ADVERTISEMENT

ವಿಧಾನಸೌಧಕ್ಕೆ ಪ್ರತ್ಯೇಕ ಶ್ವಾನದಳ ರಚನೆಗೆ ಪ್ರಸ್ತಾವ: ಯು.ಟಿ. ಖಾದರ್‌

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2024, 19:15 IST
Last Updated 9 ಮಾರ್ಚ್ 2024, 19:15 IST
<div class="paragraphs"><p>ಯು.ಟಿ. ಖಾದರ್‌</p></div>

ಯು.ಟಿ. ಖಾದರ್‌

   

ಬೆಂಗಳೂರು: ವಿಧಾನಸೌಧದ ಆವರಣದಲ್ಲಿ ಸ್ಫೋಟಕಗಳ ಪತ್ತೆಯೂ ಸೇರಿದಂತೆ ದುಷ್ಕೃತ್ಯಗಳನ್ನು ತಡೆಯುವುದಕ್ಕಾಗಿ ಪ್ರತ್ಯೇಕ ಶ್ವಾನದಳ ರಚಿಸಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲು ವಿಧಾನಸಭೆಯ ಅಧ್ಯಕ್ಷ ಯು.ಟಿ. ಖಾದರ್‌ ನಿರ್ಧರಿಸಿದ್ದಾರೆ.

ರಾಮೇಶ್ವರ ಕೆಫೆಯಲ್ಲಿ ಬಾಂಬ್‌ ಸ್ಫೋಟ ಸಂಭವಿಸಿದ ಪ್ರಕರಣದ ಬಳಿಕ ಸ್ಪೀಕರ್‌ ಈ ನಿರ್ಧಾರಕ್ಕೆ ಬಂದಿದ್ದಾರೆ. ಆರ್‌ಡಿಎಕ್ಸ್‌ ಸೇರಿದಂತೆ ಯಾವುದೇ ಬಗೆಯ ಸ್ಫೋಟಕವನ್ನು ಪತ್ತೆ ಮಾಡುವ ತರಬೇತಿ ಪಡೆದಿರುವ ಶ್ವಾನಗಳನ್ನು ಬಳಸಿಕೊಳ್ಳುವ ಪ್ರಸ್ತಾವವಿದೆ.

ADVERTISEMENT

ಶ್ವಾನಗಳನ್ನು ಬಳಸಿಕೊಂಡು ಸ್ಫೋಟಕ ಪತ್ತೆಮಾಡುವ ಪ್ರಾತ್ಯಕ್ಷಿಕೆಯನ್ನು ವಿಧಾನಸೌಧದ ಆವರಣದಲ್ಲಿ ಮಂಗಳವಾರ ನಡೆಸಲಾಯಿತು. ‘ಡಾಗ್‌ಗುರು’ ಕಂಪನಿಯ ಅಮೃತ್‌ ಶ್ರೀಧರ್‌ ಹಿರಣ್ಯ ತಮ್ಮ ಶ್ವಾನವನ್ನು ಬಳಸಿಕೊಂಡು ಪ್ರಾತ್ಯಕ್ಷಿಕೆ ನೀಡಿದರು. ಖಾದರ್‌ ಮತ್ತು ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಮತ್ತು ವಿಧಾನಸಭೆಯ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ ಉಪಸ್ಥಿತರಿದ್ದರು.

ಈ ಕುರಿತು ‘ಪ್ರಜಾವಾಣಿ’ಗೆ ‍ಪ್ರತಿಕ್ರಿಯಿಸಿದ ಖಾದರ್‌, ‘ಮೊದಲ ಅಧಿವೇಶನದಲ್ಲಿ ಆಗಂತುಕನೊಬ್ಬ ವಿಧಾನಸಭೆ ಪ್ರವೇಶಿಸಿದಾಗಲೇ ವಿಧಾನಸೌಧದ ಭದ್ರತೆ ಹೆಚ್ಚಳಕ್ಕೆ ಸೂಚಿಸಲಾಗಿತ್ತು. ಇನ್ನೂ ಸರಿಯಾಗಿ ಅನುಷ್ಠಾನಕ್ಕೆ ಬಂದಿಲ್ಲ. ಈಗ ಬಿಗಿಯಾದ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯವಾಗಿದೆ’ ಎಂದರು.

‘ವಿಧಾನಸೌಧದ ಆವರಣದಲ್ಲಿ ಸ್ಫೋಟಕ ಇಡುವುದು ಸೇರಿದಂತೆ ಯಾವುದೇ ಬಗೆಯ ದುಷ್ಕೃತ್ಯ ಎಸಗಲು ಅವಕಾಶವೇ ಇಲ್ಲದಂತಹ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಬೇಕು. ಸ್ಫೋಟಕ ಹಿಡಿದು ಒಳಕ್ಕೆ ಬಂದಾಕ್ಷಣವೇ ಪತ್ತೆಮಾಡಬಲ್ಲ ಸಾಮರ್ಥ್ಯದ ಶ್ವಾನಗಳನ್ನು ಬಳಸಿಕೊಳ್ಳುವ ಯೋಚನೆ ಇದೆ’ ಎಂದು ತಿಳಿಸಿದರು.

ಗುತ್ತಿಗೆ ಆಧಾರದಲ್ಲಿ ಶ್ವಾನದಳದ ಸೇವೆಯನ್ನು ಪಡೆಯುವ ಪ್ರಸ್ತಾವವನ್ನು ಸಲ್ಲಿಸಲಾಗುವುದು. ಒಪ್ಪಿಗೆ ದೊರೆತ ಬಳಿಕ ವಿಧಾನಸೌಧಕ್ಕೆ ಪ್ರತ್ಯೇಕ ಶ್ವಾನದಳ ರಚಿಸಲಾಗುವುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.