ADVERTISEMENT

ಸೊರಬ | ಅಭಿವೃದ್ದಿ ಕಾರ್ಯಗಳಿಗೆ ಶೀಘ್ರ ಚಾಲನೆ: ಮಧು ಬಂಗಾರಪ್ಪ

ಬೆಂಗಳೂರಿನಲ್ಲಿರುವ ಸೊರಬ ನಿವಾಸಿಗಳ ಸಮ್ಮೀಲನ -2024ದಲ್ಲಿ ಮಧು ಬಂಗಾರಪ್ಪ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2024, 16:08 IST
Last Updated 8 ಡಿಸೆಂಬರ್ 2024, 16:08 IST
‘ಸಮ್ಮಿಲನ 2024’ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನೀಡಿದ ಸೊರಬ ನಿವಾಸಿಗಳ ಪೋಷಕರ ಮಕ್ಕಳನ್ನು ಸನ್ಮಾನಿಸಲಾಯಿತು. ಸಚಿವ ಮಧು ಬಂಗಾರಪ್ಪ ಅವರ ಪತ್ನಿ ಅನಿತಾ, ಮಧುಬಂಗಾರಪ್ಪ, ದಿ ಪ್ರಿಂಟರ್ಸ್‌ (ಮೈಸೂರು) ಪ್ರೈ.ಲಿ.ನ ಜಂಟಿ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್‌.ತಿಲಕ್‌ಕುಮಾರ್, ಸುಜಾತಾ ತಿಲಕ್ ಕುಮಾರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
‘ಸಮ್ಮಿಲನ 2024’ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನೀಡಿದ ಸೊರಬ ನಿವಾಸಿಗಳ ಪೋಷಕರ ಮಕ್ಕಳನ್ನು ಸನ್ಮಾನಿಸಲಾಯಿತು. ಸಚಿವ ಮಧು ಬಂಗಾರಪ್ಪ ಅವರ ಪತ್ನಿ ಅನಿತಾ, ಮಧುಬಂಗಾರಪ್ಪ, ದಿ ಪ್ರಿಂಟರ್ಸ್‌ (ಮೈಸೂರು) ಪ್ರೈ.ಲಿ.ನ ಜಂಟಿ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್‌.ತಿಲಕ್‌ಕುಮಾರ್, ಸುಜಾತಾ ತಿಲಕ್ ಕುಮಾರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.   

ಬೆಂಗಳೂರು: ‘ರಾಜ್ಯ ಸರ್ಕಾರ ಸೊರಬ ತಾಲ್ಲೂಕಿನ ವಿವಿಧ ಅಭಿವೃದ್ಧಿಗಳಿಗಾಗಿ ಸುಮಾರು ₹250 ಕೋಟಿ ಬಿಡುಗಡೆ ಮಾಡಿದೆ. ಅಭಿವೃದ್ಧಿ ಕಾರ್ಯಗಳಿಗೆ ಸದ್ಯದಲ್ಲೇ ಚಾಲನೆ ನೀಡಲಾಗುವುದು’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ಭರವಸೆ ನೀಡಿದರು.

ನಗರದ ಅರಮನೆ ಮೈದಾನದಲ್ಲಿ ಭಾನುವಾರ ನಡೆದ ಶಿವಮೊಗ್ಗ ಜಿಲ್ಲೆಯ ಸೊರಬ ವಿಧಾನಸಭಾ ಕ್ಷೇತ್ರದ ಬೆಂಗಳೂರು ನಿವಾಸಿಗಳ ‘ಸಮ್ಮಿಲನ 2024’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಶಿಕ್ಷಣ ಇಲಾಖೆಯನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದೇನೆ, ಸಾಮಾಜಿಕ ಜಾಲತಾಣಗಳಲ್ಲಿ ಬರುವ ಟ್ರೋಲ್‌ಗಳ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳಬೇಕಿಲ್ಲ’ ಎಂದು ಹೇಳಿದರು.

ADVERTISEMENT

‘ನಟ ಶಿವರಾಜ್‌ಕುಮಾರ್ ಅವರು ಆರೋಗ್ಯವಾಗಿದ್ದಾರೆ. ಸಣ್ಣ ಆರೋಗ್ಯದ ಸಮಸ್ಯೆಗಾಗಿ ಚಿಕಿತ್ಸೆ ಪಡೆಯಲು ಅವರು ಅಮೆರಿಕಕ್ಕೆ ತೆರಳಲಿದ್ದಾರೆ. ಒಂದು ವಾರ ನಾನು ಅವರ ಜೊತೆಯಲ್ಲಿರುತ್ತೇನೆ’ ಎಂದು ತಿಳಿಸಿದರು.

ಮಾಜಿ ಮುಖ್ಯಮಂತ್ರಿ ಎಸ್‌. ಬಂಗಾರಪ್ಪ ಅವರ ಪುತ್ರಿ ಸುಜಾತ ತಿಲಕ್ ಕುಮಾರ್ ಮಾತನಾಡಿ, ‘ಸಂಬಂಧಗಳನ್ನು ಬೆಸೆಯುವ ಇಂತಹ ಸಮ್ಮಿಲನ ಕಾರ್ಯಕ್ರಮಗಳು ನಡೆಯುತ್ತಿರಬೇಕು. ವಿಶೇಷವಾಗಿ ಮಲೆನಾಡಿನ ಕೊಟ್ಟೆ ಕಡಬು, ತೊಡೆದೊಳಗಿ, ಕಜ್ಜಾಯ, ಕೋಳಿಸಾರಿನಂತಹ ವಿವಿಧ ತಿನಿಸುಗಳನ್ನು ಬೆಂಗಳೂರು ಜನರಿಗೆ ಪರಿಚಯಿಸಬೇಕು’ ಎಂದರು.

ಬೆಂಗಳೂರಿನಲ್ಲಿರುವ ಸೊರಬ ನಿವಾಸಿಗಳ ಪೋಷಕರ ಮಕ್ಕಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಸಮ್ಮಿಲನ 2024ರ ಕಾರ್ಯಕ್ರಮದ ಸಂಚಾಲಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನಿರ್ದೇಶಕ ಏಕಾಂತಪ್ಪ, ವಕೀಲರಾದ ಕೇಶವಮೂರ್ತಿ ಹಾಲಗಳಲೆ, ಕುಮಾರಸ್ವಾಮಿ ಹೊಸೂರು, ದಯಾನಂದ ಬಿದರಗೆರೆ, ಮುಕುಂದ ಹಿರೇಇಡಗೋಡು, ಅನಿಲ್, ಗಣಪತಿ ಹಳೇಸೊರಬ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.