ಪೀಣ್ಯ ದಾಸರಹಳ್ಳಿ: ‘ಸದಸ್ಯರ ಸೇವೆಯೇ ನಮ್ಮ ಪ್ರಥಮ ಧ್ಯೇಯ. ಸದಸ್ಯಸ್ನೇಹಿಯಾಗಿ ಷೇರು, ಠೇವಣಿಗಳ ಸಂಗ್ರಹ, ಸಾಲ ವಿತರಣೆ ಮತ್ತು ವಸೂಲಾತಿಯಲ್ಲಿ ಉತ್ತಮ ಸಾಧನೆ ಮಾಡಿದ ಪ್ರತಿಫಲವಾಗಿ ₹3.04 ಕೋಟಿ ಲಾಭಗಳಿಸಿದೆ’ ಎಂದು ಸೌಂದರ್ಯ ಸೌಹಾರ್ದ ಕ್ರೆಡಿಟ್ ಕೋ ಆಪರೆಟಿವ್ ಲಿ.ನ ಅಧ್ಯಕ್ಷ ಸೌಂದರ್ಯ ಪಿ.ಮಂಜಪ್ಪ ತಿಳಿಸಿದರು.
ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ‘ನಮ್ಮ ಸಹಕಾರಿ ಸ್ಥಾಪನೆಯಾಗಿ ಹತ್ತು ವರ್ಷ ತುಂಬುವಷ್ಟರಲ್ಲಿ ಸ್ವಂತ ನಿವೇಶನ, ಕಟ್ಟಡ ಹೊಂದಿದ್ದೇವೆ. ಚಿಕ್ಕಬಾಣಾವರದಲ್ಲಿ 4ನೇ ಶಾಖೆಯನ್ನು ಪ್ರಾರಂಭಿಸಿದ್ದೇವೆ. ₹288 ಕೋಟಿ ವ್ಯವಹಾರ ನಡೆಸಿ ₹156 ಕೋಟಿ ದುಡಿಯುವ ಬಂಡವಾಳ ಹೊಂದಿದ್ದೇವೆ’ ಎಂದರು.
ವ್ಯವಸ್ಥಾಪಕ ನಿರ್ದೇಶಕ ಕೆ.ಕೃಷ್ಣ ಶೆಟ್ಟಿ ಮಾತನಾಡಿ, ‘ಬ್ಯಾಂಕುಗಳಲ್ಲಿ ಇರುವಂತಹ ಎಲ್ಲಾ ಸೌಲಭ್ಯಗಳು ನಮ್ಮ ಸಹಕಾರಿಯಲ್ಲಿ ಇದ್ದು, ಎಲ್ಲ ತರಹದ ಸಾಲ ವಿತರಣೆ ಮಾಡುತ್ತಿದ್ದೇವೆ’ ಎಂದು ಹೇಳಿದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ವಿ.ಹೇಮಂತ ಆಡಳಿತ ವರದಿ ವಾಚಿಸಿ, ಶೇಕಡ 15 ಡಿವಿಡೆಂಡ್ ಘೋಷಿಸಿದರು.
ಉಪಾಧ್ಯಕ್ಷೆ ಎಂ.ಸುನೀತಾ, ನಿರ್ದೇಶಕರಾದ ಎಂ.ಕೀರ್ತನ್ ಕುಮಾರ್, ಎಂ.ವರುಣ್ ಕುಮಾರ್ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿದರು. ರಾಜ್ಯ ಕೋ–ಆಪರೇಟಿವ್ ಸೊಸೈಟಿಗಳ ಅಧ್ಯಕ್ಷ ವೈ.ಕುಮಾರ್, ಸೌಹಾರ್ದ ಫೆಡರಲ್‌ನ ಅಭಿವೃದ್ಧಿ ಅಧಿಕಾರಿ ರವಿಪ್ರಸಾದ್, ನೆಲಮಂಗಲ ಶಾಖಾಧಿಕಾರಿ ಮಹಾಂತೇಶ್ ಎಂ.ನೆಗಳೂರ, ಪುತ್ತೂರಿನ ಶ್ಯಾಮಲಾ, ಚಿಕ್ಕಬಾಣಾವರದ ಗಂಗಾ ತಿಲಕ್, ಚಿನ್ನಮ್ಮ, ಭರತ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.