲು ಬಡಿದರು. ಆಗ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಬಾಗಿಲು ಒಡೆದು ಪರಿಶೀಲಿಸಿದಾಗ ತಾಯಿ ಹಾಗೂ ಸಹೋದರ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ.
ಸ್ಥಳ್ಕಕೆ ಬಂದ ಪೊಲೀಸರು ಪರಿಶೀಲಿಸಿದಾಗ, ಎರಡು ಮೃತದೇಹಗಳು ಕೊಳೆತ ಸ್ಥಿತಿಯಲ್ಲಿ ಇದ್ದವು. ಮರಣೋತ್ತರ ಪರೀಕ್ಷೆ ನಡೆಸಿ ಶನಿವಾರ ಮಧ್ಯಾಹ್ನ ಮೃತದೇಹಗಳನ್ನು ಕುಟುಂಬದ ಸದಸ್ಯರಿಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.