ಬೆಂಗಳೂರು: ‘ದೇಶದಲ್ಲಿ ನೆಲ, ಜಲ ಎಲ್ಲವೂ ಕಲುಷಿತವಾದಂತೆ ಜನರ ಮನಸ್ಸಿನಲ್ಲೂ ವಿಷಕಾರಿ ಚಿಂತನೆ ಬಿತ್ತಲಾಗುತ್ತಿದೆ’ ಎಂದು ಲೇಖಕಿ ಡಾ.ಕೆ.ಶರೀಫಾ ಕಳವಳ ವ್ಯಕ್ತಪಡಿಸಿದರು.
ಭೀಮ್ ಆರ್ಮಿ ಬೆಂಗಳೂರು ನಗರ ಜಿಲ್ಲಾ ಸಮಿತಿಯು ಸಾವಿತ್ರಿಬಾಯಿ ಫುಲೆ ಅವರ 192ನೇ ಜನ್ಮದಿನಾಚರಣೆ ಹಾಗೂ ಮಹಿಳೆಯರ ಹಕ್ಕುಗಳ ಕುರಿತು ಸಂವಾದದಲ್ಲಿ ಅವರು ಮಾತನಾಡಿದರು.
‘ಮಾನವೀಯ ವಿಚಾರ ಹಾಗೂ ಮಹಿಳಾ ಹಕ್ಕುಗಳ ಕುರಿತು ಸಾವಿತ್ರಿಬಾಯಿ ಫುಲೆ ಮೊದಲು
ಧ್ವನಿಯೆತ್ತಿದ್ದರು. ರಾಜರ ಆಳ್ವಿಕೆಯ ಕಾಲದಲ್ಲಿಯೇ ಫುಲೆ ಅವರು ಸ್ವದೇಶಿ ಕಲ್ಪನೆಯ ಬಗ್ಗೆ ಮಾತನಾಡಿದ್ದರು. ಇಂದು ವಿದ್ಯಾರ್ಥಿನಿಯರು ಆತ್ಮಸ್ಥೈರ್ಯದಿಂದ ಶಿಕ್ಷಣ ಪಡೆಯುತ್ತಿದ್ದಾರೆ ಎಂದರೆ ಅವರ ಹೋರಾಟವೇ ಕಾರಣ’ ಎಂದು ಪ್ರತಿಪಾದಿಸಿದರು.
ವೈದ್ಯೆ ಸರೋಜಾ ಮಾತನಾಡಿ, ‘ಫುಲೆ ಅವರು ಹೊತ್ತಿಸಿದ ಕಿಡಿ ಇಂದು ಅಕ್ಷರದ ಕ್ರಾಂತಿಯಾಗುತ್ತಿದೆ. ಶಿಕ್ಷಕರದ್ದು ಬರೀ ವೃತ್ತಿಯಲ್ಲ. ಅದು ಸಮಾಜದಲ್ಲಿ ಬದಲಾವಣೆ ತರುವ ಕಾಯಕ ಎಂದು ತೋರಿಸಿಕೊಟ್ಟವರು’ ಎಂದು ಹೇಳಿದರು.
ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕಿ ಎಂ.ಎಸ್.ಆಶಾದೇವಿ ಮಾತನಾಡಿ, ‘ವಿಚಾರಗಳನ್ನು ಮರೆಯುತ್ತಿದ್ದೇವೆ. ಮೌಲ್ಯಗಳು ಕಣ್ಮರೆಯಾಗುತ್ತಿವೆ. ಈ ಸೋಲಿನ ಹೊಣೆಗಾರರು ನಾವೇ. ಸಾವಿತ್ರಿಬಾಯಿ ಫುಲೆ ಅವರು ಮಹಿಳಾ ಶಕ್ತಿ ತೋರಿಸಿಕೊಟ್ಟಿದ್ದಾರೆ. ನಮ್ಮ ಉದ್ಧಾರವನ್ನು ನಾವೇ ಮಾಡಿಕೊಳ್ಳುತ್ತೇವೆ’ ಎಂದು ಹೇಳಿದರು.
ಬಹುಮಾಧ್ಯಮ ತಜ್ಞೆ ಶಮಂತಾ, ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ಪ್ರೊ.ಕಾವಲಮ್ಮ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.